ಜಿನೀವಾ:ಜಗತ್ತಿನಾದ್ಯಂತ ಮೂರನೇ ಒಂದರಷ್ಟು ಮಹಿಳೆಯರು ಪ್ರಸವದ ಬಳಿಕ ಖಿನ್ನತೆ, ಬೆನ್ನು ನೋವಿನಂತಹ ದೀರ್ಘಕಾಲದ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಅಧ್ಯಯನ ತಿಳಿಸಿದೆ. ದಿ ಲ್ಯಾನ್ಸೆಟ್ ಗ್ಲೋಬಲ್ ಹೆಲ್ತ್ನಲ್ಲಿ ಪ್ರಕಟವಾದ ಅಧ್ಯಯನ ಅನುಸಾರ, ಮಗು ಜನಸಿದ ಬಳಿಕ ಪ್ರಸವ ಪೂರ್ವ ಸಮಸ್ಯೆಯಿಂದ ಮಹಿಳೆ ತಿಂಗಳು ಅಥವಾ ವರ್ಷಾಗಟ್ಟಲೇ ಬಳಲುತ್ತಾಳೆ. ಪ್ರತಿ ವರ್ಷ ಈ ರೀತಿ ಪರಿಸ್ಥಿತಿಯಿಂದ 40 ಮಿಲಿಯನ್ ಮಹಿಳೆಯರು ತೊಂದರೆಗೆ ಒಳಗಾಗುತ್ತಿದ್ದಾರೆ.
ಪ್ರಸವದ ಬಳಿಕ ಬೆನ್ನು ನೋವಿನಿಂದ ಶೇ 32ರಷ್ಟು, ಅಸಂಯಮದಿಂದ ಶೇ 19ರಷ್ಟು, ಮೂತ್ರದ ಅಸಂಯಮದಿಂದ ಶೇ 8-31ರಷ್ಟು, ಆತಂಕದಿಂದ ಶೇ 9ರಿಂದ 24ರಷ್ಟು, ಖಿನ್ನತೆಯಿಂದ ಶೇ 11ರಿಂದ 17ರಷ್ಟು, ಪೆರಿನಲ್ ನೋವಿನಿಂದ ಶೇ 11ರಷ್ಟು, ಮಗು ಜನನದ ಭಯ (ಟೊಕೊಫೋಬಿಯಾ)ದಿಂದ ಶೇ 6ರಿಂದ 15ರಷ್ಟು ಮತ್ತು ಎರಡನೇ ಬಂಜೆತನದಿಂದ ಶೇ 11ರಷ್ಟು ತಾಯಂದಿರು ಸಮಸ್ಯೆ ಅನುಭವಿಸುತ್ತಾರೆ.
ಅನೇಕ ಮಹಿಳೆಯರು ಪ್ರಸವದ ಬಳಿಕ ತಮ್ಮ ದೈನಂದಿನ ಜೀವನದಲ್ಲಿ ಭಾವನಾತ್ಮಕವಾಗಿ ಮತ್ತು ದೈಹಿಕವಾಗಿ ಬಳಲಿಕೆಯನ್ನು ಹೊಂದುತ್ತಾರೆ. ಆದರೂ ಅವುಗಳು ಹೆಚ್ಚಾಗಿ ಕಡಿಮೆ ಮೌಲ್ಯಯುತವಾಗಿವೆ, ಕಡಿಮೆ ಗುರುತಿಸಲ್ಪಟ್ಟಿದ್ದು, ಕಡಿಮೆ ವರದಿಯಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಸೆಕ್ಸುಯಲ್ ಅಂಡ್ ರಿಪ್ರೊಡಕ್ಟಿವಿಟಿ ಹೆಲ್ತ್ ಅಂಡ್ ರಿಸರ್ಚ್ನ ಡಾ ಪಸಕ್ಯಾಲ್ ಅಲೊಟೆ ತಿಳಿಸಿದ್ದಾರೆ.
ತಾಯ್ತನದ ಹೊರತಾಗಿ ಮಹಿಳೆಯರು ತಮ್ಮ ಆರೋಗ್ಯ ಕಾಳಜಿ ಪೂರೈಸುವ ಮತ್ತು ಅಗತ್ಯ ರಕ್ಷಣೆ ಪಡೆಯುವ ಹಲವು ಸೇವೆಗಳನ್ನು ಪಡೆಯುತ್ತಾರೆ. ಹೆರಿಗೆಯಿಂದ ಬದುಕುಳಿಯುವುದು ಮಾತ್ರವಲ್ಲದೇ ಉತ್ತಮ ಆರೋಗ್ಯ ಮತ್ತು ಜೀವನದ ಗುಣಮಟ್ಟವನ್ನು ಆನಂದಿಸಬಹುದು ಎಂದಿದ್ದಾರೆ.