ಕ್ಯಾನ್ಸರ್ ಮತ್ತು ಅದರ ನಿವಾರಣೆಗಾಗಿ ತೆಗೆದುಕೊಳ್ಳುವ ಚಿಕಿತ್ಸೆಗಳು ಹಾಗೂ ಅವುಗಳಿಂದ ರೋಗಿಯ ದೇಹದ ಮೇಲೆ ಹಲವು ಪರಿಣಾಮಗಳುಂಟಾಗುತ್ತವೆ. ಆಹಾರ ಸ್ವೀಕರಿಸುವ ವಿಧಾನದಲ್ಲಿ ಬದಲಾವಣೆಯಾಗಬಹುದು. ಕಳೆದ 21 ವರ್ಷಗಳಿಂದ ಪೌಷ್ಠಿಕಾಂಶ ಶಿಕ್ಷಣದಲ್ಲಿ ಸಮೃದ್ಧ ಅನುಭವ ಹೊಂದಿರುವ, ಗೋವಾದ ಪಣಜಿಯಲ್ಲಿ ಪೌಷ್ಟಿಕ ತಜ್ಞೆಯಾಗಿ ಕಾರ್ಯ ನಿರ್ವಹಿಸುತ್ತಿರುವ ರೋಹಿಣಿ ದಿನೀಜ್ ಅವರೊಂದಿಗೆ ಈಟಿವಿ ಭಾರತ ಸುಖೀಭವ ತಂಡ ಮಾತನಾಡಿ ಹಲವು ಮಾಹಿತಿಗಳನ್ನ ಕಲೆ ಹಾಕಿದೆ.
ಚಿಕಿತ್ಸೆಯ ಮೊದಲು ಮತ್ತು ನಂತರ ಸರಿಯಾದ ರೀತಿಯ ಆಹಾರವನ್ನು ಸೇವಿಸುವುದು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದರಿಂದಾಗಿ ಸೋಂಕಿನ ಅಪಾಯ ಕಡಿಮೆ ಮಾಡಬಹುದು. ಶಸ್ತ್ರಚಿಕಿತ್ಸೆ, ಕೀಮೋಥೆರಪಿ ಅಥವಾ ವಿಕಿರಣದ ಸಮಯದಲ್ಲಿ ಹಾನಿಗೊಳಗಾದ ಅಂಗಾಂಶಗಳನ್ನು ಉತ್ತಮವಾಗಿ, ಹೆಚ್ಚು ಶಕ್ತಿಯುತವಾಗಿ ಪುನರ್ ರ್ನಿರ್ಮಿಸಲು, ಸೂಕ್ತವಾದ ತೂಕವನ್ನು ಕಾಪಾಡಿಕೊಳ್ಳಲು ಅಥವಾ ಮರಳಿ ಪಡೆಯಲು ಸಹಾಯ ಮಾಡುತ್ತದೆ. ತೂಕ ಕಳೆದುಕೊಂಡರೂ ಚಿಕಿತ್ಸೆಯ ಅಡ್ಡಪರಿಣಾಮಗಳನ್ನು ಉತ್ತಮವಾಗಿ ನಿಭಾಯಿಸಿ ಮತ್ತು ವೇಗವಾಗಿ ಚೇತರಿಸಿಕೊಳ್ಳಲು ಸಹಕಾರಿಯಾಗಿರುತ್ತದೆ.
ಉತ್ತಮ ಆಹಾರ ಸೇವನೆ ಎಂದರೆ ನಿಮ್ಮ ದೇಹಕ್ಕೆ ರೋಗದ ವಿರುದ್ಧ ಹೋರಾಡಲು ಅಗತ್ಯವಾದ ಪೋಷಕಾಂಶಗಳನ್ನು ನೀಡುವ ವಿವಿಧ ಆಹಾರ ಮತ್ತು ಪಾನೀಯಗಳನ್ನು ಸೇವಿಸುವುದು. ಉತ್ತಮ ಪೋಷಣೆಯ ರೋಗಿಗಳು ಚಿಕಿತ್ಸೆಯ ಅಡ್ಡಪರಿಣಾಮಗಳನ್ನು ಉತ್ತಮವಾಗಿ ನಿಭಾಯಿಸಲು ಸಮರ್ಥರಾಗಿದ್ದಾರೆ. ಅವರು ಉತ್ತಮ ಗುಣಮಟ್ಟದ ಜೀವನವನ್ನು ಹೊಂದಿರುತ್ತಾರೆ.
ಒಬ್ಬರು ಆರೋಗ್ಯವಾಗಿದ್ದಾಗ, ಅಗತ್ಯವಿರುವ ಪೋಷಕಾಂಶಗಳು ಮತ್ತು ಕ್ಯಾಲೊರಿಗಳನ್ನು ಪಡೆಯಲು ಸಾಕಷ್ಟು ಆಹಾರವನ್ನು ಸೇವಿಸುವುದು ಸಾಮಾನ್ಯವಾಗಿ ಸಮಸ್ಯೆಯಲ್ಲ. ಆದರೆ ಕ್ಯಾನ್ಸರ್ಗೆ ಚಿಕಿತ್ಸೆ ಪಡೆಯುವಾಗ, ಆರೋಗ್ಯಕರ ಆಹಾರವು ವಿಶೇಷವಾಗಿ ಅಡ್ಡಪರಿಣಾಮಗಳನ್ನು ಬೀರಿದರೆ ಕಷ್ಟವಾಗುತ್ತದೆ. ಕ್ಯಾನ್ಸರ್ ಚಿಕಿತ್ಸೆಯ ಸಮಯದಲ್ಲಿ ನಿಮ್ಮ ಶಕ್ತಿಯನ್ನು ಹೆಚ್ಚಿಸಲು ಮತ್ತು ಕ್ಯಾನ್ಸರ್ ಹಾಗೂ ಅದರ ಚಿಕಿತ್ಸೆಯ ಪರಿಣಾಮಗಳನ್ನು ತಡೆದುಕೊಳ್ಳಲು ಆಹಾರಕ್ರಮವನ್ನು ಬದಲಾಯಿಸಬೇಕಾಗಬಹುದು.
ಕಾರ್ಬೋಹೈಡ್ರೇಟ್‌ಗಳು ದೇಹ ಮತ್ತು ಮೆದುಳಿಗೆ ಶಕ್ತಿಯ ಪ್ರಾಥಮಿಕ ಮೂಲವಾಗಿದೆ. ಅದನ್ನು ಸಾಕಷ್ಟು ಪ್ರಮಾಣದಲ್ಲಿ ಸೇವಿಸಬೇಕಾಗಿದೆ. ತರಕಾರಿಗಳು ಮತ್ತು ಧಾನ್ಯಗಳು ಉತ್ತಮ ಆಯ್ಕೆಗಳಾಗಿವೆ. ಸಕ್ಕರೆ ಪದಾರ್ಥ ಬಿಟ್ಟು, ಸಣ್ಣ ಪ್ರಮಾಣದ ಬೆಲ್ಲ ಅಥವಾ ಜೇನುತುಪ್ಪವನ್ನು ಮಿತವಾಗಿ ಆಹಾರದಲ್ಲಿ ಬಳಸಬಹುದು. ವಿಶೇಷವಾಗಿ ಒಬ್ಬರಿಗೆ ತಿನ್ನಲು ಹಸಿವು ಇಲ್ಲದಿದ್ದಾಗ ಅಥವಾ ಒಂದು ಸಮಯದಲ್ಲಿ ಹೆಚ್ಚಿನ ಪ್ರಮಾಣದ ಆಹಾರವನ್ನು ಸೇವಿಸಲು ಸಾಧ್ಯವಾಗದಿದ್ದಾಗ ಈ ರೀತಿಯ ಆಹಾರ ಬಳಸಬಹುದು.