ಮಹಿಳೆಯೋರ್ವಳು ಮುಟ್ಟಾಗುವ ಚಕ್ರವು ಶಾಶ್ವತವಾಗಿ ನಿಂತು ಹೋಗುವ ಪ್ರಕ್ರಿಯೆಯನ್ನು ಮುಟ್ಟು ನಿಲ್ಲುವ ಕಾಲ ಅಥವಾ ರಜೋನಿವೃತ್ತಿ ಎಂದು ಕರೆಯುತ್ತಾರೆ. ಇದನ್ನೇ ಇಂಗ್ಲಿಷಿನಲ್ಲಿ ಮೆನೊಪಾಸ್ ಎನ್ನುತ್ತಾರೆ. ಸಾಮಾನ್ಯವಾಗಿ ಮಹಿಳೆಯೋರ್ವಳ 40 ರಿಂದ 50ನೇ ವಯಸ್ಸಿನ ಮಧ್ಯೆ ಮೆನೊಪಾಸ್ ಘಟಿಸುತ್ತದೆ. ಇನ್ನು, ಕೆಲ ಮಹಿಳೆಯರಲ್ಲಿ ಈ ವಯಸ್ಸಿಗೆ ಮುನ್ನವೇ ಮೆನೊಪಾಸ್ ಆಗಬಹುದು. ಇದನ್ನು ಅಕಾಲಿಕ ಮೆನೊಪಾಸ್ (Premature Menopause) ಎಂದು ಕರೆಯಲಾಗುತ್ತದೆ.
40 ವಯಸ್ಸಿಗೆ ಮುನ್ನವೇ ಋತುಚಕ್ರಗಳು ನಿಂತು ಹೋದರೆ ಅದು ಅಕಾಲಿಕ ಮೆನೊಪಾಸ್ ಆಗಿರುತ್ತದೆ. ಹಾಗೆಯೇ 45 ವಯಸ್ಸಿಗೆ ಮುನ್ನವೇ ಮೆನೊಪಾಸ್ ಆದಲ್ಲಿ ಅದನ್ನು ಬೇಗನೆ ಆದ ಮೆನೊಪಾಸ್ (Early Menopause) ಎನ್ನಲಾಗುತ್ತದೆ.
ಅಕಾಲಿಕ ಮೆನೊಪಾಸ್ ಕುರಿತಾಗಿ ಆ್ಯನಲ್ಸ್ ಆ್ಯಂಡ್ ಹೆಲ್ತ್ ಸೈನ್ಸ್ ರಿಸರ್ಚ್ ಎಂಬ ವೈದ್ಯಕೀಯ ಜರ್ನಲ್ನಲ್ಲಿ ಅಧ್ಯಯನಾ ವರದಿಯೊಂದನ್ನು ಪ್ರಕಟಿಸಲಾಗಿದೆ. “ಅವಧಿಪೂರ್ವವಾಗಿ ಅಂದರೆ 40 ವಯಸ್ಸಿಗೂ ಮುಂಚೆಯೇ ಅಂಡಾಶಯದ ವೈಫಲ್ಯವಾಗುವುದನ್ನು ಅಕಾಲಿಕ ಮೆನೊಪಾಸ್ ಎಂದು ಹೇಳಬಹುದು. ಒಟ್ಟಾರೆ 40 ವರ್ಷ ಕೆಳಗಿನ ಶೇ 1 ರಷ್ಟು ಮಹಿಳೆಯರಿಗೆ ಇದು ಘಟಿಸುತ್ತದೆ. ಹೀಗಾದಾಗ ಅಕಾಲಿಕ ಮೃತ್ಯು, ಮನೋ ಲೈಂಗಿಕ ಸಮಸ್ಯೆಗಳು, ಭಾವನೆಗಳಲ್ಲಿ ಏರುಪೇರಾಗುವುದು, ಆಸ್ಟಿಯೊಪೊರೊಸಿಸ್, ರಕ್ತಹೀನತೆಯ ಹೃದಯ ಕಾಯಿಲೆ ಮತ್ತು ಬಂಜೆತನಗಳ ಸಮಸ್ಯೆಗಳು ಕಾಡಬಹುದು.” ಎಂದು ಸಂಶೋಧನಾ ವರದಿ ಹೇಳುತ್ತದೆ.
ಮಹಿಳೆಯಲ್ಲಿ ಅಕಾಲಿಕ ಮೆನೊಪಾಸ್ ಆಗುವುದಕ್ಕೆ ಈಸ್ಟ್ರೊಜೆನ್ ಹಾರ್ಮೋನಿನ ಕೊರತೆಯೇ ಮುಖ್ಯ ಕಾರಣವಾಗಿರುತ್ತದೆ. ಹೃದಯನಾಳ ಕಾಯಿಲೆ ಅಥವಾ ನರರೋಗ, ಮಾನಸಿಕ ಅಸ್ವಸ್ಥತೆ ಮುಂತಾದ ಕಾರಣಗಳಿಂದಲೂ ಅಕಾಲಿಕ ಮೆನೊಪಾಸ್ ಆಗಬಹುದು. ಹಾಗಾದರೆ ಅಕಾಲಿಕ ಮೆನೊಪಾಸ್ ಲಕ್ಷಣಗಳೇನು ಮತ್ತು ಅದನ್ನು ಸೂಕ್ತವಾಗಿ ನಿರ್ವಹಿಸುವ ಕ್ರಮಗಳೇನು ಎಂಬ ಬಗ್ಗೆ ಒಂದಿಷ್ಟು ತಿಳಿಯೋಣ.
ಅಕಾಲಿಕ ಮೆನೊಪಾಸ್ ಆಗಲು ಸಂಭವನೀಯ ಕಾರಣಗಳು
- ಆನುವಂಶಿಕ ವೈಪರೀತ್ಯಗಳು: ಲೈಂಗಿಕ ವರ್ಣತಂತುಗಳ ಅಸಹಜತೆಯು ಅಕಾಲಿಕ ಮೆನೊಪಾಸ್ಗೆ ಕಾರಣವಾಗಬಹುದು.
- ಸ್ವಯಂ-ಪ್ರತಿರಕ್ಷಣಾ ಕಾಯಿಲೆಗಳು: ಎಸ್‌ಎಲ್‌ಇ ಅಂದರೆ ಸಿಸ್ಟಮಿಕ್ ಲೂಪಸ್ ಎರಿಥೆಮಾಟೋಸಸ್, ಥೈರಾಯ್ಡಿಟಿಸ್ಇ ತ್ಯಾದಿ ಕಾಯಿಲೆಗಳು.
- ಕೀಮೋಥೆರಪಿ ಮತ್ತು ರೇಡಿಯೊಥೆರಪಿ: ಈ ಚಿಕಿತ್ಸೆಗಳು ಮಹಿಳೆಯರಲ್ಲಿ ಅಕಾಲಿಕ ಮೆನೊಪಾಸ್ಗೆ ಕಾರಣವಾಗಬಹುದು.
- ಅಂಡಾಶಯ ಅಥವಾ ಗರ್ಭಾಶಯವನ್ನು ತೆಗೆಯುವುದು: ಅಂಡಾಶಯ ಮತ್ತು ಗರ್ಭಾಶಯವನ್ನು ತೆಗೆಯುವುದು ಎರಡೂ ಮುಟ್ಟನ್ನು ಕೊನೆಗೊಳಿಸುತ್ತವೆಮತ್ತು ಅಕಾಲಿಕ ಮೆನೊಪಾಸ್ಗೆ ಕಾರಣವಾಗುತ್ತದೆ.
- ಕುಟುಂಬದ ಇತಿಹಾಸ: ಚಿಕ್ಕ ವಯಸ್ಸಿನಲ್ಲಿಯೇ ಮೆನೊಪಾಸ್ಆಗುವ ಕುಟುಂಬದ ಇತಿಹಾಸ ಹೊಂದಿದ್ದರೆ ಅಕಾಲಿಕ ಮೆನೊಪಾಸ್ ಸಂಭವಿಸಬಹುದು.
- ಧೂಮಪಾನ: ಧೂಮಪಾನವು ಆರೋಗ್ಯಕ್ಕೆ ಅತ್ಯಂತ ಹಾನಿಕಾರಕವಾಗಿದೆ. ಧೂಮಪಾನದ ಮೂಲಕ ತಂಬಾಕಿನಂತಹ ವಿಷಕಾರಿ ಪದಾರ್ಥಗಳ ಸೇವನೆಯು ಈ ಸ್ಥಿತಿಗೆ ಕಾರಣವಾಗಬಹುದು.
- ಮಧುಮೇಹ: ಮಧುಮೇಹದಿಂದಾಗಿ ಮಹಿಳೆಯರು ಅಕಾಲಿಕ ಮೆನೊಪಾಸ್ ಅನುಭವಿಸಬಹುದು.