ಹೈದರಾಬಾದ್: ಅನೇಕ ಮಂದಿ ಸಣ್ಣ ಜ್ವರ ಅಥವಾ ಶೀತ ಬಂದರೆ ಸಾಕು ನೇರವಾಗಿ ಔಷಧ ಮಳಿಗೆಗೆ ಹೋಗಿ ಆ್ಯಂಟಿಬಯೋಟಿಕ್ಸ್ ಅನ್ನು ಖರೀದಿಸುತ್ತಾರೆ. ಮತ್ತೆ ಕೆಲವು ಮಂದಿ ಇಂಟರ್ನೆಟ್ನಲ್ಲಿ ಮಾಹಿತಿ ಹುಡುಕಿದಾಗ ಸಿಕ್ಕಿತು ಎಂಬ ಕಾರಣಕ್ಕೂ ಆ್ಯಂಟಿಬಯೋಟಿಕ್ ಬಳಕೆಗೆ ಮುಂದಾಗುತ್ತಾರೆ. ಈ ರೀತಿ ಮಾಡುವುದು ಅನೇಕ ಸಮಸ್ಯೆಗೆ ಕಾರಣವಾಗುತ್ತದೆ. ಈ ರೀತಿಯ ಅನೇಕ ಪ್ರಕರಣಗಳು ಹೈದರಾಬಾದ್ನಲ್ಲಿ ದಾಖಲಾಗುತ್ತಿದ್ದು, ಯುವತಿಯರು ಯಾವುದೇ ವೈದ್ಯರ ಸೂಚನೆ ಇಲ್ಲದೇ ಆ್ಯಂಟಿಬಯೋಟಿಕ್ಸ್ ಖರೀದಿಗೆ ಮುಂದಾಗುತ್ತಿದ್ದಾರೆ. ಈ ಹಿನ್ನೆಲೆ ನಿಜಾಮ್ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಎನ್ಐಎಂಎಸ್) ಈ ರೀತಿ ಆ್ಯಂಟಿಬಯೋಟಿಕ್ಸ್ ಬಳಕೆಯಿಂದ ಆಗುತ್ತಿರುವ ಸಮಸ್ಯೆ ತಡೆಯಲು ವಿಶೇಷ ನಿಯಮ ಬಿಡುಗಡೆ ಮಾಡಿದೆ.
ವೈದ್ಯರ ಶಿಫಾರಸಿಲ್ಲದೇ ನಡೆಯುತ್ತಿರುವ ಬಳಕೆ:ಆ್ಯಂಟಿ ಬಯೋಟಿಕ್ಸ್ಗಳನ್ನು ರೋಗಿಗಳ ನಿರ್ದಿಷ್ಟ ಚಿಕಿತ್ಸೆಗೆ ಮಿತ ಪ್ರಮಾಣದಲ್ಲಿ ಮಾತ್ರ ಬಳಕೆ ಮಾಡಲಾಗುವುದು. ಇನ್ನು ಈ ಆ್ಯಂಟಿಬಯೋಟಿಕ್ಸ್ ಅನ್ನು ವೈದ್ಯರು ಶಿಫಾರಸು ಮಾಡುವ ಮುನ್ನ ಡೋಸೆಜ್ (ಎಂಜಿ), ಬಳಕೆ ದಿನ ಸೇರಿದಂತೆ ಅನೇಕ ಅಂಶಗಳನ್ನು ಗಮನಿಸಿ ಬಳಕೆಗೆ ತಿಳಿಸುತ್ತಾರೆ. ಅನೇಕ ಮಂದಿ ವೈದ್ಯರ ಯಾವುದೇ ಸೂಚನೆ ಪಡೆಯದೇ ಅವುಗಳನ್ನು ಖರೀದಿಸಿ ಬಳಕೆ ಮಾಡುತ್ತಾರೆ. ಇದಕ್ಕೆ ಪ್ರಮುಖ ಕಾರಣ ಈ ಸಂಬಂಧ ಯಾವುದೇ ನಿಯಮ, ಮೇಲ್ವಿಚಾರಣೆ ಮತ್ತು ಔಷಧ ಮಾರಾಟಗಾರರು ಕೂಡ ಪ್ರಿಸ್ಕ್ರಿಪ್ಷನ್ ಇಲ್ಲದೇ ನೀಡುತ್ತಿರುವುದಾಗಿದೆ.