ನವದೆಹಲಿ: ಕೇರಳದಲ್ಲಿ ಓಮ್ರಿಕಾನ್ನ ಉಪ ತಳಿಯಾದ ಜೆಎನ್ 1 ಪತ್ತೆಯಾಗಿದೆ. ಇದು ಹೊಸ ಕೋವಿಡ್ ಪ್ರಕರಣಕ್ಕೆ ಕಾರಣವಾಗಲಿದ್ಯಾ ಎಂಬ ಆತಂಕ ಮೂಡಿದೆ. ಆದರೆ, ಈ ಕುರಿತು ಮಾತನಾಡಿರುವ ತಜ್ಞರು ಯಾವುದೇ ಭಯ ಬೇಡ. ಆದರೆ, ಈ ತಳಿ ಬಗ್ಗೆ ನಿರಂತರ ಗಮನ ಇರಲಿ ಎಂದಿದ್ದಾರೆ.
ಭಾರತೀಯ ಸಾರ್ಸ್- ಕೋವ್-2 ಜಿನೋಮಿಕ್ ಕಾನ್ಸೊರ್ಟಿಯಂ (ಐಎನ್ಎಸ್ಸಿಒಜಿ)ಯ ಇತ್ತೀಚಿನ ಹೊಸ ದತ್ತಾಂಶದಲ್ಲಿ ಕೇರಳದ ಮಹಿಳೆಯೊಬ್ಬರಲ್ಲಿ ಕೋವಿಡ್-19 ಉಪತಳಿಯಾದ ಜೆಎನ್.1 ತಳಿ ಇರುವಿಕೆ ದೃಢಪಟ್ಟಿದೆ. ನವೆಂಬರ್ 18 ರಂದು ತಿರುವನಂತಪುರಂನ 79 ವರ್ಷದ ಮಹಿಳೆಯ ಗಂಟಲು ಮಾದರಿಯನ್ನು ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅವರಿಗೆ ಹೊಸ ಉಪತಳಿಯ ಸೋಂಕಿರುವುದು ಪತ್ತೆಯಾಗಿದೆ. ಅವರಲ್ಲಿ influenza-like illnesses (ILI- ಇನ್ಫ್ಲುಯೆನ್ಝಾ ತರಹದ ಕಾಯಿಲೆ) ಸೌಮ್ಯ ಲಕ್ಷಣ ಕಂಡುಬಂದಿದೆ. ಸದ್ಯ ಕೋವಿಡ್-19 ನಿಂದ ಅವರು ಚೇತರಿಸಿಕೊಂಡಿದ್ದಾರೆ. ರೋಗದ ಲಕ್ಷಣಗಳು ಸೌಮ್ಯವಾಗಿದ್ದು ರೋಗಿಗಳು ಯಾವುದೇ ಚಿಕಿತ್ಸೆ ಇಲ್ಲದೆ ತಮ್ಮ ಮನೆಗಳಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ICMR) ಮಹಾನಿರ್ದೇಶಕ ಡಾ ರಾಜೀವ್ ಬಹ್ಲ್ ಹೇಳಿದ್ದಾರೆ.
ಜೆಎನ್1 ಎಂಬುದು ಬಿಎ.2.68 ಓಮ್ರಿಕಾನ್ ತಳಿಯ ವಂಶಾವಳಿಯಾಗಿದ್ದು, ಮೊದಲ ಬಾರಿಗೆ ಆಗಸ್ಟ್ನಲ್ಲಿ ಲಕ್ಸಂಬರ್ಗ್ನಲ್ಲಿ ಕಂಡು ಬಂದಿತು. ಬಿಎ.2.86 ಎಂಬುದನ್ನು ಪಿರೋಲಾ ತಳಿಯಿಂದಲೂ ಪರಿಚಿತವಾಗಿದ್ದು, ಇದು ಮೊದಲಿಗೆ ಜುಲೈನಲ್ಲಿ ಡೆನ್ಮಾರ್ಕ್ನಲ್ಲಿ ಪತ್ತೆಯಾಯಿತು.
ನವೆಂಬರ್ನಲ್ಲಿ ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ (ಯುಎಸ್ಸಿಡಿಸಿ) ಜೆಎನ್ ರೋಗ ನಿರೋಧಕ ಶಕ್ತಿ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಕಳವಳ ವ್ಯಕ್ತಪಡಿಸಿತು. ಜೆಎನ್ ಎಂಬುದು ಬಿಎ.2.86 ವಂಶಾವಳಿ ಆಗಿದ್ದು, ಎಲ್455ಎಸ್ ರೂಪಾಂತರವಾಗಿದೆ. ಇದು ಪ್ರತಿರಕ್ಷಣ ವ್ಯವಸ್ಥೆ ತಪ್ಪಿಸುವ ಗುಣಲಕ್ಷಣ ಹೊಂದಿದೆ.
ಹೊಸ ತಳಿ ಅಲ್ಲ: ಜೆಎನ್ 1 ಎಂಬುದು ಹೊಸ ತಳಿಯಲ್ಲ. ಆದರೆ, ಇದು ಭಾರತಕ್ಕೆ ಹೊಸದಾಗಿದೆ. ಇದು ಈಗಾಗಲೇ ಜಾಗತಿಕವಾಗಿ 38 ದೇಶದಲ್ಲಿ ಅಸ್ತಿತ್ವ ಹೊಂದಿದೆ. ಯುಕೆ. ಪೋರ್ಚುಗಲ್ ಮತ್ತು ಇತರ ದೇಶದಲ್ಲಿ ಇದನ್ನು ಕಾಣಬಹುದಾಗಿದೆ ಎಂದು ಸೋಂಕು ರೋಗ ತಜ್ಞ ಡಾ ಈಶ್ವರ್ ಗಿಲ್ಡ ತಿಳಿಸಿದ್ದಾರೆ.