ನ್ಯೂಯಾರ್ಕ್(ಅಮೆರಿಕ): ಮಹಿಳೆಯರನ್ನು ಬಾಧಿಸುವ ಹಲವಾರು ಆರೋಗ್ಯ ಸಮಸ್ಯೆಗಳಲ್ಲಿ ಸ್ತನ ಕ್ಯಾನ್ಸರ್ ಕೂಡ ಒಂದು. ಇತ್ತೀಚಿನ ದಿನಗಳಲ್ಲಿ ಸ್ತನದ ಕ್ಯಾನ್ಸರ್ ಸಾಮಾನ್ಯ ಎನ್ನುವಂತಾಗಿದ್ದು, ಸ್ತನದ ಅಂಗಾಂಶಗಳಲ್ಲಿ ಕ್ಯಾನ್ಸರ್ ಜೀವಕೋಶಗಳು ರೂಪಿತವಾಗುತ್ತವೆ. ಇದಕ್ಕೆ ಸಂಬಂಧಿಸಿದಂತೆ ಮೇಯೊ ಕ್ಲಿನಿಕ್ ಸಮಗ್ರ ಕ್ಯಾನ್ಸರ್ ಸೆಂಟರ್ ಅಧ್ಯಯನವೊಂದನ್ನು ನಡೆಸಿದ್ದು, ಅಘಾತಕಾರಿ ಅಂಶವನ್ನು ತಿಳಿಸಿದೆ.
ಮೇಯೊ ಕ್ಲಿನಿಕ್ ಸಮಗ್ರ ಕ್ಯಾನ್ಸರ್ ಸೆಂಟರ್ ನಡೆಸಿದ ಅಧ್ಯಯನದ ಆವಿಷ್ಕಾರಗಳನ್ನು ಜರ್ನಲ್ ಆಫ್ ಕ್ಲಿನಿಕಲ್ ಆಂಕೊಲಾಜಿಯಲ್ಲಿ ಪ್ರಕಟಿಸಲಾಗಿದೆ. ಇದರಲ್ಲಿ 'ಒಂದು ಸ್ತನದಲ್ಲಿ ಕ್ಯಾನ್ಸರ್ ಹೊಂದಿರುವ ಮಹಿಳೆಯರು ನಿರ್ದಿಷ್ಟ ಆನುವಂಶಿಕ ಬದಲಾವಣೆಗಳನ್ನು ಹೊಂದಿದ್ದಲ್ಲಿ ಅವರ ಇನ್ನೊಂದು ಸ್ತನದಲ್ಲೂ ಕ್ಯಾನ್ಸರ್ ಬರುವ ಸಾಧ್ಯತೆಯಿದೆ' ಎಂದು ತಿಳಿಸಿದೆ.
Cancer Risk Estimates Related to Susceptibility (CARRIERS) ಒಕ್ಕೂಟಕ್ಕೆ ಸಂಬಂಧಿಸಿದ ಸುಮಾರು 15,104 ಮಹಿಳೆಯರ ಡೇಟಾವನ್ನು ಈ ಅಧ್ಯಯನಕ್ಕೆ ಬಳಸಿಕೊಳ್ಳಲಾಗಿದೆ. ಜರ್ಮ್‌ಲೈನ್ BRCA1, BRCA2 ಅಥವಾ CHEK2 ರೂಪಾಂತರವನ್ನು ಹೊಂದಿರುವ ರೋಗಿಗಳು ಎರಡೂ ಸ್ತನಗಳಲ್ಲಿ ಕ್ಯಾನ್ಸರ್ ಹಬ್ಬಿಸುವ ಅಪಾಯವನ್ನು ಎರಡು ಪಟ್ಟು ಹೆಚ್ಚು ಹೊಂದಿರುತ್ತಾರೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಜೊತೆಗೆ PALB2 ವಾಹಕಗಳಲ್ಲಿ ಈಸ್ಟ್ರೊಜೆನ್ ರಿಸೆಪ್ಟರ್-ನೆಗಿಟಿವ್ ಕಾಯಿಲೆ ಇರುವವರಲ್ಲಿ ಸಹ ವ್ಯತಿರಿಕ್ತ ಸ್ತನ ಕ್ಯಾನ್ಸರ್ ಅಪಾಯವು ಗಮನಾರ್ಹವಾಗಿ ಹೆಚ್ಚಾಗುತ್ತದೆ ಎಂದು ತಿಳಿಸಿದ್ದಾರೆ.
'ಜರ್ಮ್‌ಲೈನ್ ರೂಪಾಂತರಗಳನ್ನು ಹೊಂದಿರುವ ಸ್ತನ ಕ್ಯಾನ್ಸರ್‌ಗೆ ಒಳಗಾದ ಹೆಚ್ಚಿನ ರೋಗಿಗಳು, ಅವರ ಮತ್ತೊಂದು ಸ್ತನದಲ್ಲೂ ಕ್ಯಾನ್ಸರ್ ವ್ಯಾಪಿಸಿಕೊಳ್ಳುವ ಹೆಚ್ಚಿನ ಅಪಾಯವಿದೆ' ಎಂದು ಮೇಯೊ ಕ್ಲಿನಿಕ್ ಸಮಗ್ರ ಕ್ಯಾನ್ಸರ್ ಸೆಂಟರ್ನ ಎಂಡಿ ಸಿದ್ಧಾರ್ಥ ಯಾದವ್ ತಿಳಿಸಿದ್ದಾರೆ.