ಬೆಂಗಳೂರು: ಇಂದು ಅಂತಾರಾಷ್ಟ್ರೀಯ ಅಮ್ಮಂದಿರ ದಿನ. ಪ್ರತಿಯೊಂದು ಕುಟುಂಬದ ಅಡಿಪಾಯವೇ ಅಮ್ಮ, ಮನೆ ಮಂದಿಗೋಸ್ಕರ ಏನೆಲ್ಲಾ ಸವಾಲು, ಸಮಸ್ಯೆಗಳಿದ್ದರೂ ಎಲ್ಲವನ್ನೂ ಎದುರಿಸಿ ಅವರಿಗೋಸ್ಕರ ಬದುಕುವ ತಾಯಿಗೆ ಬಿಡುವೆನ್ನುವುದೇ ಇಲ್ಲ. ಮನೆಯವರಿಗೋಸ್ಕರ ದುಡಿಯುತ್ತಿರುವ ಅಮ್ಮನಿಗೆ ಸಂಬಳವಿಲ್ಲ, ರಜೆ ಇಲ್ಲ, ಮನೆಯಲ್ಲಿಯೇ ಇದ್ದು ಇದ್ದು ಕೆಲವೊಮ್ಮೆ ಆಕೆಗೆ ಮಾನಸಿಕ ಆರೋಗ್ಯ ಕಾಡಬಹುದು.
ಈ ಬಗ್ಗೆ ಮನೆಯವರು ಹೆಚ್ಚು ತಲೆಕೆಡಿಸಿಕೊಳ್ಳದೇ ತಮ್ಮ ಕೆಲಸದಲ್ಲಿ ಮುಳುಗುತ್ತಾರೆ. ಸ್ವತಃ ಅಮ್ಮನೇ ತನ್ನ ದೈಹಿಕ, ಮಾನಸಿಕ ಆರೋಗ್ಯದ ಬಗ್ಗೆ ಹೆಚ್ಚು ಚಿಂತೆ ಮಾಡದೇ ದುಡಿಯುತ್ತಲೇ ಇರುತ್ತಾಳೆ. ಕೆಲವೊಮ್ಮೆ ಇದು ತಾಯಿಯ ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು. ಹಾಗಾಗಿ ಸ್ವತಃ ಅಮ್ಮನೇ ತನ್ನ ಮಾನಸಿಕ ಆರೋಗ್ಯಕ್ಕಾಗಿ ಒಂದಷ್ಟು ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು ಒಳ್ಳೆಯದು ಎಂದು ಫೋರ್ಟಿಸ್ ಆಸ್ಪತ್ರೆ ಕನ್ಸಲ್ಟೆಂಟ್ ಕ್ಲಿನಿಕಲ್ ಸೈಕಾಲಜಿ ಡಾ.ಆಕಾಂಕ್ಷಾ ಪಾಂಡೆ ಮನೆಯಲ್ಲಿಯೇ ಇರುವ ತಾಯಂದಿರಿಗೆ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಒಂದಷ್ಟು ಸಲಹೆಗಳನ್ನು ನೀಡಿದ್ದಾರೆ.
ಮನೆಯಲ್ಲೇ ಇದ್ದರೆ ಖಿನ್ನತ ಗ್ಯಾರಂಟಿ:ಹಿಂದೆಲ್ಲಾ ತಾಯಂದಿರು ಹೊರಗಡೆ ಕೆಲಸಕ್ಕೆ ಹೋಗುವುದು ತೀರಾ ಕಡಿಮೆ, ಮನೆಯಲ್ಲಿಯೇ ಮನೆಯವರಿಗೋಸ್ಕರ ದುಡಿಯುತ್ತಿದ್ದರು. ಮನೆಯಿಂದ ಹೊರಹೋಗುವುದು ಅಪರೂಪದಲ್ಲಿ ಅಪರೂಪ. ಇದು ಅವರ ಮನಸ್ಥಿತಿ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಮನೆಯಲ್ಲಿಯೇ ಇದ್ದು ಅವರ ಮನಸ್ಸು ಹೊರ ಪ್ರಪಂಚಕ್ಕೆ ತೆರೆದುಕೊಂಡಿರುವುದಿಲ್ಲ. ಗಂಡ, ಮಕ್ಕಳು ತಾಯಿಗೆ ಗಮನ ನೀಡದೇ ಹೋದಾಗ ತಾಯಿಯ ಮನಸ್ಸು ಘಾಸಿಗೊಳ್ಳುತ್ತದೆ. ಇದು ಖಿನ್ನತೆಗೆ ತಿರುಗಬಹುದು. ಇದು ಮನೆಯವರಿಗೆ ವಿಚಿತ್ರ ಅನುಭವ ನೀಡುತ್ತದೆ. ಹೀಗಾಗಿ ತಾಯಿಯನ್ನೂ ಸಹ ನಮ್ಮಂತೆಯೇ ಹೊರ ಪ್ರಪಂಚಕ್ಕೆ ಹೋಗಲು ಉತ್ತೇಜಿಸುತ್ತಿರಬೇಕು ಎಂದಿದ್ದಾರೆ.
ದಿನವನ್ನು ನಿಮ್ಮದಾಗಿಸಿಕೊಳ್ಳಿ:ತಾಯಿಯಾದವರು ಕೇವಲ ಮನೆಯವರ ಜವಾಬ್ದಾರಿ ತೆಗೆದುಕೊಳ್ಳುವುದಷ್ಟೇ ಅಲ್ಲ, ನಿಮ್ಮ ಜವಾಬ್ದಾರಿಯನ್ನು ತೆಗೆದುಕೊಳ್ಳಿ. ನಿಮ್ಮನ್ನು ನೀವು ಆಕರ್ಷಕವಾಗಿ ಇಟ್ಟುಕೊಳ್ಳುವತ್ತ ಗಮನ ನೀಡಿ. ಮನೆಯಲ್ಲಿಯೇ ಯಾರು ನೋಡಬೇಕು ಎಂಬ ಮನಸ್ಥಿತಿಯಿಂದ ಹೊರ ಬನ್ನಿ, ಪ್ರತಿನಿತ್ಯ ಸ್ನಾನ ಮಾಡಿ, ಮೇಕಪ್ ಧರಿಸಿ, ಬೆಳಗ್ಗೆ ಅಥವಾ ಸಂಜೆ ಹೊರಗಡೆ ಹೋಗುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದು ನಿಮ್ಮ ಮನಸ್ಸಿಗೆ ಆನಂದ ನೀಡುವುದರ ಜೊತೆಗೆ ಸಮಾಜದೊಂದಿಗೆ ಬೆರೆಯಲು ಅವಕಾಶ ನೀಡುತ್ತದೆ ಎಂದು ಹೇಳಿದ್ದಾರೆ.
ನಿಮಗಾಗಿ ಸಮಯ ಮಾಡಿಕೊಳ್ಳಿ:ತಾಯಿಯಾದವಳಿಗೆ ಮನೆಯವರನ್ನು ನೋಡಿಕೊಳ್ಳುವ ಭರದಲ್ಲಿ ತನ್ನನ್ನೂ ಸಹ ನೋಡಿಕೊಳ್ಳಬೇಕು ಎನ್ನುವುದು ಮರೆತೇ ಹೋಗಿರುತ್ತದೆ. ಈ ತಪ್ಪನ್ನು ಮಾಡದಿರಿ. ಮನೆಯವರಿಗೆ ನೀಡಿದಷ್ಟೇ ಆದ್ಯತೆಯನ್ನು ನಿಮಗೂ ಮೀಸಲಿಡಿ. ನಿಮಗಾಗಿ ವಿಶೇಷ ಸಮಯ ಮಾಡಿಕೊಳ್ಳಿ. ನಿಮ್ಮ ಆರೈಕೆಗೆ ಸಮಯ ಮಾಡಿಕೊಳ್ಳಿ. ಹೆಣ್ಣು ಮಕ್ಕಳು ಮಗುವಾದ ಮೇಲೆ ದಪ್ಪ ಆಗುವುದು, ಒಳ್ಳೆಯ ಬಟ್ಟೆ ಧರಿಸದೇ ಹಾಗೆ ಇರುತ್ತಾರೆ. ಇದರಿಂದ ತಮ್ಮ ದೈಹಿಕ ಆಕಾರ ಬದಲಾಗುವ ಜೊತೆಗೆ ಆರೋಗ್ಯದ ಸಮಸ್ಯೆ ಕಾಣಿಸಿಕೊಳ್ಳಲು ಅವರೇ ಕಾರಣರಾಗುತ್ತಾರೆ. ಹೀಗಾಗಿ ಮೊದಲು ನಿಮ್ಮ ಆರೈಕೆಗೆ ಆದ್ಯತೆ ನೀಡಿ. ಸಾಧ್ಯವಾದರೆ ಜಿಮ್ ಅಥವಾ ಯೋಗದಂಥ ವ್ಯಾಯಾಮ ಕೇಂದ್ರಗಳಿಗೆ ಸೇರಿಕೊಳ್ಳಿ. ಇಡೀ ಮನೆಯನ್ನು ನೀವೋಬ್ಬರೇ ಶುಚಿಗೊಳಿಸಬೇಕೆಂದೇನಿಲ್ಲ ಎಂದು ಡಾಕ್ಟರ್ ಸಲಹೆ ನೀಡಿದ್ದಾರೆ.