ವಾಷಿಂಗ್ಟನ್: ಕುಟುಂಬದ ಪೋಷಕಾಂಶ ಭದ್ರತೆ ಸುಧಾರಣೆ ಜೊತೆಗೆ ಮಕ್ಕಳಲ್ಲಿ ಬಿಎಂಐ ಕಡಿಮೆ ಮಾಡಲು ಆಹಾರವೇ ಔಷಧಿಯಾಗಿದೆ ಎಂದು ಹೊಸ ಅಧ್ಯಯನ ತಿಳಿಸಿದೆ. ಮಾಸ್ ಜನರಲ್ ಬ್ರಿಗ್ಯಾಮ್ ಹಾಸ್ಪಿಟಲ್ ಸಂಶೋಧಕರ ತಂಡ ಈ ಅಧ್ಯಯನ ನಡೆಸಿದೆ. ಸಾಂಕ್ರಾಮಿಕತೆ ಬಳಿಕ ಆಹಾರದ ಸಹಾಯವನ್ನು ವಿನಂತಿಸುವ ಕುಟುಂಬಗಳಿಗೆ ಸಾಪ್ತಾಹಿಕ ಸಸ್ಯ-ಆಧಾರಿತ ಆಹಾರವನ್ನು ನೀಡುವುದು ಮಕ್ಕಳಲ್ಲಿ ತೂಕ ಬದಲಾವಣೆಗಳನ್ನು ಉಂಟುಮಾಡುತ್ತದೆ ಎಂಬುದುದನ್ನು ಮೆಸಚ್ಯೂಸೆಟ್ ಜನರಲ್ ಹಾಸ್ಪಿಟಲ್ ಮತ್ತು ಬೊಸ್ಟೊನ್ ಚಿಲ್ಡ್ರನ್ ಆಸ್ಪತ್ರೆ ತನಿಖೆ ನಡೆಸಿದೆ.
ಆಹಾರ ಪ್ಯಾಕೇಜ್‌ಗಳ ಹೆಚ್ಚುತ್ತಿರುವ ಸ್ವೀಕೃತಿ ಮತ್ತು ಕಡಿಮೆಯಾದ ಬಿಎಂಐ ನಡುವಿನ ಸಂಬಂಧವನ್ನು ತಂಡವು ಕಂಡುಹಿಡಿದಿದೆ. ದೀರ್ಘಕಾಲದ ರೋಗ ತಡೆಯುವಲ್ಲಿ, ಬಾಲ್ಯದ ಸ್ಥೂಲಕಾಯತೆ ತಡೆಗಟ್ಟುವಲ್ಲಿ ಸಸ್ಯಾಧಾರಿತ ಆಹಾರಗಳು ಸಾಕಷ್ಟು ಸಹಾಯ ಮಾಡುತ್ತದೆ ಎಂಬುದು ಫಲಿತಾಂಶದಲ್ಲಿ ತಿಳಿದು ಬಂದಿದೆ ಎಂದು ಅಧ್ಯಯನ ತಿಳಿಸಿದೆ.
ಬಾಲ್ಯದಲ್ಲಿ ಮಕ್ಕಳಿಗೆ ಆರೋಗ್ಯಯುತ ತಿನ್ನುವ ಅಭ್ಯಾಸವನ್ನು ರೂಢಿಸುವುದು ಅವಶ್ಯಕವಾಗಿದೆ. ಇದರಿಂದ ಅವರಲ್ಲಿ ಮುಂದಿನ ಜೀವನದಲ್ಲಿ ಉಂಟಾಗುವ ಸ್ಥೂಲಕಾಯತೆಯನ್ನು ತಡೆಯಬಹುದು. ಆದರೆ, ಅನೇಕ ಕುಟುಂಬಗಳು ಅಂತಹ ಆರೋಗ್ಯ ಆಹಾರಗಳ ಲಭ್ಯತೆಯನ್ನು ಹೊಂದಿರುವುದಿಲ್ಲ ಎಂದು ಹಿರಿಯ ಲೇಖಕ ಲ್ಯೂರೆನ್ ಫಿಚ್ಟ್ನರ್ರ್ ತಿಳಿಸಿದ್ದಾರೆ. ಆರೋಗ್ಯಯುತ ಆಹಾರಗಳು ಮಕ್ಕಳ ದೀರ್ಘ ಜೀವನಕ್ಕೆ ಸಹಾಯ ಮಾಡುತ್ತದೆ. ಆರೋಗ್ಯಯುತ ಭವಿಷ್ಯದ ಜೊತೆಗೆ ಉತ್ತಮ ಹೃದಯನಾಳ ಮತ್ತು ಚಯಾಪಚಯನ ಆರೋಗ್ಯ ಸಾಧ್ಯತೆಯನ್ನು ಸಣ್ಣ ವಯಸ್ಸಿನಲ್ಲೇ ಹೊಂದುವಂತೆ ಮಾಡುತ್ತದೆ ಎಂದಿದ್ದಾರೆ.
2020ರಲ್ಲಿ ಆಹಾರ ಅಸುರಕ್ಷತೆಯೂ ಶೇ 55ರಷ್ಟು ಅಮೆರಿಕದಲ್ಲಿ ಹೆಚ್ಚಾಗಿದೆ. ಇದು ಶೇ 42ರಷ್ಟು ಮನೆಗಳ ಜೊತೆ ಮಕ್ಕಳ ಮೇಲೆ ಪರಿಣಾಮ ಬೀರಿದೆ. ಸಾಂಕ್ರಾಮಿಕತೆಯ ಆರ್ಥಿಕ ಅಂಶ, ಶಾಲೆಗಳು ಮುಚ್ಚಿದ ಪರಿಣಾಮ ಮತ್ತು ಆಹಾರ ಪೂರೈಕೆ ಸರಪಳಿಗೆ ತಡೆಯಂತಹ ಅನೇಕ ಅಂಶಗಳಿಂದ ಹೆಚ್ಚಾಗಿದೆ. ಆಹಾರ ಅಭದ್ರತೆ ಹೆಚ್ಚಾದ ಪರಿಣಾಮ ಮಕ್ಕಳಲ್ಲಿ ಸ್ಥೂಲಕಾಯತೆ ಹೆಚ್ಚಿದೆ. 2019ರಲ್ಲಿ 19.3ರಷ್ಟಿದ್ದ ಈ ಸಮಸ್ಯೆ 2020ರಲ್ಲಿ 22.4ರಷ್ಟಾಗಿದೆ. ಗುಣಮಟ್ಟ ಮತ್ತು ಸಾಕಷ್ಟು ಪ್ರಮಾಣದ ಆಹಾರದಂತಹ ಆಹಾರ ಅಭದ್ರತೆ ಸವಾಲಿಗೆ ಅನೇಕ ಕುಟುಂಬಗಳು ಹೋರಾಡುತ್ತವೆ.