ಮುಂಬೈ:ನವದೆಹಲಿಯ ವಾಯುಮಾಲಿನ್ಯ ಜಾಗತಿಕವಾಗಿ ಸುದ್ದಿ ಮಾಡುತ್ತಿರುವ ಬೆನ್ನಲ್ಲೇ ಇದೀಗ ಮುಂಬೈ ಗಾಳಿಯ ಗುಣಮಟ್ಟವೂ ಕುಸಿತ ಕಂಡಿದೆ. ಇತ್ತೀಚಿಗೆ ಬೃಹನ್ ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳು ಸಭೆ ನಡೆಸಿ, ಎಚ್ಚರಿಕೆಯ ಸಂದೇಶ ರವಾನಿಸಿದ್ದರು. ಮಹಾನಗರಿಯಲ್ಲಿ ಮಾಲಿನ್ಯ ಸಂಬಂಧಿತ ಆರೋಗ್ಯ ಪ್ರಕರಣಗಳು ವರದಿಯಾಗುತ್ತಿದ್ದು, ರಾಜ್ಯ ಸರ್ಕಾರದ ಜೆ.ಜೆ.ಆಸ್ಪತ್ರೆಯಲ್ಲಿ ವಾಯು ಮಾಲಿನ್ಯದ ಪರಿಣಾಮಕ್ಕೆ ತುತ್ತಾದ ರೋಗಿಗಳ ವೀಕ್ಷಣೆಗೆ ಹೊಸ ಹೊರ ರೋಗಿಗಳ ವಿಭಾಗ (ಒಪಿಡಿ) ತೆರೆಯಲಾಗಿದೆ.
ಕಳೆದೊಂದು ತಿಂಗಳಿನಿಂದ ಮುಂಬೈನಲ್ಲಿ ವಾಯು ಮಾಲಿನ್ಯ ಹೆಚ್ಚುತ್ತಿದೆ. ಇದರಿಂದ ಹಾನಿಗೊಳಗಾದ ರೋಗಿಗಳಿಗೆ ತುರ್ತು ಚಿಕಿತ್ಸೆ ನೀಡಲು ಈ ಕ್ರಮಕ್ಕೆ ಜೆ.ಜೆ.ಆಸ್ಪತ್ರೆ ಮುಂದಾಗಿದೆ. ಇಲ್ಲಿ ಶ್ವಾಸಕೋಶ ಸಮಸ್ಯೆ ಸೇರಿದಂತೆ ಉಸಿರಾಟ ತೊಂದರೆಯಂಥ ಪ್ರಕರಣಗಳ ತಪಾಸಣೆ ನಡೆಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಹಸನ್ ಮುಶ್ರೀಫ್ ತಿಳಿಸಿದರು.
ಈ ಕುರಿತು ಮಾತನಾಡಿರುವ ಅವರು, ವಾಯು ಮಾಲಿನ್ಯದಿಂದ ಉಸಿರಾಟದ ತೊಂದರೆಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಎಲ್ಲಾ ವೈದ್ಯಕೀಯ ಕಾಲೇಜುಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.
ಪ್ರತಿನಿತ್ಯ ಬೆಳಿಗ್ಗೆ 8ರಿಂದ ರಾತ್ರಿ 12.30ರವರೆಗೆ ಇಂತಹ ರೋಗಿಗಳಿಗೆ ಒಪಿಡಿಯಲ್ಲಿ ಚಿಕಿತ್ಸೆ ನೀಡಲಾಗುವುದು. ಉಸಿರಾಟ ಸಂಬಂಧಿ ಸಮಸ್ಯೆ ಹೊಂದಿರುವವರಿಗೆ ತುರ್ತು ಚಿಕಿತ್ಸೆ ವಾರ್ಡ್ನಲ್ಲಿ ಚಿಕಿತ್ಸೆ ನೀಡಲಾಗುವುದು. ಉಸಿರಾಟ ಸಮಸ್ಯೆ ಇರುವವರಿಗೆ ಪ್ರತ್ಯೇಕ ಘಟಕ ಮತ್ತು ಇದರ ಚಿಕಿತ್ಸೆಗೆ ಅಗತ್ಯವಿರುವ ಔಷಧಿ, ಮಾಸ್ಕ್, ಇತರೆ ಸಾಧನಗಳು ಲಭ್ಯವಿರುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಮೇಲ್ವಿಚಾರಣೆ ನಡೆಸುವಂತೆ ಸೂಚಿಸಲಾಗಿದೆ.
ವೈದ್ಯಕೀಯ ಅಧಿಕಾರಿಗಳು ಈ ರೋಗಿಗಳ ಕುರಿತು ದೈನಂದಿನ ದತ್ತಾಂಶವನ್ನು ಉನ್ನತ ಅಧಿಕಾರಿಗಳಿಗೆ ಸಲ್ಲಿಸುತ್ತಾರೆ. ರೋಗಿಗಳ ಸಂಖ್ಯೆ ಹೆಚ್ಚಿದಂತೆ ಆಸ್ಪತ್ರೆಗಳ ಸೌಲಭ್ಯವನ್ನೂ ಹೆಚ್ಚಿಸಲಾಗುವುದು ಎಂದು ಹೇಳಿದರು.
ಮುಂಬೈನಲ್ಲಿ ವಾಯು ಗುಣಮಟ್ಟ ಕಳಪೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಳೆದ ತಿಂಗಳಾಂತ್ಯದಲ್ಲಿ ಬಿಎಂಸಿ ಆಯುಕ್ತರ ನೇತೃತ್ವದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆ ನಡೆಸಿದ್ದರು. ಈ ವೇಳೆ ವಾಯು ಮಾಲಿನ್ಯ ತಡೆಗೆ ಕೆಲವು ಕ್ರಮವನ್ನು ಕೈಗೊಳ್ಳಲಾಗಿತ್ತು. ನಿರ್ಮಾಣ ಸ್ಥಳಗಳು, ಕೈಗಾರಿಕೆ ಮತ್ತು ವಾಹನಗಳಿಗೆ ನಿಯಮ ರೂಪಿಸಬೇಕು. ಅತಿ ಹೆಚ್ಚು ಹೊಗೆ ಸೂಸುವ ವಾಹನಗಳ ಮೇಲೆ ಕ್ರಮ ಸೇರಿದಂತೆ ಹಲವು ಅಂಶಗಳ ಕುರಿತು ಗಮನಹರಿಸಲಾಗಿತ್ತು. (ಐಎಎನ್ಎಸ್)
ಇದನ್ನೂ ಓದಿ: ನವದೆಹಲಿ ಬಳಿಕ ಮುಂಬೈನಲ್ಲಿ ಹೆಚ್ಚುತ್ತಿದೆ ವಾಯುಮಾಲಿನ್ಯ; ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾದ ಬಿಎಂಸಿ