ಬ್ರಿಟನ್ನ ಅತಿದೊಡ್ಡ ರಾಷ್ಟ್ರೀಯ ಆರೋಗ್ಯ ಸೇವೆ (ಎನ್‌ಹೆಚ್‌ಎಸ್) ಟ್ರಸ್ಟ್ ಇದೀಗ ರಾನ್ಸಮ್‌ವೇರ್ (ransomware) ದಾಳಿಗೆ ತುತ್ತಾಗಿದೆ. 2.5 ಮಿಲಿಯನ್ ರೋಗಿಗಳ ವೈದ್ಯಕೀಯ ದಾಖಲೆ ಇದರಲ್ಲಿತ್ತು. ಹೀಗಾಗಿ ಆರೋಗ್ಯ ವ್ಯವಸ್ಥೆ ಮೇಲೆ ಬಹುದೊಡ್ಡ ಪರಿಣಾಮ ಬೀರಿದೆ ಎನ್ನಲಾಗಿದೆ.
ಬ್ರಿಟನ್ ಆರೋಗ್ಯ ವ್ಯವಸ್ಥೆಯ ದತ್ತಾಂಶಗಳ ಮೇಲೆ ನಡೆದ ಅತಿದೊಡ್ಡ ಉಲ್ಲಂಘನೆ ಪ್ರಕರಣವಿದು. ರಾನ್ಸಮ್‌ವೇರ್ ಗ್ಯಾಂಗ್ ಬ್ಲಾಕ್ಕ್ಯಾಟ್, ಬರ್ಟ್ಸ್ ರಾಷ್ಟ್ರೀಯ ಆರೋಗ್ಯ ಸೇವೆ ಟ್ರಸ್ಟ್ನ 70 ಟೆರಾಬೈಟ್ಸ್ ಪ್ರಮುಖ ದತ್ತಾಂಶವನ್ನು ಕದ್ದಿರುವುದಾಗಿ ಹೇಳಿದೆ. ಈ ಟ್ರಸ್ಟ್ ಲಂಡನ್ ಮೂಲದ ಐದು ಆಸ್ಪತ್ರೆಗಳನ್ನು ನಡೆಸುತ್ತಿದೆ ಎಂದು ಟೆಕ್ಕ್ರಂಚ್ ವರದಿ ಮಾಡಿದೆ.
ಉದ್ಯೋಗಿಗಳ ಡ್ರೈವಿಂಗ್ ಲೈಸನ್ಸ್, ಗೌಪ್ಯತೆಯ ಆಂತರಿಕ ಇಮೇಲ್ ಸೇರಿದಂತೆ ಉದ್ಯೋಗಿಗಳ ಗುರುತು ಪತ್ತೆಯ ಪ್ರಮುಖ ದಾಖಲಾತಿಗಳ ಮೇಲೆ ಈ ದಾಳಿ ನಡೆಸಲಾಗಿದೆ. ಎಎಲ್ಪಿಎಚ್ವಿ ಎಂದು ಹೆಸರಾಗಿರುವ ಬ್ಲಾಕ್ ಕಾಟ್, ತನ್ನ ಬೇಡಿಕೆ ಈಡೇರಿಕೆ ಸೋಮವಾರದವರೆಗೆ ಗಡುವು ನೀಡಿದೆ. ಒಂದು ವೇಳೆ ಅದರೊಳಗೆ ಬೇಡಿಕೆ ಈಡೇರದಿದ್ದರೆ ಕದ್ದಿರುವ ಗೌಪತ್ಯೆಯ ದತ್ತಾಂಶವನ್ನು ಡಾರ್ಕ್ವೆಬ್ನಲ್ಲಿ ಹಂಚಿಕೊಳ್ಳುವುದಾಗಿ ಬೆದರಿಕೆಯೊಡ್ಡಿದೆ. ಈ ಬೇಡಿಕೆ ಹಣದ್ದೋ ಅಥವಾ ಮತ್ತಿನ್ಯಾವ ಮೂಲದ್ದು ಎಂಬುದರ ಕುರಿತು ಸಂಸ್ಥೆ ಬಹಿರಂಗಪಡಿಸಿಲ್ಲ. ಈ ಕುರಿತು ಮಾತನಾಡಿರುವ ಬ್ರಟ್ಸ್ ಹೆಲ್ತ್ ವಕ್ತಾರ, ರಾನ್ಸಮ್‌ವೇರ್ ತಮ್ಮ ದತ್ತಾಂಶಕ್ಕೆ ಕನ್ನ ಹಾಕಿದ್ದು, ಈ ಬಗ್ಗೆ ತುರ್ತು ತನಿಖೆ ನಡೆಸಬೇಕಿದೆ ಎಂದಿದ್ದಾರೆ.