ಕೋಝೀಕ್ಕೋಡ್: ದೇಶದೆಲ್ಲೆಡೆ ಆತಂಕ ಮೂಡಿಸಿದ್ದ ನಿಫಾ ಪ್ರಕರಣಗಳ ಆತಂಕದಿಂದ ಇದೀಗ ಕೇರಳ ದೂರವಾಗಿದೆ. ವೈರಸ್ ನಿಯಂತ್ರಣಕ್ಕೆ ನಡೆಸಲಾದ ಕಟ್ಟುನಿಟ್ಟಿನ ಕ್ರಮಗಳನ್ನು ಇದೀಗ ಕೊಂಚ ಸಡಿಲಿಸಲಾಗಿದೆ. ಜನಜೀವನ ಸಾಮಾನ್ಯಕ್ಕೆ ಬರುತ್ತಿದೆ. ನಿಫಾ ಪ್ರಕರಣ ವರದಿಯಾದ 11 ದಿನಗಳ ಬಳಿಕವೂ ಯಾವುದೇ ಸೋಂಕು ದೃಢಪಡದ ಹಿನ್ನೆಲೆಯಲ್ಲಿ ನಿಧಾನವಾಗಿ ಕಂಟೈನ್ಮೆಂಟ್ ವಲಯವನ್ನು ಮುಕ್ತ ಮಾಡಲಾಗಿದೆ.
ಅದರಲ್ಲೂ ದೊಡ್ಡ ಪ್ರಮಾಣದಲ್ಲಿ ಶಿಕ್ಷಣ ಸಂಸ್ಥೆಗಳ ವಲಯದಲ್ಲಿ ಹೇರಿದ್ದ ಕಂಟೈನ್ಮೆಂಟ್ ಅನ್ನು ತೆರವು ಮಾಡಲಾಗಿದೆ. ಆದರೆ, ಜಿಲ್ಲಾ ಅಧಿಕಾರಿಗಳು ಕೋವಿಡ್ ಸಮಯದಲ್ಲಿ ಜಾರಿಯಾದ ಕಟ್ಟು ನಿಟ್ಟಿನ ನಿಯಮವನ್ನು ಜಾರಿ ಮಾಡಿದ್ದಾರೆ. ಶಾಲೆಗೆ ಬರುವ ಮಕ್ಕಳ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಕೈಗಳಿಗೆ ಸಾನಿಟೈಸರ್ ಬಳಕೆ ಮಾಡಬೇಕು ಎಂದು ಸೂಚಿಸಿದ್ದಾರೆ.
ಸೆಪ್ಟೆಂಬರ್ 12ರಂದು ನಿಫಾ ಸೋಂಕು ಪತ್ತೆಯಾಗುತ್ತಿದ್ದಂತೆ ಜಿಲ್ಲೆಯಲ್ಲಿನ ಶಾಲೆಗಳು ಸೆಪ್ಟೆಂಬರ್ 11ರಿಂದಲೇ ಆಫ್ಲೈನ್ ಬದಲಾಗಿ ಆನ್ಲೈನ್ ಕ್ಲಾಸ್ ನಡೆಸಲು ಮುಂದಾಗಿದ್ದವು. ಜಿಲ್ಲಾ ಆಡಳಿತ ಇದೀಗ ಶಾಲೆಗಳ ಪುನರಾರಂಭಕ್ಕೆ ಹಸಿರು ನಿಶಾನೆ ತೋರಿದೆ. ಆದಾಗ್ಯೂ ಜ್ವರ, ತಲೆನೋವು ಮತ್ತು ಗಂಟಲು ನೋವು ಕಾಣಿಸಿಕೊಳ್ಳುವ ವಿದ್ಯಾರ್ಥಿಗಳಿಗೆ ಶಾಲೆಗೆ ಬಾರದಂತೆ ಸೂಚಿಸಿದೆ. ಜೊತೆಗೆ ಶಾಲೆಯಲ್ಲಿ ಹಂಚಿ ತಿನ್ನುವುದಕ್ಕೆ ನಿಷೇಧ ಹೇರಿದೆ.
ಕೋಝಿಕ್ಕೋಡ್ನಲ್ಲಿ ಈ ವರ್ಷ ಆರು ನಿಫಾ ಪ್ರಕರಣಗಳು ಪತ್ತೆಯಾಗಿದ್ದು, ಎರಡು ಮಂದಿ ಇದರಿಂದ ಸಾವನ್ನಪ್ಪಿದ್ದಾರೆ. ಸೋಂಕು ಪತ್ತೆಗೆ ಸೋಂಕಿನ ಸಂಪರ್ಕಕ್ಕೆ ಒಳಗಾದವರ 950 ಮಾದರಿಗಳನ್ನು ಕಳೆದ ವಾರದಿಂದ ಸಂಗ್ರಹಿಸಲಾಗಿದೆ. ಆದರೆ, ಯಾವುದೇ ಹೊಸ ನಿಫಾ ಪ್ರಕರಣ ದೃಢಪಟ್ಟಿಲ್ಲ.