ಹೈದರಾಬಾದ್: ಫಲವಂತಿಕೆಗೆ ಎದುರಾಗುವ ಪ್ರಮುಖ ಸಮಸ್ಯೆ ಎಂದರೆ ಪಿಸಿಒಎಸ್. ಅಂಕಿ - ಅಂಶಗಳ ಪ್ರಕಾರ, ಏಳರಲ್ಲಿ ಒಬ್ಬ ಮಹಿಳೆ ಈ ಪಿಸಿಒಎಸ್ ಸಮಸ್ಯೆಗೆ ಗುರಿಯಾಗಿದ್ದಾರೆ. ಇನ್ನು ಶೇ 50ರಷ್ಟು ಮಂದಿಗೆ ತಮಗಿರುವ ಪಿಸಿಒಎಸ್ ಸಮಸ್ಯೆ ಬಗ್ಗೆ ಅರಿವಿಲ್ಲ. ಪಿಸಿಒಎಸ್ ಸಮಸ್ಯೆ ಬಂದರೆ, ಮಕ್ಕಳಾಗಲು ಸಮಸ್ಯೆ ಎಂಬ ಭಯ ಅನೇಕ ಮಂದಿಯದ್ದು. ಆದರೆ, ತಜ್ಞರು ಈ ಬಗ್ಗೆ ಯಾವುದೇ ಭಯ ಬೇಡ ಎನ್ನುತ್ತಾರೆ. ಇದು ದೀರ್ಘಾವಧಿ ಸಮಸ್ಯೆ ಆದರೂ ನಿಯಂತ್ರಿಸಬಹುದಾಗಿದೆ. ಇದಕ್ಕೆ ಮಾಡಬೇಕಿರುವ ಮೊದಲ ಪ್ರಯತ್ನ ಎಂದರೆ ಜೀವನಶೈಲಿಯ ಬದಲಾವಣೆ ಆಗಿದೆ.
ತೂಕ ನಷ್ಟ: ಪಿಸಿಒಎಸ್ ಎಂಬುದು ದೇಹದಲ್ಲಿನ ಹಾರ್ಮೋನ್ ಅಸಮತೋಲನದಿಂದ ಉಂಟಾಗುವ ಸಮಸ್ಯೆಯಾಗಿದೆ. ಇದು ಕ್ರಮೇಣ ಅಧಿಕ ತೂಕಕ್ಕೆ ಕಾರಣವಾಗುತ್ತದೆ. ಇದರಿಂದ ಗರ್ಭಧರಿಸುವ ಅವಕಾಶ ಕಡಿಮೆಯಾಗುವ ಸಾಧ್ಯತೆ ಇದೆ. ತಜ್ಞರು ಹೇಳುವಂತೆ, ಇದಕ್ಕೆ ಮೊದಲು ತೂಕ ನಿಯಂತ್ರಣ ಮಾಡುವುದು ಅವಶ್ಯವಾಗಿದೆ. ಇದಕ್ಕಾಗಿ ಬಿಎಂಐ ಪರಿಶೀಲನೆ ಅಗತ್ಯವಾಗಿದೆ. ತಜ್ಞರು ಹೇಳುವಂತೆ ಇದು ಸಾಮಾನ್ಯಕ್ಕಿಂತ ಹೆಚ್ಚಿದ್ದರೆ ತೂಕವನ್ನು ನಷ್ಟ ಮಾಡಿ ಬಳಿಕ ತಾಯ್ತನದ ಯೋಜನೆ ರೂಪಿಸಬೇಕು. ಇಲ್ಲದೇ ಹೋದಲ್ಲಿ ಇದು ನಿಮ್ಮ ನಿಮ್ಮ ಮತ್ತು ಮಗು ಬೆಳೆಯುವ ಗರ್ಭದ ಆರೋಗ್ಯವನ್ನು ಹಾಳು ಮಾಡುತ್ತದೆ. ಈ ಹಿನ್ನಲೆ ತೂಕ ನಷ್ಟ ಎಂಬುದು ಅಗತ್ಯವಾಗಿದ್ದು, ವ್ಯಾಯಾಮ ನಿಮ್ಮ ದಿನಚರಿಯ ಭಾಗವಾಗಬೇಕು. ದಿನಕ್ಕೆ ಕನಿಷ್ಟ ಅರ್ಧ ಗಂಟೆಗಳಷ್ಟಾದರೂ ವ್ಯಾಯಾಮ ಮಾಡುವುದು ಅಗತ್ಯ. ಇದರ ಜೊತೆಗೆ ವೈದ್ಯರಿಂದ ಆರೋಗ್ಯ ತಪಾಸಣೆ ನಡೆಸಿ, ಅವರ ಮಾರ್ಗ ದರ್ಶನ ಪಡೆಯುವುದು ಅಗತ್ಯವಾಗುತ್ತದೆ
ಸಮಯ ತಿಳಿಯಿರಿ: ತಜ್ಞರು ಹೇಳುವಂತೆ ಪಿಸಿಒಎಸ್ ಸಮಸ್ಯೆಯಿಂದಾಗಿ ಅನೇಕ ಮಂದಿ ಪ್ರತಿ ತಿಂಗಳು ಅನಿಮಿಯಿತ ಋತುಚಕ್ರಕ್ಕೆ ಒಳಗಾಗುತ್ತಾರೆ. ಇದನ್ನು ಪತ್ತೆ ಮಾಡಿ, ನಿಯಮಿತವಾಗಿ ಋತುಚಕ್ರಕ್ಕೆ ಒಳಗಾಗುವಂತೆ ಅಗತ್ಯ ಕ್ರಮ ನಡೆಸಬೇಕು. ಇಲ್ಲದೇ ಹೋದಲ್ಲಿ ಗರ್ಭ ಧರಿಸುವುದು ಕಷ್ಟ ಸಾಧ್ಯವಾಗುತ್ತದೆ. ಕೆಲವೊಮ್ಮೆ ಅಧಿಕ ತೂಕ ಕೂಡ ಅನಿಮಿಯತ ಋತುಚಕ್ರಕ್ಕೆ ಕಾರಣವಾಗುತ್ತದೆ. ಇದು ಸಮಯಕ್ಕೆ ಸರಿಯಾಗಿ ಅಂಡಾಣು ಬಿಡುಗಡೆಯಾಗಲು ಅಡ್ಡಿಯಾಗುತ್ತದೆ. ಈ ಹಿನ್ನೆಲೆಯಲ್ಲಿ ನಿಮ್ಮ ಅಂಡಾಣು ಬಿಡುಗಡೆಯಾಗುವ ಸಮಯವನ್ನು ಪತ್ತೆ ಮಾಡುವುದು ಅಗತ್ಯವಾಗಿದ್ದು, ಇದಕ್ಕಾಗಿ ಅನೇಕ ಕೆಲವು ಆನ್ಲೈನ್ ಆ್ಯಪ್ ಮತ್ತು ಆನ್ಲೈನ್ ಲೆಕ್ಕಾಚಾರ ನಡೆಸಬಹುದಾಗಿದೆ