2050ರ ವೇಳೆ ಜಾಗತಿಕವಾಗಿ ಸರಿಸುಮಾರು ಒಂದು ಬಿಲಿಯನ್ (100 ಕೋಟಿ) ಜನರು ಕೀಲು ನೋವಿನ ಪ್ರಮುಖ ಸಮಸ್ಯೆಯಾಗಿರುವ ಅಸ್ಥಿ ಸಂಧಿವಾತಕ್ಕೆ ಗುರಿಯಾಗುತ್ತಾರೆ ಎಂದು ಲ್ಯಾನ್ಸೆಟ್ ರೆಮ್ಯೂಟೊಲೊಜಿ ಜರ್ನಲ್‌ನಲ್ಲಿ ಸಂಶೋದನಾತ್ಮಕ ವರದಿ ಪ್ರಕಟಿಸಲಾಗಿದೆ. ಪ್ರಸ್ತುತ ಜಗತ್ತಿನಲ್ಲಿ 30 ವರ್ಷ ಮೇಲ್ಪಟ್ಟ ಶೇ 15ರಷ್ಟು ಮಂದಿ ಅಸ್ಥಿ ಸಂಧಿವಾತದಿಂದ ನೋವು ಅನುಭವಿಸುತ್ತಿದ್ದಾರೆ. ಈ ಅಧ್ಯಯನದಲ್ಲಿ 200 ದೇಶಗಳ 30 ವರ್ಷಗಳ ಕಾಲದ ಅಂದರೆ 1990-2020ರ ಅಸ್ಥಿಸಂಧಿವಾತದ ದತ್ತಾಂಶ ವಿಶ್ಲೇಷಣೆ ಮಾಡಲಾಗಿದೆ.
1990ರಲ್ಲಿ 256 ಮಿಲಿಯನ್ ಮಂದಿ ಇಂಥ ಸಮಸ್ಯೆಗೆ ಗುರಿಯಾಗಿದ್ದರು. 2020ರಲ್ಲಿ 5,695 ಮಿಲಿಯನ್ ಮಂದಿ ಬಾಧೆ ಅನುಭವಿಸುತ್ತಿದ್ದು, ಈ ಸಂಖ್ಯೆ ಶೇ 132ರಷ್ಟು ಏರಿಕೆ ಕಂಡಿದೆ ಎಂದು ವಾಷಿಂಗ್ಟನ್ನ ಇನ್ಸಿಟಿಟ್ಯೂಟ್ ಫಾರ್ ಹೆಲ್ತ್ ಮೆಟ್ರಿಕ್ಟ್ ಆ್ಯಂಡ್ ಎವಲ್ಯೂಷನ್ (ಐಎಚ್ಎಂಇ) ತಿಳಿಸಿದೆ. ಅಧ್ಯಯನವು ಜಾಗತಿಕವಾಗಿ ಶೀಘ್ರವಾಗಿ ಬೆಳೆಯುತ್ತಿರುವ ಅಸ್ಥಿ ಸಂಧಿವಾತ ಪ್ರಕರಣಗಳನ್ನು ಮುಖ್ಯವಾಗಿ ವಯಸ್ಸಾದವರು, ಸ್ಥೂಲಕಾಯ ಹೊಂದಿರುವವರಲ್ಲಿ ತೋರಿಸಿದೆ.
ಸ್ಥೂಲಕಾಯ ಅಥವಾ ಅಧಿಕ ಬಾಡಿ ಮಾಸ್ ಇಂಡೆಕ್ಸ್ (ಬಿಎಂಐ) ಅಸ್ಥಿ ಸಂಧಿವಾತಕ್ಕೆ ಪ್ರಮುಖ ಕಾರಣ ಎಂದು ಅಧ್ಯಯನ ಕಂಡುಕೊಂಡಿದೆ. ಸ್ಥೂಲಕಾಯ ಸಮಸ್ಯೆ ಹೆಚ್ಚಾದಂತೆಲ್ಲ ಸಂಧಿವಾತ ಬಾಧೆಯೂ ಹೆಚ್ಚು. 1990ರಲ್ಲಿ ಮೊದಲ ವರ್ಷದ ಅಧ್ಯಯನದಲ್ಲಿ ಸ್ಥೂಲಕಾಯತೆಯಿಂದ ಅಸ್ಥಿಸಂಧಿವಾತದ ಸಮಸ್ಯೆ ಶೇ 16ರಷ್ಟು ಕಂಡುಬಂದಿದೆ. ಇದು 2020ರಲ್ಲಿ ಶೇ 20ರಷ್ಟು ಬೆಳವಣಿಗೆ ಕಂಡಿದೆ. ಜಾಗತಿಕ ಅಸ್ಥಿಸಂಧಿವಾತದ ಹೊರೆಯನ್ನು ಶೇ 20ರಷ್ಟು ತಗ್ಗಿಸಬಹುದು. ಅದು ಜನರಿಗೆ ಸ್ಥೂಲಕಾಯದ ಕುರಿತು ಪರಿಣಾಮಕಾರಿಯಾಗಿ ಮಾಹಿತಿ ನೀಡಿದಾಗ ಮಾತ್ರ ಸಾಧ್ಯ ಎಂದು ಅಧ್ಯಯನ ಹೇಳಿದೆ.