ಕರ್ನಾಟಕ

karnataka

ETV Bharat / sukhibhava

ನೀವು 'ನಿರೋಗಿ'ಗಳಾಗಬೇಕೇ!? ಹಾಗಾದ್ರೆ, ಇಂದಿನಿಂದಲೇ ತಿನ್ನಿ ರಾಗಿ.. - ರಾಗಿ ಬಳಕೆಯ ಅನುಕೂಲ

ರಾಗಿಯು ಕ್ಯಾಲ್ಸಿಯಂನ ನೈಸರ್ಗಿಕ ಮೂಲವಾಗಿದೆ ಮತ್ತು ಇದರ ನಿಯಮಿತ ಸೇವನೆಯು ಬೆಳೆಯುತ್ತಿರುವ ಮಕ್ಕಳಲ್ಲಿ ಮೂಳೆಗಳನ್ನು ಬಲಪಡಿಸುವುದಲ್ಲದೆ, ವಯಸ್ಸಾದವರಲ್ಲಿ ಮೂಳೆಯ ಸಾಂದ್ರತೆಯನ್ನು ಸುಧಾರಿಸುತ್ತದೆ. ಇದು ಆಸ್ಟಿಯೊಪೊರೋಸಿಸ್ ರೋಗಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ..

ragi
ರಾಗಿ

By

Published : Sep 27, 2021, 10:18 PM IST

ಸಾಮಾನ್ಯವಾಗಿ ಆಹಾರ ತಜ್ಞರು ಯಾವಾಗಲೂ ಆರೋಗ್ಯಕರವಾಗಿರಲು ವ್ಯಾಯಾಮ ಮಾಡುವಂತೆ ಶಿಫಾರಸು ಮಾಡುತ್ತಾರೆ. ಜೊತೆಗೆ ಫಿಟ್ ಆಗಿರಲು ಉತ್ತಮ ಆಹಾರಕ್ರಮವನ್ನು ಅನುಸರಿಸುವಂತೆಯೂ ಸಲಹೆ ನೀಡುತ್ತಾರೆ.

ಇದಕ್ಕೆ ಮುಖ್ಯ ಕಾರಣವೆಂದರೆ, ವ್ಯಾಯಾಮದಷ್ಟೇ ಸಮತೋಲಿತ ಮತ್ತು ಪೌಷ್ಠಿಕ ಆಹಾರ ಕ್ರಮವು ಆರೋಗ್ಯಕರ ರೀತಿಯಲ್ಲಿ ತೂಕವನ್ನು ಕಳೆದುಕೊಳ್ಳಲು ಸಹಾಯಕವಾಗಲಿದೆ. ಆದ್ದರಿಂದ, ಅಂತಹ ಒಂದು ಆರೋಗ್ಯಕರ ಆಹಾರ ಧಾನ್ಯವನ್ನು ನಾವಿಂದು ತಿಳಿಸಿಕೊಡುತ್ತೇವೆ. ಇದು ಪೌಷ್ಟಿಕಾಂಶದೊಂದಿಗೆ ನಿಮ್ಮ ಒಟ್ಟಾರೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ತೂಕವನ್ನು ಕಳೆದುಕೊಳ್ಳಲು ಆಸಕ್ತರಾಗಿರುವ ಜನರು ಕೆಲವೊಮ್ಮೆ ಸಂಪೂರ್ಣ ಜ್ಞಾನವಿಲ್ಲದೆ ವಿಶೇಷ ಆಹಾರವನ್ನು ಅನುಸರಿಸಲು ಪ್ರಾರಂಭಿಸುತ್ತಾರೆ. ಇದು ಕೆಲವೊಮ್ಮೆ ತೂಕ ನಷ್ಟಕ್ಕೆ ನೆರವಾಗಬಹುದು. ಆದರೆ, ಒಟ್ಟಾರೆ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಆದ್ದರಿಂದ, ನಿರ್ದಿಷ್ಟ ಆಹಾರಕ್ರಮಕ್ಕೆ ಬದಲಾಗಿ ನಾವು ಪೌಷ್ಟಿಕ ಆಹಾರಗಳನ್ನು ಸೇವಿಸುವುದು ಮತ್ತು ವ್ಯಾಯಾಮ ಮಾಡುವುದು ಮುಖ್ಯ. ಅಂತಹ ಒಂದು ಆರೋಗ್ಯಕರ ಆಹಾರವೆಂದರೆ 'ರಾಗಿ'.

ರಾಗಿ ಅತ್ಯಂತ ಪೌಷ್ಟಿಕವಾಗಿದೆ ಮತ್ತು ಇದು ನಿಮಗೆ ಕೆಲ ಕೆಜಿವರೆಗೆ ದೇಹದ ತೂಕ ಇಳಿಸಲು ಮತ್ತು ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ರಾಗಿ ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದ ಕೆಲವು ವಿಷಯಗಳು ಇಲ್ಲಿವೆ.

ರಾಗಿ ಎಂದರೇನು?

ರಾಗಿ ಒಂದು ನಾರಿನ ಅಂಶವಿರುವ ಧಾನ್ಯ. ಇದನ್ನು ಅಕ್ಕಿ, ಗೋಧಿ ಅಥವಾ ಬಾರ್ಲಿಗೆ ಪರ್ಯಾಯವಾಗಿ ಬಳಸಬಹುದು. ಇದು ಐಸೊಲುಸಿನ್, ಟ್ರಿಪ್ಟೊಫಾನ್, ವ್ಯಾಲಿನ್, ಮೆಥಿಯೋನಿನ್ ಮತ್ತು ಥ್ರೊಯೊನಿನ್ ನಂತಹ ಅಮೈನೋ ಆಮ್ಲಗಳನ್ನು ಹೊಂದಿರುತ್ತದೆ. ರಾಗಿಯನ್ನು ಸಸ್ಯಾಹಾರಿ ಆಹಾರದ ಒಂದು ಭಾಗವೆಂದು ಪರಿಗಣಿಸಲಾಗಿದೆ. ಇದನ್ನು ಗೋಧಿಗೆ ಉತ್ತಮ ಪರ್ಯಾಯವೆಂದು ಪರಿಗಣಿಸಲಾಗಿದೆ.

ರಾಗಿ ಒಂದು ಆದರ್ಶವಾದ ಬೆಳಗಿನ ಉಪಾಹಾರ

ರಾಗಿಯಲ್ಲಿ ವಿಟಮಿನ್ ಸಿ, ವಿಟಮಿನ್ ಇ, ಬಿ-ಕಾಂಪ್ಲೆಕ್ಸ್ ವಿಟಮಿನ್​ಗಳು, ಕಬ್ಬಿಣ, ಕ್ಯಾಲ್ಸಿಯಂ, ಆ್ಯಂಟಿಆಕ್ಸಿಡೆಂಟ್ಸ್, ಪ್ರೊಟೀನ್, ಫೈಬರ್, ಸಾಕಷ್ಟು ಕ್ಯಾಲೋರಿಗಳು ಮತ್ತು ಉತ್ತಮ ಕೊಬ್ಬು ಕಂಡು ಬರುತ್ತದೆ.

ಹೀಗಾಗಿ, ರಾಗಿ ಆಧಾರಿತ ಆಹಾರಗಳಾದ ರಾಗಿ ಉಪ್ಮಾ, ಇಡ್ಲಿ ಅಥವಾ ಚಪಾತಿಯನ್ನು ಬೆಳಗ್ಗಿನ ವೇಳೆ ತಿನ್ನುವುದರಿಂದ ದೇಹವು ದಿನವಿಡೀ ಚೈತನ್ಯದಿಂದಿರಲು ಸಹಾಯ ಮಾಡುತ್ತದೆ ಎಂದು ಪೌಷ್ಟಿಕ ತಜ್ಞೆ ದಿವ್ಯಾ ಶರ್ಮಾ ಸೂಚಿಸುತ್ತಾರೆ.

ರಾಗಿ ಪಥ್ಯದ ನಾರುಗಳಿಂದ ಸಮೃದ್ಧವಾಗಿದೆ. ಹೀಗಾಗಿ, ಇದು ಬೇಗನೆ ಜೀರ್ಣವಾಗುವುದಿಲ್ಲವಾದ್ದರಿಂದ ರಾಗಿ ಆಧಾರಿತ ಆಹಾರಗಳು ನಮ್ಮ ಹೊಟ್ಟೆಯನ್ನು ತುಂಬ ಗಂಟೆಗಳ ಕಾಲ ತುಂಬಿಸುತ್ತವೆ. ಆದ್ದರಿಂದ, ನಾವು ದೀರ್ಘಕಾಲದವರೆಗೆ ಹಸಿವನ್ನು ಅನುಭವಿಸುವುದಿಲ್ಲ.

ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಯಾಕೆಂದರೆ, ಎರಡು ಊಟಗಳ ನಡುವೆ ಅನಾರೋಗ್ಯಕರ ತಿಂಡಿ ಕಡಿಮೆಯಾಗುತ್ತದೆ. ಜೀರ್ಣವಾಗಲು ಸಮಯ ತೆಗೆದುಕೊಳ್ಳುವುದರಿಂದ ರಾತ್ರಿ ವೇಳೆ ರಾಗಿಯನ್ನು ತಿನ್ನುವುದು ವಿಶೇಷವಾಗಿ ಜೀರ್ಣಕ್ರಿಯೆ ಕಡಿಮೆ ಇರುವವರಿಗೆ ಒಳ್ಳೆಯದಲ್ಲ ಎಂದು ಪರಿಗಣಿಸುವುದು ಮುಖ್ಯ.

ಸೇವಿಸುವ ಮಾರ್ಗಗಳು

ರಾಗಿಯನ್ನು ಸಾಮಾನ್ಯವಾಗಿ ರುಬ್ಬಿದ ಅಥವಾ ಮೊಳಕೆಯೊಡೆದ ರೂಪದಲ್ಲಿ ಸೇವಿಸಲಾಗುತ್ತದೆ. ರಾಗಿ ಹಿಟ್ಟಿನಿಂದ ನೀವು ಚಪಾತಿ ಅಥವಾ ರೊಟ್ಟಿಗಳನ್ನು ತಯಾರಿಸಬಹುದು. ಆದರೆ, ಶುದ್ಧ ರಾಗಿ ಹಿಟ್ಟಿನಿಂದ ಚಪಾತಿ ತಯಾರಿಸುವುದು ಕಷ್ಟವಾದ್ದರಿಂದ ನೀವು ಅದಕ್ಕೆ ಸ್ವಲ್ಪ ಗೋಧಿ ಹಿಟ್ಟನ್ನು ಸೇರಿಸಬಹುದು.

ಇದಲ್ಲದೇ, ನೀವು ಇದರೊಂದಿಗೆ ಇಡ್ಲಿ, ಉತ್ತಪಮ್ ಮತ್ತು ಉಪ್ಮಾವನ್ನು ಕೂಡ ಮಾಡಬಹುದು. ಅಲ್ಲದೆ, ರಾಗಿ ಧಾನ್ಯಗಳು ಗಾತ್ರದಲ್ಲಿ ಚಿಕ್ಕದಾಗಿರುವುದರಿಂದ ಅವುಗಳನ್ನು ಹೊಳಪು ಮಾಡುವುದು ಅಥವಾ ಸಂಸ್ಕರಿಸುವುದು ಕಷ್ಟ. ಅದಕ್ಕಾಗಿಯೇ ಅದರ ಕಲಬೆರಕೆಯ ಸಾಧ್ಯತೆಗಳು ಕಡಿಮೆ.

ಪ್ರಯೋಜನಗಳು ಯಾವುವು?

ಮೇಲೆ ಹೇಳಿದಂತೆ ರಾಗಿಯಲ್ಲಿ ವಿವಿಧ ಅಮೈನೋ ಆಮ್ಲಗಳು ಕಂಡು ಬರುತ್ತವೆ. ಇದು ನಮ್ಮ ಚರ್ಮ, ಹಲ್ಲು ಮತ್ತು ಒಸಡುಗಳು ಮತ್ತು ಕೂದಲನ್ನು ಆರೋಗ್ಯವಾಗಿರಿಸುತ್ತದೆ. ರಾಗಿಯಲ್ಲಿ ಆ್ಯಂಟಿಆಕ್ಸಿಡೆಂಟ್‌ಗಳಿವೆ. ಇದು ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇದರ ನಿಯಮಿತ ಸೇವನೆಯು ಆತಂಕ, ಖಿನ್ನತೆ ಮತ್ತು ನಿದ್ರಾಹೀನತೆಯ ಸಮಸ್ಯೆಗಳಿಗೆ ಸಹಾಯ ಮಾಡುತ್ತದೆ.

ರಾಗಿಯು ಕ್ಯಾಲ್ಸಿಯಂನ ನೈಸರ್ಗಿಕ ಮೂಲವಾಗಿದೆ ಮತ್ತು ಇದರ ನಿಯಮಿತ ಸೇವನೆಯು ಬೆಳೆಯುತ್ತಿರುವ ಮಕ್ಕಳಲ್ಲಿ ಮೂಳೆಗಳನ್ನು ಬಲಪಡಿಸುವುದಲ್ಲದೆ, ವಯಸ್ಸಾದವರಲ್ಲಿ ಮೂಳೆಯ ಸಾಂದ್ರತೆಯನ್ನು ಸುಧಾರಿಸುತ್ತದೆ. ಇದು ಆಸ್ಟಿಯೊಪೊರೋಸಿಸ್ ರೋಗಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಸಾಕಷ್ಟು ಫೈಬರ್ ಹೊಂದಿರುವ ಕಾರಣ ರಾಗಿಯನ್ನು ತೂಕ ನಷ್ಟ, ಮಧುಮೇಹ ಮತ್ತು ಸ್ಥೂಲಕಾಯಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ರಾಗಿ ಕಬ್ಬಿಣನಾಂಶದಲ್ಲಿ ಸಮೃದ್ಧವಾಗಿದೆ. ಅದಕ್ಕಾಗಿಯೇ ಇದು ರಕ್ತದಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಓದಿ: ಕೂದಲು ಉದುರುವಿಕೆ ತಡೆಗಟ್ಟಲು ಇಲ್ಲಿದೆ ಸರಳ ಪರಿಹಾರ!

ABOUT THE AUTHOR

...view details