ಬೆಂಗಳೂರು: ಸೆಪ್ಟೆಂಬರ್ 22 ಅನ್ನು ವಿಶ್ವ ರೋಸ್ ದಿನವನ್ನಾಗಿ ಆಚರಿಸಲಾಗುವುದು. ಈ ದಿನದ ಉದ್ದೇಶ ಕ್ಯಾನ್ಸರ್ ವಿರುದ್ದ ಹೋರಾಡುತ್ತಿರುವವರಲ್ಲಿ ಜೀವನೋತ್ಸಹ ತುಂಬುವುದಾಗಿದೆ. ಕ್ಯಾನ್ಸರ್ ವಿರುದ್ದ ಹೋರಾಡುವವರಿಗೆ ಬೆಂಬಲ ಮತ್ತು ಪ್ರೋತ್ಸಾಹ ನೀಡುವ ಜೊತೆಗೆ ಅವರಲ್ಲಿ ಹೊಸ ಭರವಸೆ ಮತ್ತು ಸಂತಸ ಮೂಡಿಸುವುದಾಗಿದೆ. ಈ ಮೂಲಕ ಅವರು ತಮ್ಮ ಕ್ಯಾನ್ಸರ್ ವಿರುದ್ಧ ಹೋರಾಟದಲ್ಲಿ ಸಕಾರಾತ್ಮಕತೆ ಕಂಡು ಜಯಗಳಿಸಲಿ ಎಂಬುದಾಗಿದೆ.
ಇತಿಹಾಸ: ವಿಶ್ವ ಗುಲಾಬಿ ದಿನದ ಹಿಂದೆ ಮೆಲಿಂಡಾ ರೋಸ್ ಎಂಬ ಕ್ಯಾನ್ಸರ್ ಸಂತ್ರಸ್ತೆಯ ಯಶೋಗಾಥೆ ಇದೆ. 12 ವರ್ಷದ ಕೆನಾಡಾದ ಕ್ಯಾನ್ಸರ್ ಪೀಡಿತ ಈ ಮಗು ಧೈರ್ಯಶಾಲಿಯಾಗಿದ್ದಳು. 1994ರಲ್ಲಿ ಆಕೆಯಲ್ಲಿ ಅಪರೂಪದ ರಕ್ತದ ಕ್ಯಾನ್ಸರ್ ಆದ ಅಸ್ಕಿನ್ ಟ್ಯೂಮರ್ ಪತ್ತೆಯಾಯಿತು. ಈ ವೇಳೆ ಆಕೆಗೆ ಜೀವನ ಕಳೆಯಲು ಉಳಿದಿರುವುದು ಕೇವಲ ಎಣಿಕೆಯಷ್ಟೇ ದಿನಗಳು ಎಂದು ವೈದ್ಯರು ತಿಳಿಸಿದ್ದರು.
ಆದರೆ ಇದರಿಂದ ಧೃತಿಗೆಡದ ಮಿಲಿಂಡಾ ತನ್ನೆಲ್ಲಾ ನೋವು ಮರೆತು ಆರು ತಿಂಗಳ ಕಾಲ ಸಂತಸ ಮತ್ತು ಸಂತೃಪ್ತಿಯಿಂದ ಕಾಲ ಕಳೆದಳು. ಆಕೆಯ ಈ ಉತ್ಸಾಹ ಮತ್ತು ನಿರ್ಣಯ ಕೇವಲ ಕ್ಯಾನ್ಸರ್ ಪೀಡಿತರಿಗೆ ಮಾತ್ರವಲ್ಲ, ಆಕೆಯ ಸುತ್ತಲೂ ಇದ್ದ ಎಲ್ಲರಿಗೂ ಪ್ರಭಾವ ಬೀರಿತು.
ಆಸ್ಪತ್ರೆಯಲ್ಲಿದ್ದಷ್ಟು ದಿನವೂ ಆಕೆ ಸಕಾರಾತ್ಮಕವಾಗಿದ್ದು, ಆಕೆಯ ಸುತ್ತಲಿನ ಕ್ಯಾನ್ಸರ್ ಸಂತ್ರಸ್ತರ ಮುಖದಲ್ಲೂ ನಗು ಮತ್ತು ಸಕಾರಾತ್ಮತೆ ತಂದಳು. ತನ್ನ ವಿರಾಮದ ಸಮಯದಲ್ಲಿ ಸ್ಪೂರ್ತಿದಾಯಕ ಪತ್ರ, ಇಮೇಲ್ ಮತ್ತು ಕವಿತೆಗಳನ್ನು ಬರೆಯುವ ಮೂಲಕ ತನ್ನಂತೆ ಹೋರಾಡುತ್ತಿರುವವರಲ್ಲಿ ಹೊಸ ಆಶಾಕಿರಣ ಮತ್ತು ನಗುವನ್ನು ತರಿಸಿದಳು. ಮಿಲಿಂಡಾ ಬದುಕಿನ ಕಡೇಯ ಆರು ತಿಂಗಳನ್ನು ಬೇರೆಯವರಿಗೆ ಸಹಾಯ ಮಾಡಲು ಮುಡಿಪಾಗಿಟ್ಟು, ಆದರ್ಶ ಮೆರೆದಳು. ಇತರೆ ಕ್ಯಾನ್ಸರ್ ಸಂತ್ರಸ್ತರಲ್ಲಿ ಭರವಸೆಯ ಕಿರಣವಾದಳು