ನವದೆಹಲಿ : ಭಾರತದಲ್ಲಿ 60 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ 10 ಮಿಲಿಯನ್‌ಗಿಂತಲೂ (1 ಕೋಟಿ) ಹೆಚ್ಚು ವಯಸ್ಕರು ಬುದ್ಧಿಮಾಂದ್ಯತೆ ಹೊಂದಿರಬಹುದು. ಈ ಪ್ರಮಾಣವನ್ನು ಅಮೆರಿಕ ಮತ್ತು ಇಂಗ್ಲೆಂಡ್ನಂತ ದೇಶಗಳಲ್ಲಿ ಇರುವ ವಯಸ್ಕ ಬುದ್ಧಿಮಾಂದ್ಯತೆಯ ಪ್ರಮಾಣಕ್ಕೆ ಹೋಲಿಸಬಹುದು ಎಂದು ಸಂಶೋಧನೆಯೊಂದರಲ್ಲಿ ಹೇಳಲಾಗಿದೆ. ಈ ರೀತಿಯ ಸಂಶೋಧನೆ ಕೈಗೊಂಡಿದ್ದು ಇದೇ ಮೊದಲ ಬಾರಿಗೆ ಎನ್ನಲಾಗಿದೆ. ಈ ಸಂಶೋಧನೆಯಲ್ಲಿ 31,477 ಹಿರಿಯ ವಯಸ್ಕರಿಂದ ಪಡೆಯಲಾದ ಡೇಟಾವನ್ನು ವಿಶ್ಲೇಷಿಸಲು ಅರೆ ಮೇಲ್ವಿಚಾರಣೆಯ ಮಶೀನ್ ಲರ್ನಿಂಗ್ ಎಂದು ಕರೆಯಲ್ಪಡುವ ಕೃತಕ ಬುದ್ಧಿಮತ್ತೆ (AI) ತಂತ್ರವನ್ನು ಬಳಸಲಾಗಿದೆ. ಸಂಶೋಧನಾ ವರದಿಯು ನ್ಯೂರೋಪಿಡೆಮಿಯಾಲಜಿ ಜರ್ನಲ್‌ನಲ್ಲಿ ಪ್ರಕಟವಾಗಿದೆ.
ಭಾರತದಲ್ಲಿ 60 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ವಯಸ್ಕರಲ್ಲಿ ಬುದ್ಧಿಮಾಂದ್ಯತೆಯ ಹರಡುವಿಕೆಯ ಪ್ರಮಾಣವು ಶೇಕಡಾ 8.44 ಆಗಿರಬಹುದು ಎಂದು ಅಂತಾರಾಷ್ಟ್ರೀಯ ಸಂಶೋಧಕರ ತಂಡವು ಕಂಡುಹಿಡಿದಿದೆ. ಈ ಪ್ರಮಾಣವು ದೇಶದ 10.08 ಮಿಲಿಯನ್ ಹಿರಿಯ ವಯಸ್ಕರಿಗೆ ಸಮನಾಗಿರುತ್ತದೆ. ಇದೇ ವಯಸ್ಕರಲ್ಲಿ ಇದು ಅಮೆರಿಕದಲ್ಲಿ ಶೇಕಡಾ 8.8, ಯುಕೆಯಲ್ಲಿ ಶೇಕಡಾ 9 ಮತ್ತು ಜರ್ಮನಿ ಮತ್ತು ಫ್ರಾನ್ಸ್‌ನಲ್ಲಿ ಶೇಕಡಾ 8.5 ರಿಂದ 9 ರ ನಡುವೆ ಇದೆ.
ವಯಸ್ಸಾದವರು, ಮಹಿಳೆಯರು, ಶಿಕ್ಷಣ ಪಡೆಯದವರು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವವರಲ್ಲಿ ಬುದ್ಧಿಮಾಂದ್ಯತೆಯ ಹರಡುವಿಕೆ ಹೆಚ್ಚಾಗಿರುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ನಮ್ಮ ಸಂಶೋಧನೆಯು ಭಾರತದಲ್ಲಿ 30,000 ಕ್ಕಿಂತ ಹೆಚ್ಚು ವಯಸ್ಸಾದ ವಯಸ್ಕರನ್ನು ಒಳಗೊಂಡಿರುವ ಭಾರತದಲ್ಲಿನ ಮೊದಲ ಮತ್ತು ಏಕೈಕ ರಾಷ್ಟ್ರಮಟ್ಟದಲ್ಲಿ ವಯಸ್ಸಾದವರ ಅಂಕಿ - ಅಂಶಗಳನ್ನು ಆಧರಿಸಿದೆ ಎಂದು ಸಂಶೋಧನಾ ವರದಿಯ ಸಹ - ಲೇಖಕ ಮತ್ತು ಸರ್ರೆ ವಿಶ್ವವಿದ್ಯಾನಿಲಯದ ಆರೋಗ್ಯ ದತ್ತಾಂಶ ವಿಜ್ಞಾನದ ಉಪನ್ಯಾಸಕರಾದ ಹಾಮಿಯೊ ಜಿನ್ ಹೇಳಿದರು.