ಕರ್ನಾಟಕ

karnataka

ETV Bharat / sukhibhava

ಹರ್ನಿಯಾ ಆಪರೇಷನ್​ಗೆ ಹೋದ ರೋಗಿಯ ಮೂತ್ರಪಿಂಡವೇ ಕಣ್ಮರೆ; ಪರಿಹಾರಕ್ಕೆ ಆದೇಶಿಸಿದ ಗ್ರಾಹಕ ಆಯೋಗ

ಖಮ್ಮಂ ಜಿಲ್ಲೆಯ ಕೊತ್ತಗುಡೆಮ್​ನ ರೇಣುಕುಂಟ್ಲಾ ರವಿರಾಜು ಕಿಡ್ನಿ ಕಳೆದುಕೊಂಡಿರುವ ವ್ಯಕ್ತಿ. ಹರ್ನಿಯಾ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಇವರ ಕಿಡ್ನಿಯನ್ನು ವೈದ್ಯರು ತೆಗೆದುಹಾಕಿದ್ದಾರೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

By ETV Bharat Karnataka Team

Published : Dec 18, 2023, 12:20 PM IST

Updated : Dec 20, 2023, 10:20 AM IST

ಹೈದರಾಬಾದ್​: ಹರ್ನಿಯಾ ಆಪರೇಷನ್​ಗೆ ಹೋದ ರೋಗಿ ಇದೀಗ ತನ್ನ ಕಿಡ್ನಿಯನ್ನೇ ಕಳೆದುಕೊಂಡಿರುವ ಆಘಾತಕಾರಿ ಘಟನೆ ಸಿಕಂದರಾಬಾದ್​ನಲ್ಲಿ ನಡೆದಿದೆ. ಖಾಸಗಿ ಆಸ್ಪತ್ರೆಯ ಡಾ ನಂದಕುಮಾರ್​ ಬಿ, ಮದೆಕರ್​ ಮತ್ತು ಡಾ ಪ್ರಸಾದ್​ ಬೆಹರ್​ ವಿರುದ್ಧ ಈ ಸಂಬಂಧ ರಾಜ್ಯ ಗ್ರಾಹಕ ಆಯೋಗ ಕಿಡಿಕಾರಿದೆ. ಅಲ್ಲದೇ ರೋಗಿಗೆ 30 ಲಕ್ಷ ಪರಿಹಾರ ಮತ್ತು 25 ಸಾವಿರ ವೆಚ್ಚ ಭರಿಸುವಂತೆ ಸೂಚಿಸಿದೆ.

ವೈದ್ಯ ನಾರಾಯಣೋ ಹರಿ ಎಂಬ ಮಾತಿದೆ. ಆ ಮಾತಿಗೆ ಇದೀಗ ಅಪವಾದ ಎಂಬಂತಹ ಘಟನೆ ನಡೆದಿದೆ. ಖಮ್ಮಂ ಜಿಲ್ಲೆಯ ಕೊತ್ತಗುಡೆಮ್​ನ ರೇಣುಕುಂಟ್ಲಾ ರವಿರಾಜು ಕಿಡ್ನಿ ಕಳೆದುಕೊಂಡಿರುವ ವ್ಯಕ್ತಿ. ಹರ್ನಿಯಾ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಇವರ ಕಿಡ್ನಿಯನ್ನು ವೈದ್ಯರು ತೆಗೆದು ಹಾಕಿದ್ದಾರೆ. ಈ ಸಂಬಂಧ ಗ್ರಾಹಕ ಆಯೋಗಕ್ಕೆ ದೂರು ಸಲ್ಲಿಕೆ ಆಗಿತ್ತು. ಈ ಪ್ರಕರಣ ಸಂಬಂಧ ವಿವಿ ಸೇಶುಬಾಬು ಮತ್ತು ಆರ್​ಎಸ್​ ರಾಜಶ್ರೀ ಅವರನ್ನೊಳಗೊಂಡ ಪೀಠ ಆದೇಶ ನೀಡಿದೆ.

ಕೊತ್ತಗುಡೆ​ಮ್​ನಲ್ಲಿ ಮೆಕಾನಿಕ್​ ಆಗಿರುವ ರವಿ ರಾಜು ಎಂಬುವರು 2007ರಲ್ಲಿ ಹೈದರಾಬಾದ್​ನ ಗಾಂಧಿ ಆಸ್ಪತ್ರೆಗೆ ದಾಖಲಾಗಿದ್ದರು. ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಇವರನ್ನು ವೈದ್ಯರು ಶಸ್ತ್ರಚಿಕಿತ್ಸೆಗೆ ಒಳಪಡಿಸಿದ್ದರು. ಬಳಿಕ 2009ರಲ್ಲಿ ಸಿಕಂದರಾಬಾದ್​​ನ ಖಾಸಗಿ ಆಸ್ಪತ್ರೆಗೆ ಹರ್ನಿಯಾ ಸಮಸ್ಯೆಯಿಂದ ರವಿ ರಾಜು ದಾಖಲಾಗಿದ್ದರು. ಈ ವೇಳೆ ಅವರನ್ನು ತಪಾಸಣೆ ಮಾಡಿದಾಗ ಅವರ ಎರಡೂ ಕಿಡ್ನಿಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವುದು ಕಂಡು ಬಂದಿತ್ತು. ಆರೋಗ್ಯ ಶ್ರೀ ಯೋಜನೆ ಅಡಿ ಅವರು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದು, ಜುಲೈ 31 ರಂದು ಡಿಸ್ಚಾರ್ಜ್​ ಆಗಿದ್ದರು.

2011ರಲ್ಲಿ ರವಿ ರಾಜು ಕೋಲ್ಕತ್ತಾದ ಸಂಬಂಧಿಕರ ಮನೆಗೆ ಭೇಟಿ ನೀಡಿದ್ದ ವೇಳೆ ಮತ್ತೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಅಲ್ಲಿನ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಅವರು ಹರ್ನಿಯಾ ಶಸ್ತ್ರ ಚಿಕಿತ್ಸೆಗೆ ಮತ್ತೊಮ್ಮೆ ಒಳಗಾದರು. ಅವರನ್ನು ತಪಾಸಣೆ ಮಾಡುವಾಗ ಅವರ ದೇಹದಲ್ಲಿ ಒಂದೇ ಕಿಡ್ನಿ ಇರುವುದು ಪತ್ತೆಯಾಗಿದೆ. 2012ರಲ್ಲಿ ಮತ್ತೆ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಅವರು, ಕಮ್ಮಂ ಮೆಡಿಕೇರ್​ ಡಯಾಗ್ನಸ್ಟಿಕ್​ ಸೆಂಟರ್​ನಲ್ಲಿ ಬಳಿಕ ಮಮತಾ ಮೆಡಿಕಲ್​ ಕಾಲೇಜ್​ನಲ್ಲಿ ಪರೀಕ್ಷೆಗೆ ಒಳಗಾದರು. ನಂತರ ಗ್ರಾಹಕ ಆಯೋಗದ ಮೊರೆ ಹೋದರು. ಹರ್ನಿಯಾ ಆಪರೇಷನ್​ ವೇಳೆ ವೈದ್ಯರು ನನ್ನ ಕಿಡ್ನಿಯನ್ನು ತೆಗೆದು ಅದನ್ನು 50 ಲಕ್ಷಕ್ಕೆ ಮಾರಾಟ ಮಾಡಿದ್ದಾರೆ. ಕಿಡ್ನಿಯ ಇಲ್ಲದೆ ಇದೀಗ ಅನಾರೋಗ್ಯದ ಪರಿಣಾಮಕ್ಕೆ ಒಳಗಾಗುತ್ತಿದ್ದು, 50 ಲಕ್ಷ ರೂ. ಪರಿಹಾರಕ್ಕೆ ಬೇಡಿಕೆ ಇಟ್ಟಿದ್ದರು.

ಸಾಕ್ಷ್ಯ ನೀಡುವಲ್ಲಿ ವಿಫಲರಾದ ವೈದ್ಯರು: ಆಸ್ಪತ್ರೆ ವೈದ್ಯರು ಸಂತ್ರಸ್ತನ ಅರೋಪವನ್ನು ತಳ್ಳಿಹಾಕಿದ್ದಾರೆ. ರೋಗಿ ಶಸ್ತ್ರ ಚಿಕಿತ್ಸೆಗೆ ಒಳಗಾಗುವ ಮುನ್ನ ಅನೇಕ ಆಸ್ಪತ್ರೆಯಲ್ಲಿ ಸರ್ಜರಿಗೆ ಒಳಗಾಗಿದ್ದಾರೆ. ಅವರಲ್ಲಿ ಕಿಡ್ನಿ ಇಲ್ಲ ಎಂದ ಮಾತ್ರಕ್ಕೆ ತೆಗೆದು ಹಾಕಿದ್ದೇವೆ ಎಂದು ಅರ್ಥವಲ್ಲ. ಆರೋಗ್ಯ ಕ್ಷೀಣಿಸುವ ಹಂತದಲ್ಲಿ ಮೂತ್ರಪಿಂಡಗಳು ಸಹ ಕಣ್ಮರೆಯಾಗಬಹುದು. ಅವರು ಡಿಸ್ಚಾರ್ಜ್​ ಆಗುವ ಸಂದರ್ಭದಲ್ಲಿ ಸ್ಕಾನಿಂಗ್​ಗೆ ಒಳಪಡಿಸಿದಾಗ ಅವರಲ್ಲಿ ಎರಡೂ ಕಿಡ್ನಿಗಳು ಸಹಜವಾಗಿಯೇ ಕಾರ್ಯನಿರ್ವಹಿಸುತ್ತಿದ್ದವು. ಈ ಅರ್ಜಿಯನ್ನು ವಜಾಗೊಳಿಸಬೇಕು ಎಂದು ಮನವಿ ಮಾಡಿದ್ದರು.

ಎರಡು ಕಡೆ ವಾದ-ವಿವಾದ ಆಲಿಸಿದ ಪೀಠ, ವೈದ್ಯರು ಯಾವುದೇ ತಪ್ಪನ್ನು ಮಾಡಿಲ್ಲ ಎನ್ನುತ್ತಿದ್ದಾರೆ. ಆದರೆ ಅವರು ಡಿಸ್ಚಾರ್ಜ್​ ಮಾಡುವ ಸಂದರ್ಭದಲ್ಲಿ ಅಲ್ಟ್ರಾಸೌಂಡ್​ ಪರೀಕ್ಷೆಯ ಸಾಕ್ಷಿ ಮತ್ತು ಪೂರಕ ಪುರಾವೆ ಸಲ್ಲಿಸುವಲ್ಲಿ ವಿಫಲರಾಗಿದ್ದಾರೆ. ಈ ಹಿನ್ನೆಲೆ ಅವರು ತಪ್ಪು ಮಾಡಿರುವುದು ಕಂಡು ಬರುತ್ತಿದೆ. ಶಸ್ತ್ರಚಿಕಿತ್ಸೆ ಕಾರ್ಯಾಚರಣೆಯ ನೆಪದಲ್ಲಿ ಅಕ್ರಮ ಚಟುವಟಿಕೆಗಳ ಆರೋಪವನ್ನು ಅಲ್ಲಗಳೆಯುವಂತಿಲ್ಲ. ಮುಗ್ಧತೆ ಆಧಾರದ ಮೇಲೆ ದೂರುದಾರರಿಗೆ ವಂಚನೆ ಮಾಡಲಾಗಿದ್ದು, ಹೀಗಾಗಿ ಪರಿಹಾರ ನೀಡಬೇಕಿದೆ. ಸಂತ್ರಸ್ತರಿಗೆ ಆದ ನಷ್ಟವನ್ನು ಭರಿಸಲು ಸಾಧ್ಯವಿಲ್ಲ. ಈ ಹಿನ್ನೆಲೆ ಕನಿಷ್ಠ 30 ಲಕ್ಷ ರೂ.ಗಳ ಪರಿಹಾರವಾಗಿ ಮತ್ತು ಇನ್ನೂ 25 ಸಾವಿರ ರೂ.ಗಳನ್ನು ವೆಚ್ಚವಾಗಿ ನೀಡಬೇಕು ಎಂದು ಗ್ರಾಹಕ ಆಯೋಗ ಆದೇಶ ನೀಡಿದೆ.

ಇದನ್ನೂ ಓದಿ: ಅಂಧತ್ವ ಅಪಾಯದ ಬಗ್ಗೆ ಎಚ್ಚರಿಕೆ ನೀಡಲಿದೆ AI

Last Updated : Dec 20, 2023, 10:20 AM IST

ABOUT THE AUTHOR

...view details