ನ್ಯೂಯಾರ್ಕ್ (ಅಮೆರಿಕ): ಒಮಿಕ್ರಾನ್ ಸೋಂಕು ಸಣ್ಣ ಮಕ್ಕಳಿಗೆ ಅಪಾಯಕಾರಿ. ಉಸಿರಾಟದ ನಾಳಗಳನ್ನು ದುರ್ಬಲಗೊಳಿಸುವ ಕ್ರೂಪ್ ಸೋಂಕಿಗೆ ಒಮಿಕ್ರಾನ್ ದಾರಿ ಮಾಡಿಕೊಡಲಿದ್ದು, ಇದು ಮಕ್ಕಳಲ್ಲಿ ಹೃದಯಾಘಾತಕ್ಕೂ ಕಾರಣವಾಗಬಹುದು ಎಂದು ಅಮೆರಿಕದ ಸಂಶೋಧನಾ ತಂಡ ಹೇಳಿದೆ.
ಕ್ರೂಪ್ ಎನ್ನುವುದು ಶ್ವಾಸನಾಳದ ಮೇಲ್ಭಾಗದಲ್ಲಿ ಉಸಿರಾಟಕ್ಕೆ ಸಂಬಂಧಿಸಿದ ಸೋಂಕಾಗಿದೆ. ಇದನ್ನು ವೈದ್ಯಕೀಯವಾಗಿ ಲಾರಿಂಗೊಟ್ರಾಕೀಟಿಸ್ ಎನ್ನಲಾಗುತ್ತದೆ. ಇದು ಮಕ್ಕಳಲ್ಲಿ ಕಾಣಿಸಿಕೊಳ್ಳುವ ಕಾಯಿಲೆಯಾಗಿದ್ದು, ಉಸಿರಾಟಕ್ಕೆ ತೀವ್ರ ತೊಂದರೆ ಉಂಟು ಮಾಡಲಿದೆ. ಅಮೆರಿಕದ ಕೊಲೊರಾಡೋ ಮತ್ತು ವಾಯುವ್ಯ ವಿಶ್ವವಿದ್ಯಾಲಯಗಳ ಸಂಶೋಧಕರ ತಂಡವು SARS-CoV-2 ಸೋಂಕಿನೊಂದಿಗೆ ಆಸ್ಪತ್ರೆಗೆ ದಾಖಲಾದ 18,849 ಮಕ್ಕಳನ್ನು ಪರೀಕ್ಷೆಗೆ ಒಳಪಡಿಸಿ ಇದನ್ನು ಪತ್ತೆ ಹಚ್ಚಿದೆ.
ಒಮಿಕ್ರಾನ್ ಉಲ್ಬಣಗೊಂಡಿದ್ದ ಸಮಯದಲ್ಲದೇ ಗಂಟಲಿನ ಮೇಲ್ಭಾಗದಲ್ಲಿ ಈ ತೊಂದರೆ ಹೆಚ್ಚಾಗಿರುವುದು ಪತ್ತೆಯಾಗಿದೆ. ಈ ಸೋಂಕಿನಿಂದ ಆಸ್ಪತ್ರೆಗೆ ದಾಖಲಾದ ಐದನೇ ಒಂದರಷ್ಟು ಮಕ್ಕಳಲ್ಲಿ ಇದು ತೀವ್ರವಾಗಿತ್ತು. ಸುಮಾರು 384 ಮಕ್ಕಳು ಮೇಲ್ಭಾಗದ ಶ್ವಾಸನಾಳದ ಸೋಂಕನ್ನು ಹೊಂದಿದ್ದರು. 81 ಜನ ಮಕ್ಕಳು ತೀವ್ರವಾದ ಸೋಂಕು, ವೆಂಟಿಲೇಷನ್ಗೆ ಒಳಗಾಗಿ, ವಾಸೋಪ್ರೆಸರ್ ಅಥವಾ ಎಕ್ಸ್‌ಟ್ರಾಕಾರ್ಪೊರಿಯಲ್ ಮೆಂಬರೇನ್ ಆಕ್ಸಿಜನ್ಗೆ ಒಳಗಾಗಿ ಮೃತಪಟ್ಟಿದ್ದಾರೆ ಎಂದು ಸಂಶೋಧಕರ ತಂಡ ತಿಳಿಸಿದೆ.
ಒಮಿಕ್ರಾನ್ ಪೂರ್ವಕ್ಕೆ ಹೋಲಿಸಿದರೆ ಓಮಿಕ್ರಾನ್ ಬಂದ ನಂತರವೇ ಮಕ್ಕಳಲ್ಲಿ ಇದರ ಸಮಸ್ಯೆ ಅಧಿಕವಾಗಿದೆ. ಮೇಲ್ಭಾಗದ ಶ್ವಾಸನಾಳದ ಸೋಂಕನ್ನು ಹೊಂದಿರುವ ಮಕ್ಕಳಿಗೆ ಓಮಿಕ್ರಾನ್ ತೀವ್ರವಾದ ನಂತರ ಹೃದಯಾಘಾತದ ಅಪಾಯ ಅಧಿಕ ಇರುತ್ತದೆ. ಇಂತಹ ಮಕ್ಕಳಿಗೆ ನೆಬ್ಯುಲೈಸ್ಡ್ ರೇಸ್ಮಿಕ್ ಎಪಿನ್ಫ್ರಿನ್, ಹೀಲಿಯಂ ಹಾಗೂ ಇಂಟ್ಯೂಬೇಶನ್ನನ್ನು ನೀಡುವುದು ಸೇರಿದಂತೆ ತೀವ್ರ ನಿಗಾ ಘಟಕದಲ್ಲಿನ ಚಿಕಿತ್ಸೆ ಅಗತ್ಯವಾಗಲಿದೆ ಎಂದು ಸಂಶೋಧಕರಲ್ಲಿ ಒಬ್ಬರಾದ ಬ್ಲೇಕ್ ಮಾರ್ಟಿನ್ ತಿಳಿಸಿದ್ದಾರೆ.