ಮುಂಬೈ: ರಾಜಕೀಯ ರ್ಯಾಲಿ, ಸಮಾವೇಶ, ಪ್ರತಿಭಟನೆಗಳ ಸಂದರ್ಭಗಳಲ್ಲಿ ಮಹಿಳೆಯರು ಅನೇಕ ಬಾರಿ ಶೌಚಾಲಯ ಸಮಸ್ಯೆ ಎದುರಿಸುತ್ತಾರೆ. ಈ ಪಡಿಪಾಟಲು ಮನಗಂಡ ಮಹಾರಾಷ್ಟ್ರ ಸರ್ಕಾರ ಪರಿಹಾರಾತ್ಮಕ ಕ್ರಮ ತೆಗೆದುಕೊಂಡಿದೆ. ಮುಂಬರುವ ರಾಜ್ಯ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆ ಸೇರಿದಂತೆ ರಾಜ್ಯದೆಲ್ಲೆಡೆ ನಡೆಯುವ ಸಮಾವೇಶ ಮತ್ತು ಕಾರ್ಯಕ್ರಮಗಳು ಸೇರಿದಂತೆ ಎಲ್ಲ ರೀತಿಯ ರ್ಯಾಲಿಗಳಲ್ಲಿ ಮಹಿಳೆಯರ ಬಳಕೆಗೆ ಪೋರ್ಟಬಲ್ ಶೌಚಾಲಯ ನಿರ್ಮಿಸಲು ಉದ್ದೇಶಿಸಲಾಗಿದೆ.
ಈ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಅಧಿತಿ ಟಟ್ಕಾರೆ ಅವರು ಲಿಖಿತ ಭರವಸೆ ನೀಡಿದ್ದಾರೆ. Change.Org ಮೂಲಕ ಮಹಿಳೆಯರ ನೈರ್ಮಲ್ಯ ಕುರಿತು #HerRightToPee ಎಂಬ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಆಂದೋಲನ ನಡೆಸುತ್ತಿರುವ ತೀರ್ಥ ಸಮಂತ್ಗೆ ಸಚಿವೆ ಭರವಸೆ ನೀಡಿದ್ದಾರೆ. ಈ ಕುರಿತು ಮಾತನಾಡಿರುವ ಟಟ್ಕಾರೆ, "ಮುಖ್ಯಮಂತ್ರಿ ಏಕನಾಥ್ ಶಿಂಥೆ ಮತ್ತು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮತ್ತು ಅಜಿತ್ ಪವರ್ ಬಳಿ ಮನವಿ ಮಾಡುತ್ತೇನೆ. ಜಿಲ್ಲಾಧಿಕಾರಿಗಳು, ಪೊಲೀಸ್ ಆಯುಕ್ತರು ಮತ್ತು ಎಸ್ಪಿ ಸೇರಿದಂತೆ ಸಂಬಂಧಿಸಿದವರಿಗೂ ನಿರ್ದೇಶಿಸುತ್ತೇನೆ" ಎಂದು ಭರವಸೆ ಕೊಟ್ಟಿದ್ದಾರೆ.
ರಾಜಕೀಯ ಸಭೆ, ಸಮಾರಂಭಗಳು ಸೇರಿದಂತೆ ಅನೇಕ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಮಟ್ಟದಲ್ಲಿ ಸೇರುವ ಮಹಿಳೆಯರ ಶುಚಿತ್ವಕ್ಕೆ ವ್ಯವಸ್ಥೆ ಮಾಡುವುದಾಗಿ ಮನವಿ ಮಾಡುವುದಾಗಿಯೂ ಸಚಿವೆ ತಿಳಿಸಿದ್ದಾರೆ. ಮಹಿಳೆಯರಿಗೆ ಶುಚಿತ್ವಕ್ಕಾಗಿ ನಡೆಸಿದ ಈ ಆಂದೋಲನದ ಮನವಿಗೆ 2 ಸಾವಿರ ಮಂದಿ ಸಹಿ ಹಾಕಿದ್ದಾರೆ. ಬಿಜೆಪಿ, ಕಾಂಗ್ರೆಸ್, ಶಿವಸೇನೆ, ಶಿವಸೇನೆ-ಯುಬಿಟಿ, ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಬಣಗಳು, ಮಹಾರಾಷ್ಟ್ರ ನವನಿರ್ಮಾಣ ಸೇನೆ ಸೇರಿದಂತೆ ಅನೇಕ ರಾಜಕೀಯ ಪಕ್ಷಗಳು ಪೋರ್ಟಬಲ್ ಶೌಚಾಲಯ ನಿರ್ಮಾಣಕ್ಕೆ ಒತ್ತಾಯಿಸಿವೆ. ಮುಂಬರುವ ಸಂಸತ್ ಮತ್ತು ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಈ ವ್ಯವಸ್ಥೆಯನ್ನು ಜಾರಿಗೊಳಿಸುವಂತೆ ಸರ್ಕಾರವನ್ನು ಆಗ್ರಹಿಸಿದ್ದಾರೆ.