ತರಕಾರಿಗಳ ಬೆಲೆ 100 ರೂ ದಾಟುತ್ತಿದ್ದಂತೆ ಗೃಹಿಣಿಯರ ಕಣ್ಣು ಕೆಂಪಾಗುತ್ತೆ. ನೈಸರ್ಗಿಕ ವಿಪತ್ತು, ಕೊರತೆ, ಪೂರೈಕೆ ಕಾರಣ ಕೆಲವೊಮ್ಮೆ ಸಾಮಾನ್ಯ ದಿನಬಳಕೆ ತರಕಾರಿ ಬೆಲೆ ದುಬಾರಿಯಾಗುತ್ತದೆ. ಆದರೆ, ಯುರೋಪ್ನ ತರಕಾರಿ ಮಾರುಕಟ್ಟೆ ಹಾಗಲ್ಲ. ಇಲ್ಲಿ ಸಾಮಾನ್ಯ ತರಕಾರಿಗಳ ಬೆಲೆ ನೂರುಗಳಲ್ಲಿ ಅಲ್ಲ, ಸಾವಿರದಲ್ಲಿ ಮಾರಾಟವಾಗುತ್ತವೆ ಎಂದರೆ ಅಚ್ಚರಿ ಮೂಡಿಸದೇ ಇರಲಾರದು.
ಯುರೋಪಿಯನ್ ದೇಶಗಳಲ್ಲಿ ಬೆಳೆಯುವ 'ಹೂಪ್ ಶೂಟ್' ತರಕಾರಿಗಳ ಬೆಲೆ ಸಾಮಾನ್ಯವಾಗಿ ಕೆಜಿಗೆ 80ರಿಂದ 85 ಸಾವಿರ ರೂಪಾಯಿ ಇದೆ. ಅಚ್ಚರಿ ಆದರೂ ಹೌದು. ಇದು ದುಬಾರಿ ಮಾತ್ರವಲ್ಲ, ಗಗನಮುಖಿ. ಇದಕ್ಕೆ ಇರುವ ಕಾರಣ ಎಂದರೆ ಈ ತರಕಾರಿಗಳನ್ನು ಬೆಳೆಯುವ ಮಾರ್ಗ ಹಾಗೂ ಇದರಲ್ಲಿನ ಔಷಧೀಯ ಗುಣ. ಇದೇ ಕಾರಣಕ್ಕೆ ಈ ತರಕಾರಿ ಪ್ರಪಂಚದಲ್ಲೇ ಅತ್ಯಂತ ದುಬಾರಿಯಾಗಿದೆ.
ಕೃಷಿ ಕೂಡ ಸವಾಲು..ಇಲ್ಲಿ 'ಹೂಪ್ ಶೂಟ್' ತರಕಾರಿಗಳ ಕೃಷಿ ಮಾಡುವುದು ಬಲು ಸವಾಲಿನ ಕೆಲಸವಾಗಿದೆ. ಈ ಬೆಳೆಯ ಮೇಲ್ಬಾಗದಲ್ಲಿ ಹೂವಿದ್ದು, ಇದನ್ನು ಎಚ್ಚರಿಕೆಯಿಂದ ಸಂಗ್ರಹಿಸಬೇಕಾಗುತ್ತದೆ. ಈ ಹೂಗಳನ್ನು 'ಹೂಪ್ ಕೊನ್ಸ್' ಎಂದು ಕರೆಯಲಾಗುವುದು. ಇದನ್ನು ಸಂಗ್ರಹಿಸಲು ಯಾವುದೇ ಯಂತ್ರವನ್ನು ಬಳಕೆ ಮಾಡದೇ, ವ್ಯಕ್ತಿಗಳೇ ಸೂಕ್ಷ್ಮವಾಗಿ ಈ ಹೂವು ಕೀಳುತ್ತಾರೆ. ಇದರ ಕೊಂಬೆಗಳನ್ನು ಸಲಾಡ್ ಮತ್ತು ಉಪ್ಪಿನ ಕಾಯಿಗೆ ಬಳಸಲಾಗುತ್ತದೆ. ಈ ಗಿಡಗಳು ಆರು ಇಂಚು ಉದ್ದ ಬೆಳೆಯುತ್ತದೆ. ಒಮ್ಮೆ ಈ ಕೃಷಿ ಮಾಡಿದರೆ 20 ವರ್ಷಗಳ ಕಾಲ ಇಳುವರಿ ಪಡೆಯಬಹುದು.