ಮಲಬದ್ದತೆ ಎಂಬುದು ಮಕ್ಕಳಲ್ಲಿ ಸಾಮಾನ್ಯ ಸಂಗತಿ. ಮಕ್ಕಳು ಕ್ರಿಯಾಶೀಲರಾಗಿದ್ದು, ಯಾವುದೇ ಸಮಸ್ಯೆ ಇಲ್ಲದಿದ್ದಾಗಲೂ ಕೆಲವು ಬಾರಿ ಈ ಸಮಸ್ಯೆ ಕಾಡುತ್ತದೆ. ಹೊಟ್ಟೆ ಬಿಗಿತನ, ಮಲ ವಿಸರ್ಜನೆಗೆ ಕಷ್ಟ ಅಥವಾ ಕೆಲವೊಮ್ಮೆ ಮಕ್ಕಳು ಮೂರು ದಿನಗಳಾದರೂ ಮಲ ವಿಸರ್ಜನೆ ಮಾಡುವುದಿಲ್ಲ. ಇದರಿಂದ ಮಗು ಕಿರಿ ಕಿರಿ ಅನುಭವಿಸಿ ಪೋಷಕರಲ್ಲೂ ಆತಂಕ ಮೂಡಿಸುತ್ತದೆ. ಈ ವೇಳೆ ಅನೇಕ ಬಾರಿ ತಕ್ಷಣ ವೈದ್ಯರ ಬಳಿ ಓಡಿ ಹೋಗುತ್ತೇವೆ. ಇಂತಹ ಸಮಸ್ಯೆಗೆ ಕೆಲವು ಸರಳ ಪರಿಹಾರಗಳಿವೆ.
ದೊಡ್ಡವರಲ್ಲಿ ಕಾಡುವ ಈ ಮಲಬದ್ಧತೆಗೆ ಕೆಲವು ಬಾರಿ ವ್ಯಾಯಾಮಗಳು ಪರಿಹಾರ ನೀಡುವುದನ್ನು ಕಾಣಬಹುದು. ಅದೇ ಮಕ್ಕಳಲ್ಲಿ ವ್ಯಾಯಾಮ ಹೇಗೆ ಎಂಬ ಚಿಂತೆ ಅನೇಕರಲ್ಲಿ ಕಾಡುತ್ತದೆ. ಮಕ್ಕಳು ಯಾವ ರೀತಿ ವ್ಯಾಯಾಮ ಮಾಡಲು ಸಾಧ್ಯ ಎಂಬ ಪ್ರಶ್ನೆಯೂ ಸಹಜ. ಇದಕ್ಕೆ ಮಾಡಬೇಕಿರುವ ಕೆಲಸವೆಂದರೆ, ಮಗುವನ್ನು ಮಲಗಿಸಿ ಕಾಲನ್ನು ಎರಡು ಕೈಗಳಿಂದ ಹಿಡಿದು ಸೈಕಲ್ ರೀತಿ ಆಡಿಸುವುದಾಗಿದೆ. ಈ ರೀತಿ ಮಾಡುವುದರಿಂದ ಮಗುವಿನ ಹೊಟ್ಟೆಯಲ್ಲಿ ಆಗುವ ಉಬ್ಬರ ಕಡಿಮೆ ಆಗುತ್ತದೆ.
ಮಕ್ಕಳಿಗೆ ಚೆನ್ನಾಗಿ ಬಿಸಿ ನೀರಿನಿಂದ ಸ್ನಾನ ಮಾಡಿಸುವುದರಿಂದಲೂ ಪರಿಹಾರ ಕಂಡು ಕೊಳ್ಳಬಹುದು. ಇದರಿಂದ ದೇಹದ ಎಲ್ಲಾ ಭಾಗಗಳು ಕ್ರಿಯಾಶೀಲವಾಗಿ ಹೊಟ್ಟೆ ಖಾಲಿ ಆಗುತ್ತದೆ. ಇದರಿಂದ ಹೊಟ್ಟೆಯಲ್ಲಿ ಕಾಡುವ ನೋವು ಕೂಡ ಮಾಯವಾಗುತ್ತದೆ.