ನವದೆಹಲಿ:ನಿರಂತರವಾಗಿ ಸುದ್ದಿಗಳನ್ನು ಪರಿಶೀಲಿಸುವ ಬಯಕೆ ಹೊಂದಿರುವ ಜನರು ಅತ್ಯಧಿಕ ಒತ್ತಡ, ಚಿಂತೆ ಮತ್ತು ದೈಹಿಕ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ಅಧ್ಯಯನವೊಂದು ಹೇಳಿದೆ. ವಿಶೇಷವಾಗಿ ಕೆಟ್ಟ ಘಟನೆಗಳ ಸುದ್ದಿಗಳನ್ನು ಓದುವವರಲ್ಲಿ ಇಂತಹ ಅಪಾಯ ಅಧಿಕ ಪ್ರಮಾಣದಲ್ಲಿರುತ್ತದೆ ಎಂದು ಹೆಲ್ತ್ ಕಮ್ಯುನಿಕೇಷನ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನ ತಿಳಿಸಿದೆ.
ಮಾನಸಿಕ, ದೈಹಿಕ ಆರೋಗ್ಯದ ಮೇಲೆ ಪರಿಣಾಮ: ಕಳೆದ ಎರಡು ವರ್ಷಗಳಲ್ಲಿ ಕೋವಿಡ್ ಸಾಂಕ್ರಾಮಿಕ, ಉಕ್ರೇನ್‌ನ ಮೇಲೆ ರಷ್ಯಾ ಆಕ್ರಮಣ, ದೊಡ್ಡ ಪ್ರಮಾಣದ ಪ್ರತಿಭಟನೆಗಳು, ಸಾಮೂಹಿಕ ಗುಂಡಿನ ದಾಳಿಗಳು, ವಿನಾಶಕಾರಿ ಕಾಳ್ಗಿಚ್ಚು ಸೇರಿದಂತೆ ಜಾಗತಿಕವಾಗಿ ಹಲವು ಸರಣಿ ಘಟನೆಗಳು ನಡೆದಿವೆ. ಇಂತಹ ಕೆಟ್ಟ ವರ್ತಮಾನ ಓದುವುದರಿಂದ ನಾವು ತಾತ್ಕಾಲಿಕವಾಗಿ ಬಲಹೀನರಾಗಬಹುದು ಮತ್ತು ದುಃಖಿತರಾಗಬಹುದು ಎಂದು ಅಧ್ಯಯನ ತಿಳಿಸಿದೆ.
ನಿತ್ಯ ಸುದ್ದಿ ಚಕ್ರಕ್ಕೆ ಒಡ್ಡಿಕೊಳ್ಳುವುದರಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗಬಹುದು. ವಿಶೇಷವಾಗಿ ಕೆಟ್ಟ ಘಟನೆಗಳ ಸುದ್ದಿಗಳನ್ನು ಅತಿಯಾಗಿ ಓದುವ ವ್ಯಸನಕ್ಕೆ ಒಳಗಾದವರಲ್ಲಿ ಹೆಚ್ಚಿನ ದೈಹಿಕ ಮತ್ತು ಮಾನಸಿಕ ತೊಂದರೆಗಳು ಉಂಟಾಗಬಹುದು ಎಂದು ಅಧ್ಯಯನ ತಿಳಿಸಿದೆ.
ವ್ಯಕ್ತಿಗಳು ಆಗಾಗ ಸುದ್ದಿಗಳಲ್ಲಿ ಮುಳುಗುತ್ತಾರೆ. ಅವರು ಕುಟುಂಬ ಮತ್ತು ಸ್ನೇಹಿತರೊಂದಿಗೆ ಹೆಚ್ಚಿನ ಸಮಯ ಕಳೆಯಲು ಬಯಸುವುದಿಲ್ಲ. ಇದು ಚಡಪಡಿಕೆ ಮತ್ತು ನಿದ್ರಾಹೀನತೆಗೆ ಕಾರಣವಾಗಿದೆ. ಹೆಚ್ಚಿನ ಮಟ್ಟದ ಸಮಸ್ಯಾತ್ಮಕ ಸುದ್ದಿ ಓದುವ ಜನರು ಮಾನಸಿಕ ಮತ್ತು ದೈಹಿಕ ಅಸ್ವಸ್ಥತೆ ಅನುಭವಿಸುವ ಸಾಧ್ಯತೆ ಹೆಚ್ಚು ಎಂದು ಅಧ್ಯಯನ ತಿಳಿಸಿದೆ.
ಆತಂಕದಲ್ಲಿ ದಿನದೂಡುತ್ತಾರೆ: ಶೇ.73.6ರಷ್ಟು ಸಮಸ್ಯಾತ್ಮಕ ಸುದ್ದಿ ಓದುವವರು ಮಾನಸಿಕ ಅಸ್ವಸ್ಥತೆಯನ್ನು ಅನುಭವಿಸುತ್ತಿದ್ದಾರೆಂದು ವರದಿಯಾಗಿದೆ. ಕೆಲವೊಂದು ಸುದ್ದಿಗಳನ್ನು ಓದಿದಾಗ ಕೆಲವು ವ್ಯಕ್ತಿಗಳು ಅದನ್ನು ತಮಗೆ ಅನ್ವಯಿಸಿಕೊಂಡು ಹೆಚ್ಚಿನ ಎಚ್ಚರಿಕೆ ವಹಿಸುತ್ತಾರೆ. ಜಗತ್ತೇ ಕತ್ತಲಲ್ಲಿ ಇದೆ ಮತ್ತು ತೊಂದರೆಯಲ್ಲಿ ಇದೆ ಎಂದು ಆತಂಕದಲ್ಲಿ ಇವರು ದಿನದೂಡುತ್ತಾರೆ ಎಂದು ಟೆಕ್ಸಾಸ್ ಟೆಕ್ ಯೂನಿವರ್ಸಿಟಿಯ ಮೀಡಿಯಾ ಆಂಡ್ ಕಮ್ಯುನಿಕೇಷನ್ ಕಾಲೇಜಿನ ಅಸೋಸಿಯೇಟ್ ಪ್ರೊಫೆಸರ್ ಬ್ರಿಯಾನ್ ಮೆಕ್‌ಲಾಗ್ಲಿನ್ ಹೇಳಿದ್ದಾರೆ.