ಹೈದರಾಬಾದ್:ಸಮಾಜದ ಪ್ರತಿಯೊಂದು ಸಮುದಾಯಗಳಲ್ಲಿ ರೋಗಗಳು ಕಂಡು ಬರುವುದು ಸಾಮಾನ್ಯ. ಆದರೆ, ಆಯಾ ರೋಗಗಳಿಗೆ ಚಿಕಿತ್ಸೆ ಪಡೆಯಲು ಬಡತನದ ಕೆಳಗಿನ ಜನರಿಗೆ ಹಾಗೂ ಮಧ್ಯಮ ವರ್ಗದವರಿಗೆ ತೀವ್ರ ತೊಂದರೆಯಾಗುತ್ತಿರುವುದು ಆತಂಕಕಾರಿ ಸಂಗತಿ. ಚಿಕಿತ್ಸೆ ಪಡೆದ ನಂತರ, ಈ ಔಷಧಗಳಿಗೆ ಹೆಚ್ಚಿನ ವೆಚ್ಚದ ಭರಿಸಬೇಕಾದ ಕಾರಣದಿಂದಾಗಿ ಅನೇಕ ಜನರು ತಮ್ಮ ಔಷಧಗಳ ಕೋರ್ಸ್ನ್ನು ಪ್ರಾರಂಭಿಸಲು ಅಥವಾ ಮುಂದುವರಿಸಲು ಹಿಂದೇಟು ಹಾಕುತ್ತಾರೆ
ಜನರಿಕ್ ಔಷಧಗಳ ಬಗ್ಗೆ ಜಾಗೃತಿ: ಈ ರೀತಿಯ ಹೆಚ್ಚಿನ ವೆಚ್ಚದ ಔಷಧಗಳು ಅಡೆತಡೆಯಿಲ್ಲದೆ ಎಲ್ಲರಿಗೂ ಲಭ್ಯವಾಗಬೇಕು ಎಂಬ ಉದ್ದೇಶದಿಂದ ಭಾರತ ಸರ್ಕಾರವು ಹಲವಾರು ಪ್ರಯತ್ನಗಳನ್ನು ಮಾಡುತ್ತಿದೆ. ಅದರಲ್ಲಿ ಪ್ರಮುಖವಾಗಿ ಜನರಿಕ್ ಔಷಧಗಳು, ಜನಸಾಮಾನ್ಯರಿಗೆ ಲಭ್ಯವಾಗುವಂತೆ ಮಾಡಲು ವಿಶೇಷ ಕ್ರಮಗಳನ್ನು ವಹಿಸುತ್ತಿದೆ. ಈ ನಿಟ್ಟಿನಲ್ಲಿ ದೇಶದಾದ್ಯಂತ ಅನೇಕ 'ಜನ ಔಷಧ ಕೇಂದ್ರ'ಗಳು ಕಾರ್ಯನಿರ್ವಹಿಸುತ್ತಿವೆ. ಅಲ್ಲಿ ಬಡ ಮತ್ತು ಮಧ್ಯವರ್ಗದ ಜನರು ಜನರಿಕ್ ಔಷಧಗಳನ್ನು ಖರೀದಿಸಬಹುದು. ಆದರೆ, ಇಂದಿಗೂ, ಬಹುತೇಕ ಜನರು ಜನರಿಕ್ ಔಷಧಗಳ ಬಗ್ಗೆ ಅಥವಾ 'ಜನ ಔಷಧ ಕೇಂದ್ರ'ದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಹೊಂದಿರದೇ ಇರುವುದು ಕಳವಳಕಾರಿ ಸಂಗತಿ. ಈ ಔಷಧಗಳ ಗುಣಮಟ್ಟದ ಬಗ್ಗೆ ಜನರಲ್ಲಿ ಕೆಲವು ಸಂದೇಹವಿದೆ.
ಜನ ಔಷಧಿ ಸಪ್ತಾಹ: ಪ್ರತಿ ವರ್ಷ ಮಾರ್ಚ್ ತಿಂಗಳ ಮೊದಲ ವಾರದಲ್ಲಿ, 'ಜನ ಔಷಧ ಸಪ್ತಾಹ' ಅಥವಾ ಜನರಿಕ್ ಮೆಡಿಸಿನ್ ವೀಕ್ ಅನ್ನು ಆಚರಿಸಲಾಗುತ್ತದೆ. ಆದರೆ, ಮಾರ್ಚ್ 7ಕ್ಕೆ 'ಜನ ಔಷಧ ದಿವಸ್' ಅಥವಾ ಜನರಿಕ್ ಮೆಡಿಸಿನ್ ದಿನವನ್ನಾಗಿ ಆಚರಿಸಲಾಗುತ್ತದೆ. ಜನರಲ್ಲಿ ಜನರಿಕ್ ಔಷಧಗಳ ಬಗ್ಗೆ ಜಾಗೃತಿ ಮೂಡಿಸಲಲಾಗುತ್ತದೆ. ಈ ದಿನವನ್ನು ಪ್ರಧಾನಿ ನರೇಂದ್ರ ಮೋದಿಯವರು 'ಜನ್ ಔಷಧ ದಿವಸ್' ಎಂದು ಘೋಷಿಸಿದ ನಂತರ 2019ರ ಮಾರ್ಚ್ 7ರಂದು ಮೊದಲ ಬಾರಿಗೆ ಆಚರಿಸಲಾಯಿತು.
ಕಡಿಮೆ ಬೆಲೆಯಲ್ಲಿ ಉತ್ತಮ ಔಷಧಗಳು ಲಭ್ಯ: ಜನರಿಕ್ ಔಷಧಗಳು ಬ್ರಾಂಡ್ ಹೆಸರಿಲ್ಲದ ಔಷಧಗಳಾಗಿವೆ. ಈ ಔಷಧಗಳ ಬೆಲೆ ತೀರಾ ಕಡಿಮೆ ಇರುತ್ತದೆ. ಆದರೆ, ಜನಪ್ರಿಯ ಬ್ರಾಂಡ್‌ಗಳ ದುಬಾರಿ ಔಷಧಗಳಂತೆ ಅವು ಸುರಕ್ಷಿತ, ಪರಿಣಾಮಕಾರಿ ಮತ್ತು ಪ್ರಯೋಜನಕಾರಿ. ಪ್ರಧಾನ ಮಂತ್ರಿ ಭಾರತೀಯ ಜನೌಷಧ ಪರಿಯೋಜನಾ (ಪಿಎಂಬಿಜೆಪಿ) ಅನ್ನು ನವೆಂಬರ್ 2008ರಲ್ಲಿ ಭಾರತ ಸರ್ಕಾರದ ಫಾರ್ಮಾಸ್ಯುಟಿಕಲ್ಸ್ ಇಲಾಖೆ ಮತ್ತು ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಸಚಿವಾಲಯವು, ಅಗತ್ಯವಿರುವ ಜನರಿಗೆ ಗುಣಮಟ್ಟದ ಜನರಿಕ್ ಔಷಧಗಳನ್ನು ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗುವಂತೆ ಮಾಡಿವೆ. ಈ ಉಪಕ್ರಮದ ಅಡಿಯಲ್ಲಿ, ದೇಶದ ಹಲವು ಭಾಗಗಳಲ್ಲಿ 'ಜನ್ ಔಷಧ ಕೇಂದ್ರ'ಗಳನ್ನು ಸ್ಥಾಪಿಸಲಾಯಿತು.