ಮನುಷ್ಯನಿಗೆ ಮಾನಸಿಕ ಒತ್ತಡಗಳು ಹೆಚ್ಚು. ಕೆಲವೊಮ್ಮೆ ಅದೇ ಒತ್ತಡಗಳು ಭಾರವೆನಿಸಿದಾಗ ಖಿನ್ನತೆಗೆ ಒಳಗಾಗುತ್ತೇವೆ. ಹೆಚ್ಚಿನ ಕೆಲಸಗಳು, ಕೆಲವೊಮ್ಮೆ ಚುಚ್ಚು ಮಾತುಗಳು ಅಥವಾ ಇನ್ನಿತರ ಯಾವುದೋ ಕಾರಣಗಳಿಂದಾಗಿ ಮನುಷ್ಯ ಡಿಪ್ರೆಶನ್ಗೆ ಹೋಗುತ್ತಾನೆ. ಆದರೆ, ಇಂತಹ ಖಿನ್ನತೆಗಳು ನಿಮ್ಮ ಬಳಿ ಸುಳಿಯದಂತೆ ನೀವು ನೋಡಿಕೊಳ್ಳಬೇಕಾದರೆ ಮಾಡಬೇಕಾದದ್ದೇನು? ಮಾನಸಿಕ ಆರೋಗ್ಯಕ್ಕೆ ಸರಳ ಮತ್ತು ಪರಿಣಾಮಕಾರಿ ಉಪಾಯವನ್ನು ಮೊನಾಶ್ ವಿಶ್ವವಿದ್ಯಾಲಯದ ಸಂಶೋಧಕರು ಕಂಡು ಹಿಡಿದಿದ್ದಾರೆ.
ನಾವು ಬೆಳಗ್ಗೆ ಎದ್ದಾಗಿನಿಂದ ಸೂರ್ಯನ ಬೆಳಕನ್ನೇ ಕಾಣುತ್ತೇವೆ. ಸಂಜೆಯವರೆಗೂ ಅದೇ ಬೆಳಕಿನ ನಡುವೆ ನಮ್ಮ ಕೆಲಸಗಳು ಮುಗಿಯುತ್ತವೆ. ರಾತ್ರಿಯಾಗುತ್ತಿದ್ದಂತೆ ಮೊಬೈಲ್, ಲ್ಯಾಪ್ಟಾಪ್ ಹಿಡಿದು ಕುಳಿತು ಬಿಡುತ್ತೇವೆ. ಅಲ್ಲೂ ಕೃತಕ ಬೆಳಕನ್ನು ಬಳಸಿಕೊಳ್ಳುತ್ತೇವೆ. ಸಂಜೆಯಾಗುತ್ತಿದ್ದಂತೆ ಮನೆಯೆಲ್ಲಾ ಲೈಟ್ ಉರಿಸಿ ಸೂರ್ಯನ ಬೆಳಕಿಗಿಂತ, ಕೃತಕ ಬೆಳಕಿನ ಮಧ್ಯೆಯೇ ಹೆಚ್ಚು ಸಮಯ ಕಳೆಯುತ್ತೇವೆ. ಆದರೆ, ಇದೇ ನಿಮ್ಮನ್ನು ಖಿನ್ನತೆಯತ್ತ ದೂಡುವಲ್ಲಿ ಯಶಸ್ವಿಯಾಗುತ್ತದೆ. ಹಾಗಾಗಿ ನೀವು ಹೆಚ್ಚು ನೈಸರ್ಗಿಕ ಬೆಳಕಿನಲ್ಲಿ ಕಾಲ ಕಳೆಯುವುದು ಸೂಕ್ತ ಎನ್ನುತ್ತಾರೆ ಸಂಶೋಧಕರು.
ದೇಹದ ಜೈವಿಕ ಗಡಿಯಾರವು ನಮ್ಮ ಆರೋಗ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನೈಸರ್ಗಿಕ ಬೆಳಕಿನ ಮೇಲೆ ಇದು ನಮ್ಮನ್ನು ನಿಯಂತ್ರಿಸುತ್ತದೆ. ವ್ಯಾಯಾಮ, ನಾವು ಮಾಡುವ ಕೆಲಸಗಳು ಜೈವಿಕ ಗಡಿಯಾರದ ಮೇಲೆ ಪರಿಣಾಮ ಬೀರುತ್ತವೆಯಾದರೂ, ಪ್ರಮುಖವಾಗಿ ಪರಿಣಾಮ ಬೀರುವುದು ಬೆಳಕು ಮಾತ್ರ. ಅನೇಕ ಮಾನಸಿಕ ಸಮಸ್ಯೆಗಳಿಗೆ ಸರ್ಕಾಡಿಯನ್ ಗಡಿಯಾರವೇ ಅಡ್ಡಿಯಾಗುತ್ತದೆ. ಆದ್ದರಿಂದ ಡಿಪ್ರೆಶನ್ ಅನ್ನೋದು ಬಹುಬೇಗನೆ ಮನುಷ್ಯನಿಗೆ ಒಗ್ಗಿಬಿಡುತ್ತದೆ. ಇದನ್ನು ಮನಸ್ಸಿನಲ್ಲಿಟ್ಟುಕೊಂಡು ಮೊನಾಶ್ ವಿಶ್ವವಿದ್ಯಾಲಯದ ಸಂಶೋಧಕರು ಮಾನಸಿಕ ಅಸ್ವಸ್ಥತೆಯ ಮೇಲೆ ರಾತ್ರಿ ಮತ್ತು ಹಗಲು ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದರ ಕುರಿತು ಬಹುದೊಡ್ಡ ಅಧ್ಯಯನ ನಡೆಸಿದ್ದಾರೆ.