ಇಸ್ಲಾಮಾಬಾದ್/ದೆಹಲಿ:ಪಾಕಿಸ್ತಾನದ ಲಾಹೋರ್ ನಗರ ಜಗತ್ತಿನಲ್ಲೇ ಅತಿ ಮಲಿನ ನಗರ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿ ಮುಂದುವರೆದಿದೆ. ಅಲ್ಲಿನ ಮಾಲಿನ್ಯ ಸೂಚ್ಯಂಕ 415 ರಷ್ಟಿದೆ ಎಂದು ಪಾಕಿಸ್ತಾನದ ಎಆರ್ವೈ ನ್ಯೂಸ್ ವರದಿ ಮಾಡಿದೆ.
ಪಂಜಾಬ್ ಪರಿಸರ ಸುರಕ್ಷಾ ವಿಭಾಗ ಹಂಚಿಕೊಂಡ ದತ್ತಾಂಶದಂತೆ, ಲಾಹೋರ್ನ ಅಪ್ಪರ್ ಮಾಲ್ ವಾಯುಮಾಲಿನ್ಯ ಸೂಚ್ಯಂಕ 508 ದಾಖಲಾಗಿದೆ. ಪೊಲೋ ಗ್ರೌಂಡ್ನಲ್ಲಿ ಎಕ್ಯೂಐ 491 ಇದ್ದರೆ, ಲಾಹೋರ್ ಕಾಲೇಜ್ ಫಾರ್ ವುಮೆನ್ ಯುನಿವರ್ಸಿಟಿಯಲ್ಲಿ ಎಕ್ಯೂಐ 297 ಇದೆ. ಲಾಹೋರ್ ಕಾಲೇಜ್ ಆಫ್ ಅರ್ಥ್ ಆ್ಯಂಡ್ ಎನ್ವರಿನಾಮೆಂಟಲ್ ಸೈನ್ಸ್ನಲ್ಲಿ ಎಕ್ಯೂಐ 250 ಇದೆ ಎಂದು ವರದಿ ತಿಳಿಸಿದೆ.
151-300ರ ನಡುವೆ ಎಕ್ಯೂಐ ದರ ಇದ್ದರೆ ಅದು ಅನಾರೋಗ್ಯಕರವಾಗಿದೆ. 201-300ರ ನಡುವೆ ಇದ್ದರೆ ಹಾನಿಕಾರಕ ಮತ್ತು 300ಕ್ಕಿಂತ ಹೆಚ್ಚಿದ್ದರೆ ಅಪಾಯಕಾರಿಯಾಗಿದೆ. ಮಾಲಿನ್ಯದ ಐದು ವರ್ಗ, ಓಜೋನ್‌ನ ತಳಮಟ್ಟ, ಕಣಗಳ ಅಂಶ, ಕಾರ್ಬನ್ ಮೊನೋಕ್ಸೈಡ್, ಸಲ್ಫರ್ ಡಾಆಕ್ಸೈಡ್ ಮತ್ತು ನೈಟ್ರೋಜನ್ ಡೈಯಾಕ್ಸೆಡ್ ಆಧಾರದಡಿ ಈ ಎಕ್ಯೂಐನ ಲೆಕ್ಕಾಚಾರ ನಡೆಸಲಾಗುತ್ತದೆ.
ಚಳಿಗಾಲದಲ್ಲಿ ಗಾಳಿಯ ವೇಗ ಬದಲಾಗುವಿಕೆ, ದಿಕ್ಕು ಮತ್ತು ತಾಪಮಾನದ ಕುಸಿತದಿಂದ ವಾಯು ಮಾಲಿನ್ಯ ಉಂಟಾಗುತ್ತದೆ ಎಂದು ತಜ್ಞರು ಹೇಳುತ್ತಿದ್ದಾರೆ. ಬೇಸಿಗೆಗಿಂತ ಚಳಿಗಾಲದಲ್ಲಿ ಗಾಳಿ ಭಾರವಾಗಿರುತ್ತದೆ. ಚಳಿಗಾಲದಲ್ಲಿ ವಾತಾವರಣದಲ್ಲಿನ ವಿಷಕಾರಿ ಕಣಗಳು ಕೆಳಮುಖವಾಗಿ ಚಲಿಸಿ ಮಾಲಿನ್ಯ ಉಂಟುಮಾಡುತ್ತವೆ. ಇದರಿಂದ ದೊಡ್ಡ ಪ್ರಮಾಣದ ಇಂಗಾಲ ಮತ್ತು ಹೊಗೆ ಸೇರಿದಂತೆ ಕಲುಷಿತ ಕಣಗಳ ಪದರ ಪ್ರದೇಶವನ್ನು ಆವರಿಸುತ್ತದೆ.