ವಾಶಿಂಗ್ಟನ್: ಸುಮಧುರವಾದ ಸಂಗೀತ ಅಥವಾ ಹಾಡು ಕೇಳಿದಾಗ ಮನಸ್ಸು ಪ್ರಫುಲ್ಲವಾಗುತ್ತದೆ. ಮೂಡ್ ಹಾಳಾಗಿದ್ದರೆ ಮತ್ತೆ ಉತ್ತಮವಾಗುತ್ತದೆ. ಆದರೆ ಸಂಗೀತವು ಔಷಧಗಳ ಪರಿಣಾಮಕಾರತ್ವವನ್ನು ಸಹ ಹೆಚ್ಚಿಸಬಹುದು ಎನ್ನುತ್ತಾರೆ ಮಿಶಿಗನ್ ಸ್ಟೇಟ್ ಯುನಿವರ್ಸಿಟಿಯ ಸಂಶೋಧಕರು. ಆಗಾಗ ಸಂಗೀತ ಆಸ್ವಾದಿಸುವುದು ಆರೋಗ್ಯಕ್ಕೆ ಔಷಧ ಸೇವಿಸಿದಂತೆ. ಈ ಔಷಧಿಗಳನ್ನು ಶಿಫಾರಸು ಮಾಡಲು ನಿಮಗೆ ಯಾವುದೇ ವೈದ್ಯರು ಬೇಕಿಲ್ಲ ಎಂದು ನರ್ಸಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಜೇಸನ್ ಕೀರ್ನಾನ್ ಹೇಳಿದರು.
ಹಿಂದಿನ ಸಂಶೋಧನಾ ಅಧ್ಯಯನಗಳು ನೋವು ಮತ್ತು ಆತಂಕಕ್ಕೆ ಚಿಕಿತ್ಸೆ ನೀಡುವ ಸಾಧನವಾಗಿ ಸಂಗೀತ ಕೇಳುವ ವಿಧಾನಗಳನ್ನು ಬಳಸಿದರೆ, ಕೀಮೋಥೆರಪಿ ಪ್ರೇರಿತ ವಾಕರಿಕೆಯ ಮೇಲೆ ಸಂಗೀತ ಕೇಳುವುದರಿಂದಾಗುವ ಪರಿಣಾಮಗಳನ್ನು ಅಧ್ಯಯನ ಮಾಡುವ ಮೂಲಕ ಕೀರ್ನಾನ್ ಒಂದು ಹೊಸ ವಿಧಾನವನ್ನು ಸಂಶೋಧನೆಯಲ್ಲಿ ಅಳವಡಿಸಿಕೊಂಡರು. ನೋವು ಮತ್ತು ಆತಂಕ ಎರಡೂ ನರವೈಜ್ಞಾನಿಕ ವಿದ್ಯಮಾನಗಳಾಗಿವೆ ಮತ್ತು ಇವುಗಳನ್ನು ಮೆದುಳಿನಲ್ಲಿ ಒಂದು ಸ್ಥಿತಿಯಾಗಿ ಅರ್ಥೈಸಲಾಗುತ್ತದೆ. ಹಾಗೆಯೇ ಕಿಮೊಥೆರಪಿ ಪ್ರೇರಿತ ವಾಕರಿಕೆ ಹೊಟ್ಟೆಯ ಸ್ಥಿತಿಯಲ್ಲ; ಇದು ನರವೈಜ್ಞಾನಿಕವಾಗಿದೆ ಎಂದು ಕೀರ್ನಾನ್ ಹೇಳಿದರು.
ಈ ಸಣ್ಣ ಪ್ರಮಾಣದ ಪ್ರಾಯೋಗಿಕ ಅಧ್ಯಯನದಲ್ಲಿ ಕಿಮೊಥೆರಪಿ ಚಿಕಿತ್ಸೆಗೆ ಒಳಪಟ್ಟ ಒಟ್ಟು 12 ರೋಗಿಗಳು ಭಾಗವಹಿಸಿದ್ದರು. ವಾಕರಿಕೆ ಬರದಂತೆ ತಡೆಗಟ್ಟಲು ಇವರು ತಮಗೆ ಅಗತ್ಯ ಎನಿಸಿದಾಗಲೆಲ್ಲ ತಮ್ಮ ನೆಚ್ಚಿನ ಸಂಗೀತವನ್ನು 30 ನಿಮಿಷಗಳ ಕಾಲ ಕೇಳಲು ಒಪ್ಪಿಕೊಂಡಿದ್ದರು. ತಮ್ಮ ಕಿಮೊಥೆರಪಿ ಚಿಕಿತ್ಸೆಯ ಐದು ದಿನಗಳ ನಂತರ ವಾಕರಿಕೆ ಸಂಭವಿಸಿದಾಗ ಅವರು ಸಂಗೀತ ಕೇಳುವುದನ್ನು ಪುನರಾವರ್ತಿಸಿದರು. ಈ ಅಧ್ಯಯನದಲ್ಲಿ ರೋಗಿಗಳು ಒಟ್ಟು ಇಂಥ 64 ಸಂದರ್ಭಗಳನ್ನು ಒದಗಿಸಿದ್ದಾರೆ.