ಚಳಿಗಾಲ ಬಂದಾಕ್ಷಣ ನೆನಪಾಗುವುದು ದೆಹಲಿ ವಾಯು ಮಾಲಿನ್ಯ. ಕಾರಣ ಇಲ್ಲಿ ಚಳಿಗಾಲದಲ್ಲಿನ ವಾಯು ಮಾಲಿನ್ಯ ಪ್ರಮಾಣ ಹೆಚ್ಚಾಗುತ್ತದೆ. ಕೇವಲ ರಾಷ್ಟ್ರ ರಾಜಧಾನಿಯಲ್ಲಿ ಮಾತ್ರವಲ್ಲದೇ, ಎಲ್ಲ ಕಡೆಯಲ್ಲೂ ಚಳಿಗಾಲದ ಮಾಲಿನ್ಯ ಕಾಡುವುದು ಸಹಜ,. ಇದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಕೂಡ ಹೆಚ್ಚಾಗುತ್ತದೆ. ಚಳಿಗಾದಲ್ಲಿ ಜ್ವರ, ಕೆಮ್ಮು, ನೆಗಡಿಯಂತಹ ಸಮಸ್ಯೆಗಳು ಹೆಚ್ಚಾಗಿ ಬಾಧಿಸುತ್ತದೆ. ಈ ವೇಳೆ, ಕೆಲವು ಮುನ್ನೆಚ್ಚರಿಕೆಯನ್ನು ಅನುಸರಿಸುವ ಮೂಲಕ ಇದರ ಸಮಸ್ಯೆಯ ತೀವ್ರತೆಯನ್ನು ಕಡಿಮೆ ಮಾಡಬಹುದಾಗಿದೆ.
ಗಿಡಗಳು: ವಾಯು ಮಾಲಿನ್ಯವೂ ಗ್ರಾಮೀಣ ಪ್ರದೇಶಕ್ಕಿಂತ ನಗರ ಪ್ರದೇಶದಲ್ಲಿ ಹೆಚ್ಚಾಗಿ ಕಾಡುತ್ತದೆ. ಇದಕ್ಕೆ ಕಾರಣ ಗಿಡ ಮರಗಳ ಕೊರತೆ. ಈ ಕಾರಣದಿಂದ ಮನೆಯೊಳಗೆ ಗಿಡಗಳನ್ನು ಬೆಳೆಸುವುದು ಉತ್ತಮ ಎನ್ನುತ್ತಾರೆ ತಜ್ಞರು. ಮನೆಯೊಳಗೆ ಹೆಚ್ಚು ಗಾಳಿ ನೀಡುವಂತಹ ಗಿಡಗಳನ್ನು ಬೆಳೆಸಿದಾಗ ಆಮ್ಲಜನಕದ ಮಟ್ಟ ಹೆಚ್ಚುತ್ತದೆ. ಇದು ಹೊರಗಿನ ಮಾಲಿನ್ಯವನ್ನೂ ಕೂಡ ತಡೆಯುತ್ತದೆ. ಆಲೋವೆರಾ, ಮನಿ ಪ್ಲಾಂಟ್, ಸ್ಪೈಡರ್ ಪ್ಲಾಂಟ್ನಂತಹ ಗಿಡಗಳು ಒಳಾಂಗಣ ಸಸ್ಯಗಳಾಗಿದ್ದು, ಇವು ಹೆಚ್ಚು ಪ್ರಯೋಜನಕಾರಿಯಾಗಿದೆ.
ಹಸಿರು.. ಸಿಟ್ರಸ್ ಹಣ್ಣು: ವಾಯು ಮಾಲಿನ್ಯವೂ ಅನೇಕ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. ನಮ್ಮ ದೇಹದ ಪ್ರತಿರೋಧಕ ಶಕ್ತಿ ಹೆಚ್ಚಿದಾಗ ಮಾತ್ರ ಅದನ್ನು ತಡೆಯಲು ಸಾಧ್ಯ. ನಮ್ಮ ದೇಹದಲ್ಲಿ ಸೋಂಕಿನ ವಿರುದ್ಧ ಹೋರಾಡುವ ಶಕ್ತಿ ಬೆಳೆದರೆ ಇದು ಸಾಧ್ಯ. ಈ ಹಿನ್ನಲೆ ಹೆಚ್ಚಾಗಿ ಹಸಿರು ತರಕಾರಿ, ಸಿಟ್ರೆಸ್ ಭರಿತ ಹಣ್ಣು, ಬೆರ್ರಿಸ್, ನಟ್ಸ್ ಮುಂತಾದವುಗಳ ಸೇವನೆ ಅಗತ್ಯ. ಇವು ನಿಮ್ಮ ಡಯಟ್ನ ಭಾಗವಾಗಿರುವಂತೆ ನೋಡಿಕೊಳ್ಳುವುದು ಅಗತ್ಯ. ಇವುಗಳಲ್ಲಿ ವಿಟಮಿನ್ ಮತ್ತು ಮಿನರಲ್ ಸಮೃದ್ಧ ಗುಣಗಳಿರುತ್ತದೆ. ಇವು ರೋಗ ನಿರೋಧಕತೆ ಹೆಚ್ಚಿಸುತ್ತದೆ. ಇದರ ಜೊತೆಗೆ ನೀರನ್ನು ಹೆಚ್ಚಾಗಿ ಸೇವನೆ ಮಾಡುವುದರಿಂದ ದೇಹದ ವಿಷಕಾರಿ ಅಂಶವನ್ನು ತೆಗೆದು ಹಾಕಿ ಚಯಾಪಚಯ ಕ್ರಿಯೆಯನ್ನು ಸುಧಾರಿಸಬಹುದು.