ಬೆಂಗಳೂರು: ವೈದ್ಯೋ ನಾರಾಯಣೋ ಹರಿ ಎಂಬಂತೆ ಭೂಮಿ ಮೇಲಿನ ದೇವರು ಎಂದರೆ ಅದು ವೈದ್ಯರು ಎಂಬ ಮಾತಿಗೆ. ಈ ಮೂಲಕ ವೈದ್ಯರ ಸೇವೆಗೆ ಗೌರವವನ್ನು ಸಲ್ಲಿಸಲಾಗುವುದು. ರೋಗಿಗಳ ಜೀವ ಉಳಿಸುವ ಸಲುವಾಗಿ ಪ್ರತಿ ಕ್ಷಣವೂ ಎಂತಹದ್ದೆ ಪರಿಸ್ಥಿತಿಯಲ್ಲಿ ನಿಸ್ವಾರ್ಥವಾಗಿ ಉತ್ತಮ ಸೇವೆಯನ್ನು ವೈದ್ಯರು ನೀಡುತ್ತದೆ. ವ್ಯಕ್ತಿಯೊಬ್ಬ ತನ್ನ ದೇಹದ ಬಗ್ಗೆ ಸಂಪೂರ್ಣ ಅಸಹಾಕತೆ ಹೊಂದಿದಾಗ ಆತ ಗುಣಮುಖವಾಗುವ ಭರವಸೆಯೊಂದಿಗೆ ವೈದ್ಯರ ಬಳಿ ಹೋಗುತ್ತಾನೆ. ಔಷಧಗಳು ರೋಗಗಳನ್ನು ಗುಣಪಡಿಸಿದರೆ, ವೈದ್ಯ ರೋಗಿಯನ್ನು ಗುಣಪಡಿಸುತ್ತಾನೆ ಎಂಬ ಮಾತಿದೆ. ಅದರಂತೆ ವೈದ್ಯರ ಈ ಸೇವೆ ಮತ್ತು ಸಮರ್ಪಣೆಯನ್ನು ಗೌರವಿಸುವ ಉದ್ದೇಶದಿಂದ ಪ್ರತಿ ವರ್ಷ ಜುಲೈ 1ರಂದು ರಾಷ್ಟ್ರೀಯ ವೈದ್ಯರ ದಿನವನ್ನಾಗಿ ಆಚರಿಸಲಾಗುವುದು.
ಜುಲೈ 1ರಂದು ರಾಷ್ಟ್ರೀಯ ವೈದ್ಯರ ದಿನ ಆಚರಣೆ ಮಾಡುವ ಹಿಂದೆ ಒಂದು ಪ್ರಮುಖ ಕಾರಣವೂ ಇದೆ. ಇದು ಭಾರತದ ಶ್ರೇಷ್ಠ ವೈದ್ಯರಲ್ಲಿ ಒಬ್ಬರಾದ ಮತ್ತು ಪಶ್ಚಿಮ ಬಂಗಾಳದ ಎರಡನೇ ಮುಖ್ಯಮಂತ್ರಿಯಾಗಿದ್ದ ಡಾ ಬಿಧಾನ್ ಚಂದ್ರ ರಾಯ್ ಅವರಿಗೆ ಗೌರವ ನೀಡುವ ಉದ್ದೇಶವನ್ನು ಈ ದಿನ ಹೊಂದಿದೆ. ಡಾ ರಾಯ್ ವೈದ್ಯಕೀಯ ಕ್ಷೇತ್ರಕ್ಕೆ ಗಣನೀಯ ಕೊಡುಗೆ ನೀಡಿದ್ದು, ಬಂಗಾಳದ ದೂರದೃಷ್ಟಿಯ ನಾಯಕತ್ವಕ್ಕಾಗಿ ಬಂಗಾಳದ ವಾಸ್ತುಶಿಲ್ಪಿ ಎಂದು ಕೂಡ ಕರೆಯಲ್ಪಡುತ್ತಾರೆ. ಡಾ ರಾಯ್ ದೇಶದ ಅತ್ಯುನ್ನತ ನಾಗರೀಕ ಗೌರವವಾದ ಭಾರತ ರತ್ನ ಪ್ರಶಸ್ತಿಗೂ 1961ರಲ್ಲಿ ಭಾಜನರಾದರು. ಭಾರತ ಸರ್ಕಾರ 1991ರಿಂದ ಪ್ರತಿ ವರ್ಷ ಜುಲೈ 1ರಂದು ರಾಷ್ಟ್ರೀಯ ವೈದ್ಯರ ದಿನಾಚರಣೆ ಆರಂಭಿಸಲು ಘೋಷಿಸಿತು.