ನವದೆಹಲಿ: ದೇಶದಲ್ಲಿ ಹೆಚ್ಚುತ್ತಿರುವ ಮಾಲಿನ್ಯದಿಂದಾಗಿ ಉಸಿರಾಟ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳ ಸಂಖ್ಯೆ ನಿರಂತರವಾಗಿ ಅಧಿಕವಾಗುತ್ತಿದೆ. ಈ ರೋಗಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಅವುಗಳಿಗೆ ಪರಿಹಾರಗಳನ್ನು ಕಂಡು ಹಿಡಿಯಲು ದೆಹಲಿಯಲ್ಲಿ ಇಂಡಿಯನ್ ಚೆಸ್ಟ್ ಸೊಸೈಟಿ ತನ್ನ 25ನೇ 'ನ್ಯಾಪ್‌ಕಾನ್' ರಾಷ್ಟ್ರೀಯ ಸಮ್ಮೇಳನ ಆಯೋಜಿಸಿದೆ.
ಶ್ವಾಸಕೋಶದ ಕಾಯಿಲೆಗಳ ರಾಷ್ಟ್ರೀಯ ಸಮ್ಮೇಳನವನ್ನು ರಾಜ್ಯಸಭಾ ಉಪ ಸಭಾಪತಿ ಹರಿವಂಶ್ ಉದ್ಘಾಟಿಸಿದರು. ಪ್ರಮುಖ ಶ್ವಾಸಕೋಶಶಾಸ್ತ್ರಜ್ಞರು ಇಂಟರ್ವೆನ್ಷನಲ್ ಪಲ್ಮನಾಲಜಿ, ಪರಿಸರ ಮಾಲಿನ್ಯ, ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆ (ಸಿಒಪಿಡಿ) ಮತ್ತು ಅಸ್ತಮಾ ಸೇರಿದಂತೆ ಉಸಿರಾಟ ಸಂಬಂಧಿ ಕಾಯಿಲೆಗಳಿಗೆ ಮಾರ್ಗೋಪಾಯಗಳ ಕಂಡುಕೊಳ್ಳುವ ಬಗ್ಗೆ ಪ್ರಮುಖ ಶ್ವಾಸಕೋಶ ಶಾಸ್ತ್ರಜ್ಞರು ಚರ್ಚಿಸಿದ್ದಾರೆ.
ಕಾರ್ಯಕ್ರಮದ ಆಯೋಜನಾ ಸಮಿತಿ ಅಧ್ಯಕ್ಷ ಶ್ವಾಸಕೋಶ ತಜ್ಞ ಡಾ.ರಾಕೇಶ ಚಾವ್ಲಾ ಮಾತನಾಡಿ, ಉಸಿರಾಟದ ಸಮಸ್ಯೆ ನಿಯಂತ್ರಿಸಲು ಸರ್ಕಾರ 'ಒಂದು ಕುಟುಂಬ, ಒಂದು ವಾಹನ' ಅಥವಾ 'ಒಂದು ಕುಟುಂಬ, ಎರಡು ವಾಹನ' ಎಂಬ ನೀತಿ ರೂಪಿಸಿ, ಅದನ್ನು ಪಾಲಿಸುವಂತೆ ನೋಡಿಕೊಳ್ಳಬೇಕು. ಈ ಸಮಾವೇಶದ ಮೂಲಕ ಉಸಿರಾಟ ಸಂಬಂಧಿ ಕಾಯಿಲೆಗಳ ತಡೆಗೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸುತ್ತೇವೆ ಎಂದು ಹೇಳಿದರು.
ಇಂಡಿಯನ್ ಚೆಸ್ಟ್ ಸೊಸೈಟಿಯ ಅಧ್ಯಕ್ಷ ಡಾ. ಡಿ.ಜೆ.ರಾಯ್ ಮಾತನಾಡಿ, ದೇಶದಲ್ಲಿ ರೋಗಗಳು ಸಾರ್ವಜನಿಕ ಆರೋಗ್ಯದ ಪ್ರಮುಖ ಸವಾಲುಗಳು ಆಗಿದ್ದು, ಉಸಿರಾಟದ ಸೋಂಕುಗಳು, ಸಿಒಪಿಡಿ ಮತ್ತು ಶ್ವಾಸಕೋಶದ ಕ್ಯಾನ್ಸರ್ ಪ್ರಕರಣಗಳು ಹೆಚ್ಚು ವರದಿ ಆಗುತ್ತಿವೆ ಎಂದರು. ನಿದ್ರಾಹೀನತೆಯ ಪರಿಣಾಮದ ಕುರಿತು ಸೊಸೈಟಿಯ ಕಾರ್ಯದರ್ಶಿ ಡಾ.ರಾಜೇಶ್ ಸ್ವರ್ಣಕರ್ ಪ್ರತಿಕ್ರಿಯಿಸಿ, ದೇಶದಲ್ಲಿ ನಿದ್ರೆಯಲ್ಲಿ ಉಸಿರುಕಟ್ಟುವಿಕೆ ಸಾಮಾನ್ಯವಾದ ಉಸಿರಾಟದ ಕಾಯಿಲೆಯಾಗಿದೆ. ಇದು ಸುಮಾರು ಶೇ.18ರಷ್ಟು ಜನರನ್ನು ಬಾಧಿಸುತ್ತದೆ. ಈ ರೀತಿ ನಿದ್ರೆಯಲ್ಲಿ ಉಸಿರುಕಟ್ಟುವಿಕೆಗೆ ಕಾರಣವಾಗುವ ಅಂಶಗಳೆಂದರೆ ಬೊಜ್ಜು, ಧೂಮಪಾನ ಮತ್ತು ಮದ್ಯಪಾನ ಎಂದು ವಿವರಿಸಿದರು.
ದೇಶದಲ್ಲಿ 6.5 ಕೋಟಿ ಸಿಒಪಿಡಿ ರೋಗಿಗಳು:ಭಾರತೀಯ ಚೆಸ್ಟ್ ಸೊಸೈಟಿಯ ಚುನಾಯಿತ ಕಾರ್ಯದರ್ಶಿ ಡಾ.ರಾಜಾ ಧರ್ ಮಾತನಾಡಿ, ದೇಶದಲ್ಲಿ 6.5 ಕೋಟಿ ಸಿಒಪಿಡಿ ರೋಗಿಗಳಿದ್ದಾರೆ. ಇದಲ್ಲದೇ ಸುಮಾರು 3.5 ಕೋಟಿ ಜನರು ಅಸ್ತಮಾದಿಂದ ಬಳಲುತ್ತಿದ್ದಾರೆ. ಈ ರೀತಿಯಾಗಿ, ಹತ್ತು ಕೋಟಿ ಜನರು ಸಿಒಪಿಡಿ ಮತ್ತು ಅಸ್ತಮಾ ಸೇರಿದಂತೆ ದೀರ್ಘಕಾಲದ ಉಸಿರಾಟದ ಕಾಯಿಲೆಗಳನ್ನು ಹೊಂದಿದ್ದಾರೆ. ಜಗತ್ತಿನಲ್ಲಿ ಅಸ್ತಮಾದಿಂದ ಸಂಭವಿಸುವ ಸಾವುಗಳಲ್ಲಿ ಶೇ.43ರಷ್ಟು ಸಾವುಗಳು ಭಾರತದಲ್ಲಿ ಸಂಭವಿಸುತ್ತವೆ ಎಂದು ಮಾಹಿತಿ ನೀಡಿದರು. ಮುಂದುವರೆದು ಅವರು, ಟಿಬಿ, ನ್ಯುಮೋನಿಯಾ ಸೇರಿದಂತೆ ಹಲವು ಶ್ವಾಸಕೋಶದ ಕಾಯಿಲೆಗಳೂ ದೊಡ್ಡ ಸಮಸ್ಯೆಗಳಾಗಿವೆ. ಒಪಿಡಿಯಲ್ಲಿರುವ ಜನರಲ್ ಮೆಡಿಸಿನ್ ವೈದ್ಯರ ಬಳಿ ಹತ್ತರಲ್ಲಿ ಆರು ರೋಗಿಗಳು ಉಸಿರಾಟದ ಕಾಯಿಲೆಗಳೊಂದಿಗೆ ಬರುತ್ತಾರೆ ಎಂದು ತಿಳಿಸಿದರು.
ಸಿಒಪಿಡಿಗೆ ಕಾರಣ?: ಡಾ.ರಾಕೇಶ್ ಚಾವ್ಲಾ ಮಾತನಾಡಿ, ಗ್ರಾಮಗಳಲ್ಲಿ ಮತ್ತು ಸಣ್ಣ ಪಟ್ಟಣಗಳಲ್ಲಿ ಧೂಮಪಾನ ಹಾಗೂ ಕೆಟ್ಟ ಹೊಗೆ ಸಿಒಪಿಡಿ ಹಾಗೂ ಅಸ್ತಮಾದಂತಹ ಕಾಯಿಲೆಗಳಿಗೆ ಪ್ರಮುಖ ಕಾರಣವಾಗಿದೆ. ಇದಲ್ಲದೇ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವಾಹನಗಳ ಸಂಖ್ಯೆಯಿಂದಾಗಿ ಮಾಲಿನ್ಯದ ಮಟ್ಟವು ಜೀವಕ್ಕೆ ಅಪಾಯವನ್ನುಂಟು ಮಾಡುವ ಹಂತಕ್ಕೆ ತಲುಪುತ್ತಿದೆ ಎಂದರು.
ಈ ಎರಡು ತಿಂಗಳ ಅವಧಿಯಲ್ಲಿ ದೆಹಲಿಯ ಗಾಳಿಯ ಗುಣಮಟ್ಟ ತುಂಬಾ ಕೆಟ್ಟದಾಗಿದೆ. ಇದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಉಸಿರಾಟದ ರೋಗಿಗಳಾಗುತ್ತಿದ್ದಾರೆ. ದೆಹಲಿಯಲ್ಲಿ ಮಾಲಿನ್ಯಕ್ಕೆ ಪ್ರಮುಖ ಕಾರಣವೆಂದರೆ ವಾಹನಗಳ ಸಂಚಾರ. ಒಂದೇ ಕುಟುಂಬಕ್ಕೆ ಅನೇಕ ಕಾರುಗಳು ಹೊಂದಿರುವ ಹಲವು ಕುಟುಂಬಗಳು ದೆಹಲಿಯಲ್ಲಿವೆ. ಪ್ರತಿಯೊಬ್ಬ ಸದಸ್ಯರು ವೈಯಕ್ತಿಕ ಕಾರು ಹೊಂದಿದ್ದಾರೆ. ಇದನ್ನು ನಿಯಂತ್ರಿಸಲು ನೀತಿ ರೂಪಿಸುವ ಅಗತ್ಯವಿದೆ. ಅಲ್ಲದೇ, ಕಾರ್ ಪೂಲಿಂಗ್ನಂತಹ ವ್ಯವಸ್ಥೆ ಬೆಳೆಸಬೇಕಿದೆ. ಇದರಿಂದ ಶೇ.50ರಷ್ಟು ಮಾಲಿನ್ಯ ತಗ್ಗಿಸಬಹುದು. ಇದಲ್ಲದೇ ಸಿಗರೇಟ್, ಬೀಡಿ ಉತ್ಪಾದನೆ ಹಾಗೂ ಧೂಮಪಾನವನ್ನೂ ಸರ್ಕಾರ ನಿಷೇಧಿಸಬೇಕು ಎಂದು ಹೇಳಿದರು.
ಇದನ್ನೂ ಓದಿ:ತಾಯಿಗೆ ಮಾತ್ರವಲ್ಲ.. ತಂದೆಗೂ ಕಾಡುತ್ತಾ ಪ್ರಸವಪೂರ್ವ ಖಿನ್ನತೆ?