ಶ್ರೀನಗರ:ಕಾಶ್ಮೀರ ಹಿಮಪಾತದ ಜೊತೆಗೆ ರಮಣೀಯ ಸೌಂದರ್ಯವನ್ನು ಹೊಂದಿದ್ದು, ನೆಚ್ಚಿನ ಶೂಟಿಂಗ್ ಸ್ಥಳಗಳಿಗೆ ಹೆಸರುವಾಸಿಯಾಗಿದೆ. ಇದೇ ಸಮಯದಲ್ಲಿ, ಕಣಿವೆಯು ಉಲ್ಬಣಗೊಳ್ಳುವ ಸಮಸ್ಯೆಯೊಂದಿಗೆ ಹೋರಾಡುತ್ತಿದೆ. ಇತ್ತೀಚಿನ ಅಧ್ಯಯನದ ಪ್ರಕಾರ, ಕಾಶ್ಮೀರದಲ್ಲಿ ಹೆಚ್ಚಿನ ಮಹಿಳೆಯರು ವಿಟಮಿನ್ ಡಿ ಕೊರತೆಯಿಂದ ಬಳಲುತ್ತಿದ್ದಾರೆ ಎಂದು ತಿಳಿದು ಬಂದಿದೆ.
ವಿವಿಧ ವೃತ್ತಿ, ವಯಸ್ಸು ಮತ್ತು ಲಿಂಗಕ್ಕೆ ಸೇರಿದ ಜನರ ಮೇಲೆ ಸಮೀಕ್ಷೆಯನ್ನು ಮಾಡಲಾಗಿದೆ. ಕಾಶ್ಮೀರ ಕಣಿವೆಯಲ್ಲಿ ಹೆಚ್ಚಿನ ಸಂಖ್ಯೆಯ ಜನರು ಈ ಕೊರತೆಯಿಂದ ಬಳಲುತ್ತಿದ್ದಾರೆ. ಅದೃಷ್ಟವಶಾತ್, ಕಾಶ್ಮೀರದ ನಿವಾಸಿಗಳಲ್ಲಿ ಪ್ರಸ್ತುತ ವಿಟಮಿನ್ ಡಿ ಕೊರತೆ ಸಮಸ್ಯೆ ಸೌಮ್ಯದಿಂದ ಮಧ್ಯಮಕ್ಕೆ ಸೀಮಿತವಾಗಿದೆ.
ವಿಟಮಿನ್ ಡಿ ಕೊರತೆ, ಅದಕ್ಕೆ ಕಾರಣಗಳು ಮತ್ತು ಪರಿಹಾರಗಳ ಕುರಿತು ನಡೆಸಿದ ಸಂಶೋಧನೆಗೆ ಸಂಬಂಧಿಸಿದಂತೆ, ಈಟಿವಿ ಭಾರತದ ಹಿರಿಯ ವರದಿಗಾರ ಪರ್ವೇಜ್ ಉದ್ ದಿನ್ ಅವರು ಶ್ರೀನಗರದ ಸರ್ಕಾರಿ ವೈದ್ಯಕೀಯ ಕಾಲೇಜಿನ ಸರ್ಜರಿ ಪ್ರಾಧ್ಯಾಪಕ ಡಾ. ಇಕ್ಬಾಲ್ ಸಲೀಂ ಅವರೊಂದಿಗೆ ವಿಶೇಷ ಸಂದರ್ಶನ ನಡೆಸಿದ್ದಾರೆ.
ಇತ್ತೀಚಿನ ಸಮೀಕ್ಷೆಯು ಕಾಶ್ಮೀರದಲ್ಲಿ ವ್ಯಾಪಕವಾದ ವಿಟಮಿನ್ ಡಿ ಕೊರತೆ ಇದೆ ಎಂದು ಆಘಾತಕಾರಿ ಡೇಟಾ ನೀಡಿದೆ ಎಂದು ಡಾ. ಸಲೀಂ ಹೇಳಿದರು. ಸಾಮಾನ್ಯ ಜನರಲ್ಲಿ ಜಾಗೃತಿ ಮೂಡಿಸದಿದ್ದರೆ ಕಾಶ್ಮೀರದಲ್ಲಿ ದೊಡ್ಡ ಸಮಸ್ಯೆ ಎದುರಾಗಲಿದೆ. ಪ್ರಸ್ತುತ ಮಧ್ಯಮ ಮಟ್ಟದ ವಿಟಮಿನ್ ಡಿ ಕೊರತೆ ತೀವ್ರವಾಗಬಹುದು. ರೈತರಲ್ಲಿ ಕೇವಲ ಶೇ 58 ರಷ್ಟು ಕೊರತೆಯಿದೆ ಎಂದು ಸಂಶೋಧನೆಯು ಬಹಿರಂಗಪಡಿಸಿದೆ. ಇದು ಉದ್ಯೋಗಿಗಳಲ್ಲಿ ಶೇ 93ರಷ್ಟು ಮತ್ತು ಮನೆಯಲ್ಲೇ ಇರುವವರಲ್ಲಿ ಶೇ 93ರಷ್ಟು ಇದೆ ಎಂದು ಸಂಶೋಧನೆ ತಿಳಿಸಿದೆ.
ಕೊರತೆಗೆ ಕಾರಣ: ವಿಟಮಿನ್ ಡಿ ಕೊರತೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಡಾ. ಸಲೀಂ ಮಾತನಾಡಿ, ವಿಟಮಿನ್ ಡಿ ಪ್ರಮುಖ ಅಂಶವಾಗಿದೆ. ಇದರ ಕೊರತೆಯು ಅನೇಕ ರೋಗಗಳಿಗೆ ಕಾರಣವಾಗಬಹುದು. ಕಣಿವೆಯಲ್ಲಿ ಹೆಚ್ಚಿನ ಕೊರತೆಗೆ ಹಲವಾರು ಕಾರಣಗಳಿವೆ. ಮುಖ್ಯ ಕಾರಣವೆಂದರೇ, ಅಕ್ಟೋಬರ್ನಿಂದ ಮಾರ್ಚ್ವರೆಗೆ ಆಗಾಗ್ಗೆ ಮೋಡ ಕವಿದ ವಾತಾವರಣ, ಸೂರ್ಯನ ಬೆಳಕು ಕಡಿಮೆ ಇರುತ್ತದೆ. ನಂತರ ಪೌಷ್ಟಿಕ ಆಹಾರದ ಕೊರತೆ ಕಾರಣ ಎನ್ನಲಾಗ್ತಿದೆ.
ಪುರುಷರಿಗೆ ಹೋಲಿಸಿದರೆ ಮಹಿಳೆಯರಲ್ಲಿ ವಿಟಮಿನ್ ಡಿ ಕೊರತೆ ಹೆಚ್ಚಿದೆ. ಈ ಬಗ್ಗೆ ಮಾತನಾಡಿದ ಅವರು, ಮಹಿಳೆಯರು ತಮ್ಮ ಬಿಡುವಿಲ್ಲದ ವೇಳಾಪಟ್ಟಿಯಲ್ಲಿ ಅವರ ಆರೋಗ್ಯ ಮತ್ತು ಆಹಾರದ ಬಗ್ಗೆ ಗಮನಕೊಡುವುದಿಲ್ಲ. ವ್ಯಾಯಾಮದ ಕೊರತೆಯು ಮಹಿಳೆಯರಲ್ಲಿ ವಿಟಮಿನ್ ಡಿ ಕೊರತೆಗೆ ಒಳಗಾಗುವ ಇತರ ಕಾರಣಗಳಲ್ಲಿ ಒಂದಾಗಿದೆ ಎಂದಿದ್ದಾರೆ.