ಲಂಡನ್ :ಮಾನಸಿಕ ಆರೋಗ್ಯವನ್ನು ಸುಧಾರಿಸುವ ದೃಷ್ಟಿಯಿಂದ ಖಿನ್ನತೆ ಅಥವಾ ಆತಂಕವನ್ನು ನಿವಾರಿಸುವಲ್ಲಿ ರನ್ನಿಂಗ್ ಅಥವಾ ಓಡುವುದು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಸಂಶೋಧನೆ ತಿಳಿಸಿದೆ. ಖಿನ್ನತೆ ಅಥವಾ ಆತಂಕಗಳ ನಿವಾರಣೆಗೆ ಖಿನ್ನತೆ ಶಮನಕಾರಿ ಮಾತ್ರೆಗಳನ್ನು ತೆಗೆದುಕೊಲ್ಳುವುದು ಹಾಗೂ ಓಡುವುದು ಎರಡೂ ಒಂದೇ ರೀತಿಯ ಪರಿಣಾಮಗಳನ್ನು ತೋರಿಸಿವೆ. 16 ವಾರಗಳವರೆಗೆ ಮಾತ್ರೆ ತೆಗೆದುಕೊಳ್ಳುವುದು ಮತ್ತು ಅದೇ ಅವಧಿಗೆ ಓಡುವುದು ಎರಡರಲ್ಲಿ ಓಡುವುದರಿಂದಲೇ ಹೆಚ್ಚಿನ ಮಾನಸಿಕ ಹಾಗೂ ದೈಹಿಕ ಆರೋಗ್ಯ ಸಿಗುವುದು ದೃಢಪಟ್ಟಿದೆ. ಅಲ್ಲದೆ ಖಿನ್ನತೆ ಶಮನಕಾರಿ ಔಷಧಿಗಳಿಂದ ದೈಹಿಕ ಆರೋಗ್ಯಕ್ಕೆ ಹಾನಿಯಾಗಿರುವುದು ಕಂಡು ಬಂದಿದೆ.
ಎಫೆಕ್ಟಿವ್ ಡಿಸಾರ್ಡರ್ಸ್ ಹೆಸರಿನ ಜರ್ನಲ್ನಲ್ಲಿ ಪ್ರಕಟವಾದ ಅಧ್ಯಯನವು ಖಿನ್ನತೆ ಅಥವಾ ಆತಂಕದಿಂದ ಬಳಲುತ್ತಿರುವ 141 ರೋಗಿಗಳ ಸಮೀಕ್ಷೆ ನಡೆಸಿದೆ. ಈ 141 ರೋಗಿಗಳಿಗೆ ಚಿಕಿತ್ಸೆಯ ಆಯ್ಕೆಯನ್ನು ನೀಡಲಾಯಿತು. 16 ವಾರಗಳ ಎಸ್ಎಸ್ಆರ್ಐ ಖಿನ್ನತೆ-ಶಮನಕಾರಿ ಮಾತ್ರೆಗಳು ಅಥವಾ 16 ವಾರಗಳ ಗುಂಪು ಆಧಾರಿತ ರನ್ನಿಂಗ್ ಥೆರಪಿ ಇವುಗಳ ಪೈಕಿ ಒಂದನ್ನು ಆರಿಸಿಕೊಳ್ಳಲು ಸೂಚಿಸಲಾಯಿತು. ನಲವತ್ತೈದು ಜನರು ಖಿನ್ನತೆ-ಶಮನಕಾರಿ ಔಷಧಿಗಳನ್ನು ಆಯ್ಕೆ ಮಾಡಿದರೆ, 96 ಜನರು ಓಟವನ್ನು ಆಯ್ಕೆ ಮಾಡಿದರು.
ಪ್ರಯೋಗದ ಕೊನೆಯಲ್ಲಿ ಎರಡೂ ಗುಂಪುಗಳಲ್ಲಿನ ಸುಮಾರು 44 ಪ್ರತಿಶತದಷ್ಟು ಜನರು ಖಿನ್ನತೆ ಮತ್ತು ಆತಂಕದ ಸ್ಥಿತಿಯಲ್ಲಿ ಸುಧಾರಣೆಯನ್ನು ತೋರಿಸಿದರು, ಆದರೆ ಓಡುವ ಗುಂಪನ್ನು ನೋಡಿದರೆ ಇವರ ಸೊಂಟದ ಸುತ್ತಳತೆ, ರಕ್ತದೊತ್ತಡ ಮತ್ತು ಹೃದಯದ ಕಾರ್ಯದಲ್ಲಿ ಗಮನಾರ್ಹ ಸುಧಾರಣೆಗಳು ಕಂಡು ಬಂದಿವೆ. ಆದರೆ ಖಿನ್ನತೆ-ಶಮನಕಾರಿ ಔಷಧಿ ಸೇವಿಸಿದವರಲ್ಲಿ ಚಯಾಪಚಯ ಕ್ರಿಯೆ ಸ್ವಲ್ಪ ಕ್ಷೀಣಿಸಿರುವ ಲಕ್ಷಣಗಳು ಕಂಡು ಬಂದಿವೆ.