ಹೈದರಾಬಾದ್:ಹಲವಾರು ಕಾರಣಗಳಿಂದಾಗಿ ಪ್ರತಿವರ್ಷ ಮಾನಸಿಕ ಸಮಸ್ಯೆಗಳು ಹೆಚ್ಚುತ್ತಿವೆ. ಆದರೆ ಮಾನಸಿಕ ಆರೋಗ್ಯವನ್ನು ಹಾನಿಗೊಳಿಸಿದ ಒಂದು ನಿರ್ದಿಷ್ಟ ಮತ್ತು ಸ್ಪಷ್ಟ ಕಾರಣವೆಂದರೆ ಕೋವಿಡ್-19 ಸಾಂಕ್ರಾಮಿಕ. ಸಾಂಕ್ರಾಮಿಕ ರೋಗದಿಂದಾಗಿ ಅನಾರೋಗ್ಯ, ಆರ್ಥಿಕ ಬಿಕ್ಕಟ್ಟು, ಭವಿಷ್ಯದ ಅನಿಶ್ಚಿತತೆ ಇತ್ಯಾದಿಗಳಿಗೆ ತುತ್ತಾಗುವ ಭಯವು, ಪ್ರಪಂಚದಾದ್ಯಂತದ ಎಲ್ಲರಲ್ಲೂ ಖಿನ್ನತೆ, ಆತಂಕ ಮತ್ತು ಒತ್ತಡಕ್ಕೆ ಕಾರಣವಾಗಿದೆ.
ಜೊತೆಗೆ ಪಾರ್ಕಿನ್ಸನ್, ಆಲ್ಝೈಮರ್, ಬುದ್ಧಿಮಾಂದ್ಯತೆಯಂತಹ ಕೆಲವು ನರವೈಜ್ಞಾನಿಕ ಕಾಯಿಲೆಗಳನ್ನು ಹೊಂದಿರುವ ಜನರು ಲಾಕ್ಡೌನ್ ಸಮಯದಲ್ಲಿ ಅಸಮರ್ಪಕ ಔಷಧ ಪೂರೈಕೆಯಿಂದಾಗಿ ಸಾಕಷ್ಟು ತೊಂದರೆ ಅನುಭವಿಸಿದರು. ಇದಲ್ಲದೇ ವೈವಾಹಿಕ ಭಿನ್ನಾಭಿಪ್ರಾಯ ಮತ್ತು ಕೌಟುಂಬಿಕ ಹಿಂಸಾಚಾರದ ಪ್ರಕರಣಗಳೂ ವರದಿಯಾಗಿವೆ ಮತ್ತು ಜನರು ಸಹಾಯಕ್ಕಾಗಿ ಮನೋವೈದ್ಯರನ್ನು ಸಂಪರ್ಕಿಸಿದರು. ಈ ವರ್ಷ ಜನರನ್ನು ಹೆಚ್ಚು ಬಾಧಿಸಿದ ಕೆಲವು ಮಾನಸಿಕ ಸಮಸ್ಯೆಗಳು ಇಲ್ಲಿವೆ.
ಉಲ್ಬಣಗೊಂಡ ಒತ್ತಡ ಮತ್ತು ಖಿನ್ನತೆಯ ಪ್ರಕರಣಗಳು:
ಈ ವರ್ಷದ ಆರಂಭದಿಂದಲೇ ಕೋವಿಡ್-19 ಪ್ರಾರಂಭವಾದ ತಕ್ಷಣ, ಪ್ರಕರಣಗಳು ಭುಗಿಲೆದ್ದವು ಮತ್ತು ದೇಶಗಳು ಲಾಕ್ಡೌನ್ಗೆ ಒಳಗಾದವು. ಆರೋಗ್ಯ ಮತ್ತು ಆರ್ಥಿಕ ಪರಿಸ್ಥಿತಿಗಳ ಕುರಿತು ಜನರಲ್ಲಿ ಚಿಂತೆಯಿತ್ತು. ಲಾಕ್ಡೌನ್ ಸಮಯದಲ್ಲಿ ಯಾರನ್ನೂ ಹೊರಗೆ ಹೋಗಲು ಅನುಮತಿಸದಿದ್ದಾಗ, ಜನರಿಗೆ ಜೈಲಿನಲ್ಲಿ ಸಿಕ್ಕಿಹಾಕಿಕೊಂಡಂತೆ ಭಾಸವಾಗತೊಡಗಿತು. ಇವೆಲ್ಲವೂ ಖಿನ್ನತೆಯ ಪ್ರಕರಣಗಳಲ್ಲಿ ತ್ವರಿತ ಏರಿಕೆಗೆ ಕಾರಣವಾಯಿತು.
ವೈರಸ್ ಸೋಂಕಿತರಲ್ಲಿ ಹೆಚ್ಚಿನವರಲ್ಲಿ ಖಿನ್ನತೆಯ ಪ್ರಕರಣಗಳು ಕೂಡಾ ಕಂಡುಬಂದವು. ಭಾರತದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪ್ರಕಾರ, ಸುಮಾರು 30% ಕೋವಿಡ್-19 ರೋಗಿಗಳು ಖಿನ್ನತೆ ಮತ್ತು ಆತಂಕದಿಂದ ಬಳಲುತ್ತಿದ್ದರು. ಇದಲ್ಲದೆ ಜನರು ಮನೆಯಲ್ಲಿ ದೀರ್ಘಕಾಲದವರೆಗೆ ಇದ್ದುದರಿಂದ, ಅವರಲ್ಲಿ ಪರಸ್ಪರ ಅಸಮಾಧಾನವು ಕೌಟುಂಬಿಕ ಹಿಂಸೆ ಮತ್ತು ಕೌಟುಂಬಿಕ ಘರ್ಷಣೆಗೆ ಕಾರಣವಾಯಿತು. ಇದು ಜನರಲ್ಲಿ ಒತ್ತಡ ಮತ್ತು ಖಿನ್ನತೆಯ ಭಾವನೆಯನ್ನು ಹೆಚ್ಚಿಸಿತು.
ಆಶ್ಚರ್ಯಕರ ಸಂಗತಿಯೆಂದರೆ ವಯಸ್ಕರು ಮಾತ್ರವಲ್ಲದೇ, ಮಕ್ಕಳು ಕೂಡ ಆತಂಕ ಮತ್ತು ಖಿನ್ನತೆಗೆ ತುತ್ತಾದರು. ಶಾಲೆಗಳು ಮತ್ತು ಕಾಲೇಜುಗಳ ಮುಚ್ಚುವಿಕೆ, ಆನ್ಲೈನ್ ತರಗತಿಗಳು ಮತ್ತು ಮನೆಯಲ್ಲೇ ಇರಲು ಒತ್ತಾಯಿಸುವುದು, ಆತಂಕ, ಚಡಪಡಿಕೆ, ಹೆಚ್ಚಿದ ಒತ್ತಡ ಹಾಗೂ ಖಿನ್ನತೆಗೆ ಕಾರಣವಾಯಿತು. ಇದರಿಂದಾಗಿ ಅನೇಕ ರಾಜ್ಯ ಸರ್ಕಾರಗಳು ಮಕ್ಕಳಿಗೆ ಆನ್ಲೈನ್ ಕೌನ್ಸಿಲಿಂಗ್ ಅವಧಿಗಳನ್ನು ಪ್ರಾರಂಭಿಸಿದವು.
ಆತ್ಮಹತ್ಯೆ ಪ್ರಕರಣಗಳಲ್ಲಿ ಹೆಚ್ಚಳ:
ಅಂಕಿ-ಅಂಶಗಳ ಪ್ರಕಾರ, ಪ್ರತಿ ವರ್ಷ ವಿಶ್ವದ ಸುಮಾರು 8 ಲಕ್ಷ ಜನರು ಮತ್ತು ನಮ್ಮ ದೇಶದಲ್ಲಿ ಸುಮಾರು 2-3 ಲಕ್ಷ ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಆದರೆ ಈ ವರ್ಷ ಅಂದರೆ 2020ರಲ್ಲಿ ಆತ್ಮಹತ್ಯೆ ಪ್ರಕರಣಗಳು ದ್ವಿಗುಣಗೊಂಡವು. ಖಿನ್ನತೆ, ಹತಾಶೆ ಮತ್ತು ಅನಿಶ್ಚಿತತೆ ಕೆಲವು ಜನಪ್ರಿಯ ಚಲನಚಿತ್ರ ಮತ್ತು ಟಿವಿ ತಾರೆಯರು ಸೇರಿದಂತೆ ಎಲ್ಲಾ ವಯಸ್ಸಿನ ಜನರಲ್ಲಿ ಆತ್ಮಹತ್ಯಾ ಪ್ರವೃತ್ತಿಯನ್ನು ಪ್ರಚೋದಿಸಿತು. ಆತ್ಮಹತ್ಯೆ ಪ್ರಕರಣಗಳ ಉಲ್ಬಣವನ್ನು ನೋಡಿದ ರಾಜ್ಯ ಮತ್ತು ರಾಷ್ಟ್ರಮಟ್ಟದ ಅನೇಕ ಮನೋವೈದ್ಯರು ಒಗ್ಗೂಡಿ, ಆನ್ಲೈನ್ ಕೌನ್ಸೆಲಿಂಗ್ ಮತ್ತು ಮನೋವೈದ್ಯಕೀಯ ಸಲಹೆಗಳನ್ನು ನೀಡಿದರು.