ಸಿಯೋಲ್ (ದಕ್ಷಿಣ ಕೋರಿಯಾ): ತಮ್ಮ ದಿನನಿತ್ಯದ ಕೆಲಸಗಳ ಮಧ್ಯೆ ಕಿರಿಕಿರಿ ಮಾಡುವ ಚಿಕ್ಕ ಮಕ್ಕಳನ್ನು ಸುಮ್ಮನಾಗಿಸಲು ಅವರ ಕೈಗೆ ಮೊಬೈಲ್ ಫೋನ್ ಅಥವಾ ಟ್ಯಾಬ್ಲೆಟ್ ಕಂಪ್ಯೂಟರ್ ನೀಡುವುದು ಪೋಷಕರ ಅತಿ ಮೆಚ್ಚಿನ ಅಭ್ಯಾಸಕ್ರಮವಾಗಿದೆ ಎಂದು ಅಧ್ಯಯನವೊಂದರಲ್ಲಿ ತಿಳಿದು ಬಂದಿದೆ. ಚಿಕ್ಕ ಮಕ್ಕಳಲ್ಲಿ ಮೊಬೈಲ್ ಫೋನ್ ಗೀಳು ಹೆಚ್ಚಾಗಲು ಇದು ಕಾರಣವಾಗುತ್ತಿದೆ.
ಕೋರಿಯಾ ಇನ್ಸ್ಟಿಟ್ಯೂಟ್ ಆಫ್ ಚೈಲ್ಡ್ ಕೇರ್ ಆ್ಯಂಡ್ ಎಜ್ಯುಕೇಶನ್ ಸಂಸ್ಥೆಯು ನಡೆಸಿದ ಈ ಸಮೀಕ್ಷೆಯಲ್ಲಿ 1 ರಿಂದ 7 ವರ್ಷ ವಯೋಮಾನದ ಮಕ್ಕಳನ್ನು ಹೊಂದಿರುವ 1500 ಪೋಷಕರು ಪಾಲ್ಗೊಂಡಿದ್ದರು. ಮಕ್ಕಳು ಕಿರಿಕಿರಿ ಮಾಡದಂತೆ ದಿನನಿತ್ಯದ ಮನೆಕೆಲಸಗಳನ್ನು ಸರಾಗವಾಗಿ ನಿಭಾಯಿಸುವಂತಾಗಲು ಮಕ್ಕಳ ಕೈಗೆ ನಾವು ಮೊಬೈಲ್ ನೀಡುತ್ತೇವೆ ಎಂದು ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ 70 ರಷ್ಟು ಪಾಲಕರು ಹೇಳಿದ್ದಾರೆ.
ಕಳೆದ ಆಗಸ್ಟ್ನಲ್ಲಿ ನಡೆಸಲಾದ ಈ ಸಮೀಕ್ಷೆಯ ವರದಿ ಈಗ ಕೋರಿಯಾದ ಸುದ್ದಿ ಮಾಧ್ಯಮವೊಂದರಲ್ಲಿ ಪ್ರಕಟವಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ತಮ್ಮ ಮಕ್ಕಳನ್ನು ಸುಮ್ಮನಾಗಿರಿಸಲು ಅವರಿಗೆ ಮೊಬೈಲ್ ಫೋನ್ ತೋರಿಸುತ್ತೇವೆ ಎಂದು ಶೇ 74.3 ರಷ್ಟು ಜನ ಹೇಳಿದರೆ, ಶೈಕ್ಷಣಿಕ ಉದ್ದೇಶಕ್ಕಾಗಿ ಅವರಿಗೆ ಮೊಬೈಲ್ ನೀಡುತ್ತೇವೆಂದು ಶೇ 52 ರಷ್ಟು ಜನ ಹೇಳಿದ್ದಾರೆ. ಶೇ 20.5 ರಷ್ಟು ಶಿಶುಗಳು 12 ರಿಂದ 18 ತಿಂಗಳಾಗಿರುವಾಗಲೇ ಮೊಬೈಲ್ ಫೋನ್ ಕೈಯಲ್ಲಿ ಹಿಡಿಯುತ್ತವೆಯಂತೆ. ಇನ್ನು, 18 ರಿಂದ 24 ತಿಂಗಳೊಳಗಿನ ಶೇ 13.4 ರಷ್ಟು ಶಿಶುಗಳು ಮೊಬೈಲ್ ಫೋನ್ ಸಂಪರ್ಕಕ್ಕೆ ಬರುತ್ತವೆ ಎಂದು ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.