ವಿಜಯವಾಡ (ಆಂಧ್ರಪ್ರದೇಶ): ವೈದ್ಯೋ ನಾರಾಯಣ ಹರಿ ಎಂಬ ಮಾತು ಅನೇಕರ ಪಾಲಿಗೆ ನಿಜವಾಗಿದೆ. ಅಂತಹದ್ದೇ ಒಂದು ಘಟನೆ ಕೃಷ್ಣ ಜಿಲ್ಲೆಯ ಗುಡ್ಲವಲ್ಲೇರು ಪ್ರದೇಶದ ವ್ಯಕ್ತಿಗೆ ಆಗಿದೆ. ಎದೆ, ಪಕ್ಕೆಲುಬಿಗೆ ಬಿದಿರು ಹೊಕ್ಕಿ ಇನ್ನೇನು ಬದುಕಲು ಸಾಧ್ಯವಿಲ್ಲ ಎಂಬ ವ್ಯಕ್ತಿ ಇದೀಗ ವೈದ್ಯರ ಚಿಕಿತ್ಸೆಯ ಫಲಿವಾಗಿ ಮರು ಜನ್ಮ ಪಡೆದಿದ್ದಾರೆ. ವಿಜಯವಾಡದ ಆಯುಷ್ ಆಸ್ಪತ್ರೆಯ ವೈದ್ಯರು ಅಪರೂಪದ ಸರ್ಜರಿ ನಡೆಸುವ ಮೂಲಕ ರೋಗಿಯ ಜೀವ ಉಳಿಸಿದ್ದಾರೆ.
ಏನಿದು ಘಟನೆ:ಗುಡ್ಲುವಲ್ಲೇರು ಪ್ರದೇಶದ 50 ವರ್ಷದ ವೆಂಕಟೇಶ್ವರ ರಾವ್ ಎಂಬ ವ್ಯಕ್ತಿ ಎರಡು ತಿಂಗಳ ಹಿಂದೆ ಮರದಿಂದ ಕೆಳಗೆ ಬಿದ್ದಿದ್ದರು. ಈ ವೇಳೆ ಅವರ ಎದೆ ಮತ್ತು ಪಕ್ಕೆಲುಬಿಗೆ ಬಿದಿರಿನ ಕಟ್ಟಿಗೆ ಹೊಕ್ಕಿತ್ತು. ಇದರಿಂದ ಅವರ ಶ್ವಾಸಕೋಶಕ್ಕೆ ತೀವ್ರವಾದ ಗಾಯವಾಗಿತ್ತು.
ಈ ಕುರಿತು ಮಾತನಾಡಿರುವ ವೈದ್ಯರು, ವೆಂಕಟೇಶ್ವರ ರಾವ್ ತಿಂಗಳ ಬಳಿಕ ಊತ ಮತ್ತು ನೋವಿನಿಂದ ವೆಂಕಟೇಶ್ವರ ರಾವ್ ನಮ್ಮ ಆಸ್ಪತ್ರೆಗೆ ಬಂದಿದ್ದರು. ಬಿದಿರು ಹೊಕ್ಕಿದ್ದರಿಂದ ಅವರ ಅಂಗಾಂಗಗಳು ಗಾಯಗೊಂಡಿದ್ದು, ಸೋಂಕು ಕಾಣಿಸಿಕೊಂಡಿತ್ತು. ದೇಹ ಹೊಕ್ಕಿದ್ದ ಬಿದಿರನ್ನು ಹೊರ ತೆಗೆಯಲಾಯಿತು. 20 ದಿನಗಳ ಬಳಿಕ ಅವರಲ್ಲಿ ಕೆಮ್ಮು ಹೆಚ್ಚಾಯಿತು. ಅವರು ಕೆಮ್ಮಿದಾಗ ಕಫದಲ್ಲಿ ಸಣ್ಣ ಬಿದಿರಿನ ಕಡ್ಡಿಗಳು ಇದ್ದಿದ್ದು ಕಂಡುಬಂತು. ತಕ್ಷಣಕ್ಕೆ ಅವರನ್ನು ಆಯುಷ್ ಆಸ್ಪತ್ರೆಯ ತುರ್ತು ವಿಭಾಗಕ್ಕೆ ಸೇರಿಸಲಾಯಿತು. ಅವರನ್ನು ಸಿಟಿ ಸ್ಕ್ಯಾನ್ಗೆ ಒಳಪಡಿಸಿದಾಗ, ಶ್ವಾಸಕೋಶದ ಮತ್ತು ಐದನೇ ಪಕ್ಕೆಲುಬಿನಲ್ಲಿ ವ್ಯತ್ಯಾಸ ಗುರುತಿಸಲಾಯಿತು ಎಂದರು.
ಕಾರ್ಡಿಯೊಥೊರಾಸಿಕ್ ಸರ್ಜನ್ ಡಾ ಸಾಯಿ ಪವನ್, ಶ್ವಾಸಕೋಶ ವಿಭಾಗದ ಮುಖ್ಯಸ್ಥ ಡಾ ಎಂಎಸ್ ಗೋಪಾಲ ಕೃಷ್ಣ ಮತ್ತು ಅನಸ್ತೇಷಿಯ ವಿಭಾಗದ ತಂಡದ ಸದಸ್ಯರು ಈ ಶಸ್ತ್ರಚಿಕಿತ್ಸೆಯನ್ನು ನಿವರ್ಹಿಸಿದರು. ಅವರ ಶ್ವಾಸಕೋಶ ಮತ್ತು ಪಕ್ಕೆಲುಬಿನ ಸ್ನಾಯುವಿನಲ್ಲಿದ್ದ ಬಿದಿರಿನ ಕಡ್ಡಿಗಳನ್ನು ತೆಗೆಯಲಾಯಿತು. ಈ ಕುರಿತು ಮಾತನಾಡಿದ ವೈದ್ಯ ಡಾ ಸಾಯಿ ಪವನ್, ಹೃತ್ಕರ್ಣದಿಂದ ಎರಡು ಸೆಂಟಿಮೀಟರ್ ದೂರದಲ್ಲಿ ಈ ಕಡ್ಡಿ ಇದ್ದಿದ್ದು, ಇದು ಅಪಾಯಕಾರಿಯಾಗಿತ್ತು. ಇದನ್ನು ಅಪರೂಪದ ಸರ್ಜರಿ ನಡೆಸುವ ಮೂಲಕ ತೆಗೆಯಲಾಗಿದ್ದು, ಇದೀಗ ರೋಗಿ ಗುಣಮುಖರಾಗಿ ಮನೆಗೆ ತೆರಳುತ್ತಿದ್ದಾರೆ ಎಂದು ತಿಳಿಸಿದರು.
ದೇಹದಲ್ಲಿ ಎರಡು ಅಂಡವಾಯು ಹೊಂದಿದ್ದ ಮಹಿಳೆಗೆ ಯಶಸ್ವಿ ಚಿಕಿತ್ಸೆ:ಇತ್ತೀಚೆಗೆಬೆಂಗಳೂರಲ್ಲೂ ವೈದ್ಯರು ಅಪರೂಪದ ಸರ್ಜರಿ ಮಾಡುವ ಮೂಲಕ ಗಮನಸೆಳೆದಿದ್ದರು. 76 ವರ್ಷದ ಮಹಿಳೆಯ ಮೂತ್ರಕೋಶ, ಯೋನಿ ಹಾಗೂ ಗುದದ್ವಾರದಲ್ಲಿ ಬೆಳೆದುಕೊಂಡಿದಿದ್ದ ಎರಡು ರೀತಿಯ ಪ್ಯಾರಾಸ್ಟೊಮಲ್ ಮತ್ತು ಪೆರಿನಿಯಲ್ ಹರ್ನಿಯಾವನ್ನು ಲ್ಯಾಪರೋಸ್ಕೋಪಿಕ್ ಮೂಲಕ ಯಶಸ್ವಿಯಾಗಿ ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನು ಫೋರ್ಟಿಸ್ ಆಸ್ಪತ್ರೆ ವೈದ್ಯರು ನಡೆಸಿದ್ದು, ಎರಡು ಹರ್ನಿಯಾಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದು ದೇಶದಲ್ಲೇ ಮೊದಲು.
ಈ ಕುರಿತು ಮಾತನಾಡಿದ ಮಿನಿಮಲ್ ಆಕ್ಸೆಸ್ ಮತ್ತು ಬಾರಿಯಾಟ್ರಿಕ್ ಸರ್ಜರಿ ಹೆಚ್ಚುವರಿ ನಿರ್ದೇಶಕ ಡಾ. ಗಣೇಶ್ ಶೆಣೈ, 76 ವರ್ಷದ ಮಹಿಳೆಯಲ್ಲಿ ಆರು ವರ್ಷಗಳ ಹಿಂದೆಯೇ ಪ್ಯಾರಾಸ್ಟೊಮಲ್ ಮತ್ತು ಪೆರಿನಿಯಲ್ ಹರ್ನಿಯಾ (ಅಂಡವಾಯು)ವು ಬೆಳೆಯುತ್ತಾ ಯೋನಿ, ಗರ್ಭಾಶಯ, ಮೂತ್ರಕೋಶ ಮತ್ತು ದುಗ್ಧರಸ ಗ್ರಂಥಿಯು ಪೂರ್ತಿಯಾಗಿ ಮುಚ್ಚಿಕೊಂಡಿದ್ದವು. ಇದರಿಂದ ಮಹಿಳೆ ಎಲ್ಲರಂತೆ, ಮೂತ್ರ ವಿಸರ್ಜನೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಆರು ವರ್ಷಗಳ ಹಿಂದೆ ಶಸ್ತ್ರಚಿಕಿತ್ಸೆಗೆ ಒಳಗಾಗಿ, ಸಂಪೂರ್ಣವಾಗಿ ಯೋನಿ, ಗರ್ಭಾಶಯ, ಮೂತ್ರಕೋಶ ಹಾಗೂ ದುಗ್ಧರಸವನ್ನು ಸಂಪೂರ್ಣವಾಗಿ ತೆಗೆದುಹಾಕಿ, ಸಣ್ಣ ರಂಧ್ರ ಮಾಡಲಾಗಿತ್ತು, ಅದರಿಂದಲೇ ಮಲ, ಮೂತ್ರ ಮಾಡಲು ಸಾಧ್ಯವಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಆಕೆಯ ಹೊಟ್ಟೆಯ ಸುತ್ತಲೂ ನೋವು ಕಾಣಿಸಿಕೊಂಡು ಫೋರ್ಟಿಸ್ ಆಸ್ಪತ್ರೆಗೆ ದಾಖಲಾದರು. ಈ ವೇಳೆ ಆಕೆಯನ್ನು ಪರೀಕ್ಷಿಸಿದ ಬಳಿಕ ರೋಗಿಯು ಪ್ಯಾರಾಸ್ಟೊಮಲ್ ಮತ್ತು ಪೆರಿನಿಯಲ್ ಅಂಡವಾಯುಗಳಿಂದ ಬಳಲುತ್ತಿರುವುದು ತಿಳಿದುಬಂತು. ಹೀಗಾಗಿ ಆಕೆಗೆ ಲ್ಯಾಪರೋಸ್ಕೋಪಿಕ್ ಮೂಲಕ ಈ ಎರಡು ಅಂಡವಾಯುಗಳನ್ನು ಸಂಕೀರ್ಣ ಶಸ್ತ್ರಚಿಕಿತ್ಸೆ ನಡೆಸಿ ಅಂಡವಾಯುಗಳನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದ್ದು, ರೋಗಿಯು ಸಂಪೂರ್ಣ ಗುಣಮುಖರಾಗಿದ್ದಾರೆ. ಈ ಅಂಡವಾಯು ಮತ್ತೆ ಬೆಳೆಯದಂತ ಶಸ್ತ್ರಚಿಕಿತ್ಸೆ ಮಾಡಲಾಗಿದೆ
ಇದನ್ನೂ ಓದಿ: ಕರ್ನಾಟಕದಲ್ಲಿ ಶ್ವಾಸಕೋಶ ಕ್ಯಾನ್ಸರ್ನಿಂದ ಅಧಿಕ ಸಾವು: ಇದರ ಬಗ್ಗೆ ವೈದ್ಯರು ಏನು ಹೇಳುತ್ತಾರೆ ಗೊತ್ತಾ?