ಕೋವಿಡ್ ಮಹಾಮಾರಿಯ ಹರಡುವಿಕೆಯನ್ನು ತಡೆಗಟ್ಟಲು ದೇಶಾದ್ಯಂತ ಲಾಕ್ಡೌನ್ ಹೇರಲಾಗಿತ್ತು. ಈ ಲಾಕ್ಡೌನ್ನಿಂದಾಗಿ ಒಂದು ರೀತಿಯಲ್ಲಿ ತಮ್ಮ ಕುಟುಂಬದಿಂದ ದೂರವೇ ಉಳಿದಿದ್ದ ಹಲವರು ತಮ್ಮ ಮನೆಯಲ್ಲೇ ಉಳಿಯುವಂತಾಗಿ, ಕುಟುಂಬ ಸದಸ್ಯರೊಂದಿಗೆ ಕಾಲ ಕಳೆಯುವಂತಾಯಿತು. ಹೀಗಿದ್ದರೂ ಜನಸಾಮಾನ್ಯರು ಹಲವು ಸವಾಲುಗಳನ್ನೂ ಎದುರಿಸಬೇಕಾಯ್ತು.
ಈ ಲಾಕ್ಡೌನ್ ಹಲವರಿಗೆ ವರದಾನವಾಗಿದ್ದರೆ, ಇನ್ನು ಕೆಲವರ ಆರೋಗ್ಯದಲ್ಲಿ ಏರುಪೇರು ಉಂಟಾಯ್ತು. ಇದಕ್ಕೊಂದು ಸಣ್ಣ ನಿದರ್ಶನ ಇಲ್ಲಿದೆ.
14 ವರ್ಷದ ಸ್ವಯಂ ಶರ್ಮಾ ಎಂಬ ಬಾಲಕ, 9ನೇ ತರಗತಿಯ ವಿದ್ಯಾರ್ಥಿ. ಲಾಕ್ಡೌನ್ ಸಮಯದಲ್ಲಿ ಮನೆಯಲ್ಲೇ ಇದ್ದಿದ್ದರಿಂದ ಈತ ಹೆಚ್ಚಿನ ಸಮಯವನ್ನು ಟಿವಿ ನೋಡುವುದು, ವಿಡಿಯೋ ಗೇಮ್ ಆಡುವುದು, ತಿಂಡಿ ತಿನ್ನುವುದರಲ್ಲೇ ಕಳೆಯುತ್ತಿದ್ದ. ಇಷ್ಟೇ ಅಲ್ಲ ಮೊದಲಿಗಿಂತ ಹೆಚ್ಚು ಸಮಯ ನಿದ್ದೆ ಮಾಡುತ್ತಿದ್ದ. ಇದರ ಪರಿಣಾಮವಾಗಿ ಆತನ ದೇಹದ ತೂಕ ಕ್ರಮೇಣವಾಗಿ ಹೆಚ್ಚಾಗತೊಡಗಿತು. ಆರಂಭದಲ್ಲಿ ಇದು ಅತನ ಪೋಷಕರಿಗೆ ಸಾಮಾನ್ಯವೆಂದು ಅನ್ನಿಸತೊಡಗಿತು. ಆದರೆ ವಿಷಯ ಅಷ್ಟಕ್ಕೇ ನಿಲ್ಲಲಿಲ್ಲ. ಸಣ್ಣಪುಟ್ಟ ಕೆಲಸ ಮಾಡಿದಾಗಲೂ ಆತ ಸುಸ್ತಾದಾಗ ಪೋಷಕರು ಕೊಂಚ ಕಾಳಜಿ ವಹಿಸಲು ಪ್ರಾರಂಭಿಸಿರು. ಬಳಿಕ ಉಸಿರಾಡಲು ಕೂಡಾ ಬಾಲಕನಿಗೆ ತೊಂದರೆಯಾದಾಗ ಗಾಬರಿಗೊಂಡ ಪೋಷಕರು, ವೈದ್ಯರ ಸಲಹೆ ಪಡೆದರು. ವೈದ್ಯರ ಸಲಹೆ ಮೇರೆಗೆ ಔಷಧಿಗಳ ಜೊತೆಗೆ, ಆತ ತನ್ನ ಜೀವನಶೈಲಿಯನ್ನು ಬದಲಾಯಿಸಿದ. ಇದರಿಂದಾಗಿ ಈಗ ಆತನಲ್ಲಿ ನಿಧಾನವಾದ ಮತ್ತು ಗಮನಾರ್ಹ ಸುಧಾರಣೆಯಾಗಿದೆ.
ಲಾಕ್ಡೌನ್ ಸಂದರ್ಭದಲ್ಲಿ ಬಾಲಕ ಸ್ವಯಂ ಒಬ್ಬನೇ ಅಲ್ಲ. ತನೀಶಾ (16), ರಾಘವ್ (16), ಕೋಯಲ್ (13) ಮತ್ತು ಕೌಸ್ತುಭ್ (10) ಎಂಬ ಸಣ್ಣ ವಯಸ್ಸಿನ ಬಾಲಕ ಬಾಲಕಿಯರು ಕೂಡಾ ಇದೇ ಸಮಸ್ಯೆಯನ್ನು ಎದುರಿಸಿದ್ದಾರೆ.
ಹೌದು, ಬೊಜ್ಜು ಅಥವಾ ಸ್ಥೂಲಕಾಯ ವಯಸ್ಕರಲ್ಲಿ ಮಾತ್ರವಲ್ಲ. ಮಕ್ಕಳಲ್ಲೂ ಈ ಸಮಸ್ಯೆ ಕಂಡುಬರುತ್ತದೆ. ದೇಹದ ತೂಕ ಹೆಚ್ಚಾಗುವುದು ಮಕ್ಕಳಲ್ಲಿ ಸ್ಥೂಲಕಾಯಕ್ಕೆ ಕಾರಣವಾಗುತ್ತದೆ. ಅದಕ್ಕೆ ಸಂಬಂಧಿಸಿದಂತೆ, ಈಟಿವಿ ಭಾರತವು ಮಕ್ಕಳ ತಜ್ಞರಾದ ಡಾ.ಸೋನಾಲಿ ನವಲೆ ಪೂರಾಂಡರೆ ಅವರೊಂದಿಗೆ ಮಾತನಾಡಿದ್ದು, ಈ ಸಮಸ್ಯೆ ಬಗ್ಗೆ ವೈದ್ಯರು ಈ ರೀತಿ ವಿವರಿಸಿದ್ದಾರೆ.
ಬೊಜ್ಜಿಗೆ ಸಂಬಂಧಿಸಿದ ಸಮಸ್ಯೆಗಳು...
ಸಾಮಾನ್ಯವಾಗಿ, ಅನಾರೋಗ್ಯಕರ ಆಹಾರ ಪದ್ಧತಿ ಮತ್ತು ಜೀವನಶೈಲಿಯ ಪರಿಣಾಮವಾಗಿ, ಯಾವುದೇ ವಯಸ್ಸಿನವರು ಬೊಜ್ಜು ಸಮಸ್ಯೆ ಎದುರಿಸುತ್ತಾರೆ. ಕೆಲವೊಮ್ಮೆ ಇದು ಅನುವಂಶಿಕವಾಗಿ ಅಥವಾ ಹಾರ್ಮೋನುಗಳ ಸಮಸ್ಯೆಯಿಂದ, ಅಥವಾ ಇನ್ನೂ ಕೆಲ ಸಂದರ್ಭದಲ್ಲಿ ಕೆಲವು ಕಾಯಿಲೆಗಳಿಂದಲೂ ಬರಬಹುದು. ಆದರೆ ಈಗ ಇರುವ ಸನ್ನಿವೇಶದಲ್ಲಿ ಪ್ರತಿಯೊಂದು ರೋಗವು ಸ್ವಲ್ಪ ಹೆಚ್ಚು ಆತಂಕ ಹಾಗೂ ಭಯದ ಜೊತೆಗೆ ಬರುತ್ತದೆ ಎಂದು ಡಾ.ಸೋನಾಲಿ ವಿವರಿಸುತ್ತಾರೆ.