ಪ್ರತಿ ವರ್ಷ ವಿಶ್ವದಾದ್ಯಂತ ಮಾ.26ರಂದು 'ಅಂತಾರಾಷ್ಟ್ರೀಯ ಅಪಸ್ಮಾರ ಜಾಗೃತಿ ದಿನ' ಅಥವಾ 'ನೇರಳೆ ದಿನ' ಆಚರಿಸುತ್ತಾರೆ ಮತ್ತು ಅಪಸ್ಮಾರ ರೋಗದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಸಲಾಗುತ್ತದೆ. ಜಗತ್ತಿನಾದ್ಯಂತ ಸುಮಾರು 50 ದಶಲಕ್ಷಕ್ಕೂ ಅಧಿಕ ಮಂದಿ ಈ ಅಪಸ್ಮಾರ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ಕಾಯಿಲೆ ಯಾವುದೇ ಜಾತಿ, ಧರ್ಮ, ಭಾಷೆಯ ಜನರಿಗೆ ಸೀಮಿತವಾಗದೆ ಎಲ್ಲರನ್ನು ಕಾಡುತ್ತಿದ್ದು, ಒಂದು ಜಾಗತಿಕ ಆರೋಗ್ಯ ಸಮಸ್ಯೆ ಎಂದರೂ ತಪ್ಪಲ್ಲ.
ಫಿಟ್ಸ್, ಎಪಿಲೆಪ್ಸಿ, ಅಪಸ್ಮಾರ ಅಥವಾ ಮೂರ್ಛೆ ಮೆದುಳಿನ ರೋಗದ ಲಕ್ಷಣ. ಇದು ಯಾವ ವಯಸ್ಸಿನವರಿಗಾದರೂ ಬರಬಹುದು. ಅಚ್ಚರಿ ಎಂದರೆ ಶೇ.95ರಷ್ಟು ಪ್ರಕರಣಗಳಲ್ಲಿ ಮೆದುಳಿನಲ್ಲಿ ಮೇಲ್ನೋಟಕ್ಕೆ ಯಾವ ರೋಗ ಅಥವಾ ಬದಲಾವಣೆಯೂ ಕಂಡು ಬರುವುದಿಲ್ಲ. ಎಕ್ಸ್‌ರೇ, ಸ್ಕ್ಯಾನಿಂಗ್‌ಗಳಲ್ಲೂ ಇವು ಗೋಚರಿಸುವುದಿಲ್ಲ. ಉಳಿದ ಶೇ.5ರಷ್ಟು ಪ್ರಕರಣಗಳಲ್ಲಿ ರೋಗಿಯ ಮೆದುಳಿನಲ್ಲಿ ಗುರುತಿಸಬಹುದಾದ ಕಾಯಿಲೆ ಅಥವಾ ಬದಲಾವಣೆ ಇರಬಹುದು. ಉದಾಹರಣೆಗೆ ಸೋಂಕು, ರಕ್ತಸ್ರಾವ, ಹೆಪ್ಪುಗಟ್ಟುವಿಕೆ, ಮೆದುಳಿನ ಹಾನಿ, ಗೆಡ್ಡೆ ಇತ್ಯಾದಿ.
ಹಲವು ವಿಧಗಳ ಫಿಟ್ಸ್:
- ಸಾಮಾನ್ಯ ಅಥವಾ ತೀವ್ರವಾದ ವಿಧ (ಗ್ರಾಂಡ್‌ಮಾಲ್ ಫಿಟ್ಸ್): ರೋಗಿ ಪ್ರಜ್ಞೆ ತಪ್ಪಿ, ಎಲ್ಲೆಂದರಲ್ಲಿ ಬೀಳುವುದು, ಬಿದ್ದು ಗಾಯವಾಗುವುದು, ಕೈ ಕಾಲುಗಳು ಕ್ರಮವಾಗಿ ಅದುರುವುದು, ಆ ಸಮಯಲ್ಲಿ ಬಾಯಿಯಲ್ಲಿ ಬುರುಗು, ತುಟಿ, ನಾಲಿಗೆ ಕಚ್ಚಿಕೊಂಡು ರಕ್ತ ಬರುವುದು, ಮಲಮೂತ್ರ ಅನಿಯಂತ್ರಿತ ವಿಸರ್ಜನೆ, ನಂತರ ರೋಗಿಯ ನಿಷ್ಕ್ರಿಯತೆ. ಆ ದಿನವೆಲ್ಲಾ ರೋಗಿ ಮಲಗಿರುವುದು-ಇವು ಸಾಮಾನ್ಯ ಲಕ್ಷಣ. ಎರಡು ಮೂರು ನಿಮಿಷಗಳ ಕಾಲ ಮೈಕೈ ನೋವು, ತಲೆ ನೋವು, ವಾಕರಿಕೆ, ನಿಶ್ಯಕ್ತಿ, ಸುಸ್ತಿನಿಂದ ರೋಗಿಗಳು ಬಳಲುತ್ತಾರೆ. ಫಿಟ್ಸ್ ದಿನವೂ ಬರಬಹುದು. ಅವಧಿಗೊಮ್ಮೆ ಬರಬಹುದು ಅಥವಾ ಆರು ತಿಂಗಳಿಗೋ, ವರ್ಷಕ್ಕೋ, ಅಪರೂಪವಾಗಿ ಬರಬಹುದು.
- ಶರೀರದ ಒಂದು ಭಾಗಕ್ಕೆ ಮಾತ್ರ ಬರುವ ಫಿಟ್ಸ್ (ಫೋಕಲ್ ಫಿಟ್ಸ್): ಸ್ನಾಯುಗಳು ಸಂಕುಚನಗೊಳ್ಳುವ ವಿಧ (ಮೈಯೊಕ್ಲೋನಸ್), ಪ್ರಜ್ಞಾಸ್ಥಿತಿಯಲ್ಲಿ ಅಲ್ಪಕಾಲದ ವ್ಯತ್ಯಾಸದ ಫಿಟ್ಸ್ (ಅಬ್ಸೆನ್ಸ್-ಪೆಟಿಟ್‌ಮಾಲ್) ಹಾಗೂ ಸಂವೇದನೆಯಲ್ಲಿ ವ್ಯತ್ಯಾಸ, ವಿಚಿತ್ರ ಅನುಭವದ ಫಿಟ್ಸ್ (ಟೆಂಪೊರಲ್ ಲೋಬ್ ಅಥವಾ ಸೆನ್ಸರಿ ಎಪಿಲೆಪ್ಸಿ)-ಇತರ ವಿಧಗಳ ಮೂರ್ಛೆರೋಗಗಳಾಗಿವೆ.
ನರರೋಗ ತಜ್ಞೆ ಡಾ.ಸೀತಾ ಜಯಲಕ್ಷ್ಮಿ ಹೇಳುವುದೇನು?: ಅಪಸ್ಮಾರದಿಂದ ಬಳಲುತ್ತಿರುವ ಜನರು ಸಾಮಾನ್ಯ ಜೀವನವನ್ನು ನಡೆಸಬಹುದು. ಆದರೆ ಜೀವನದ ಗುಣಮಟ್ಟದ ಮೇಲೆ ಸಮಾಜದ ವರ್ತನೆ ಪರಿಣಾಮ ಬೀರುತ್ತದೆ. "ರೋಗಗ್ರಸ್ತವಾಗುವಿಕೆಗಳನ್ನು ನಿಯಂತ್ರಿಸಲು ಮತ್ತು ಅಪಸ್ಮಾರಕ್ಕೆ ಚಿಕಿತ್ಸೆ ನೀಡಲು ಔಷಧಿಗಳ ಅಗತ್ಯವಿದೆ ಮತ್ತು ಮೂರ್ಛೆ ರೋಗ ಹೊಂದಿರುವ ಪ್ರತಿ 10 ವ್ಯಕ್ತಿಗಳಲ್ಲಿ ಸುಮಾರು ಏಳು ಜನರಲ್ಲಿ ರೋಗಗ್ರಸ್ತವಾಗುವಿಕೆಗಳನ್ನು ನಿಯಂತ್ರಿಸಲು ಆ್ಯಂಟಿ-ಸೆಜರ್ ಔಷಧಿಗಳು ಸಹಾಯ ಮಾಡುತ್ತವೆ ಎಂದು ಕಿಮ್ಸ್ ಆಸ್ಪತ್ರೆಯ ಹಿರಿಯ ಸಲಹೆಗಾರ ನರರೋಗ ತಜ್ಞೆ ಡಾ.ಸೀತಾ ಜಯಲಕ್ಷ್ಮಿ ಹೇಳಿದರು.
ಡಾ. ಅಮಿತ್ ಭಟ್ಟಿ ಪ್ರಕಾರ:ಅಪಸ್ಮಾರಕ್ಕೆ ಕಾರಣವಾಗುವ ಹೆಚ್ಚುವರಿ ಕಾರಣಗಳ ಕುರಿತು, ವೊಕ್ಹಾರ್ಡ್ ಆಸ್ಪತ್ರೆ (ನಾಗ್ಪುರ) ಕನ್ಸಲ್ಟೆಂಟ್ - ನ್ಯೂರಾಲಜಿ ಡಾ. ಅಮಿತ್ ಭಟ್ಟಿ, ಒತ್ತಡವು ಕೆಲವೊಮ್ಮೆ ದುರ್ಬಲ ನರಮಂಡಲದ ಜನರಲ್ಲಿ ಅಪಸ್ಮಾರವನ್ನು ಉಂಟುಮಾಡಬಹುದು ಮತ್ತು ಹೆಚ್ಚಿನ ಒತ್ತಡವು ಸಮಸ್ಯೆಯ ತೀವ್ರತೆಯನ್ನು ಹೆಚ್ಚಿಸಬಹುದು ಎಂದು ವಿವರಿಸಿದ್ದಾರೆ.