ದೇಶದಲ್ಲಿ ತುಪ್ಪಕ್ಕೆ ಇನ್ನಿಲ್ಲದ ಮಹತ್ವ. ಆರೋಗ್ಯ ಹಾಗೂ ಬುದ್ದಿ ಶಕ್ತಿ ಹೆಚ್ಚಳಕ್ಕೆ ತುಪ್ಪ ಇರಲೇಬೇಕು. ಹಾಗಾಗಿ ತುಪ್ಪ ಆಹಾರದ ಅವಿಭಾಜ್ಯ ಅಂಗವೂ ಹೌದು. ಶುದ್ಧ ದೇಸಿ ತುಪ್ಪವು ಸ್ಮರಣಶಕ್ತಿ ಮತ್ತು ಶಕ್ತಿಯನ್ನು ಹೆಚ್ಚಿಸುತ್ತದೆ. ದೇಹದಲ್ಲಿನ ವಾತ ಮತ್ತು ಪಿತ್ತ ದೋಷಗಳು ಮತ್ತು ಇತರ ವಿಷಕಾರಿ ಪದಾರ್ಥಗಳ ಪರಿಣಾಮವನ್ನು ಪರಿಶುದ್ಧ ತುಪ್ಪ ಕಡಿಮೆ ಮಾಡುತ್ತದೆ ಎಂದು ಚರಕ ಸಂಹಿತಾ ಉಲ್ಲೇಖಿಸುತ್ತದೆ. ಆದ್ದರಿಂದ, ಆಯುರ್ವೇದದಲ್ಲಿ ಶುದ್ಧ ತುಪ್ಪವನ್ನು ಔಷಧವೆಂದು ಪರಿಗಣಿಸಲಾಗುತ್ತದೆ. ಅಷ್ಟೇ ಏಕೆ ಅನೇಕ ರೀತಿಯ ಚಿಕಿತ್ಸೆಗಳಲ್ಲಿ ತುಪ್ಪವನ್ನು ಬಳಕೆ ಮಾಡಲಾಗುತ್ತದೆ.
ಆಯುರ್ವೇದ ವೈದ್ಯರು ಹೇಳೋದೇನು?:ತುಪ್ಪವನ್ನು ಕೇವಲ ಖಾದ್ಯ ಔಷಧವಾಗಿ ಬಳಸಲಾಗುವುದಿಲ್ಲ. ಆದರೆ, ಅದರ ಬಾಹ್ಯ ಬಳಕೆಯನ್ನು ಪಂಚಕರ್ಮ ಸೇರಿದಂತೆ ವಿವಿಧ ಚಿಕಿತ್ಸೆಗಳಿಗೆ ಆಯುರ್ವೇದದಲ್ಲಿ ಉಲ್ಲೇಖಿಸಲಾಗಿದೆ ಎಂದು ಮುಂಬೈ ಮೂಲದ ಆಯುರ್ವೇದ ವೈದ್ಯ ಡಾ.ಮನೀಷ್ ಕಾಳೆ ಹೇಳಿದ್ದಾರೆ.
ಆಯುರ್ವೇದದಲ್ಲಿ ಹೇಳುವ ಪ್ರಕಾರ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಶುದ್ಧ ಹಸುವಿನ ತುಪ್ಪವನ್ನು ಸೇವಿಸಿದರೇ ಭಾರಿ ಪ್ರಯೋಜನವುಂಟು ಅಂತಾರಾ ಕಾಳೆ. ಏಕೆಂದರೆ ಇದು ಅನೇಕ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಜೀರ್ಣಕಾರಿ ಮತ್ತು ಮೂಳೆಗಳ ಆರೋಗ್ಯವನ್ನು ಕಾಪಾಡುತ್ತದೆ. ನರಮಂಡಲವನ್ನು ಆರೋಗ್ಯವಾಗಿಡುತ್ತದೆ ಮತ್ತು ಕೂದಲು ಮತ್ತು ಚರ್ಮಕ್ಕೂ ತುಪ್ಪ ಸೇವನೆಯಿಂದ ಒಳ್ಳೆಯದಾಗುತ್ತದೆ.
ಮೆದುಳಿನ ಟಾನಿಕ್ ಈ ತುಪ್ಪ:ತುಪ್ಪವನ್ನು ಮೆದುಳಿನ ಟಾನಿಕ್ ಎಂದೂ ಕರೆಯುತ್ತಾರೆ. ಏಕೆಂದರೆ ಅದರ ನಿಯಮಿತ ಸೇವನೆಯಿಂದ ಸ್ಮರಣ ಶಕ್ತಿ ಸುಧಾರಿಸುತ್ತದೆ. ನರಮಂಡಲ ಸಂಬಂಧಿತ ಸಮಸ್ಯೆಗಳಿಗೆ ಸಹಾಯ ಮಾಡುತ್ತದೆ ಎನ್ನುತ್ತಾರೆ ತಜ್ಞ ವೈದ್ಯ ಕಾಳೆ ಅವರು. ತುಪ್ಪ ತಲೆಯ ಮಸಾಜ್ಗೆ ಸಹಕರಿಸುತ್ತದೆ. ಮಾನಸಿಕ ಆರೋಗ್ಯ ಸಮಸ್ಯೆಗಳಾದ ಆತಂಕ, ಉದ್ವೇಗ, ಕೋಪ ಮತ್ತು ಚಡಪಡಿಕೆಯಿಂದ ಪರಿಹಾರ ನೀಡುತ್ತದೆ. ಗಾಯಗಳು ಮತ್ತು ಪೈಲ್ಸ್ ಸಮಸ್ಯೆ ಪರಿಹರಿಸಲು ಹಾಗೂ ಚಿಕಿತ್ಸೆಗೆ ತುಪ್ಪವನ್ನ ಬಳಕೆ ಮಾಡಲಾಗುತ್ತದೆ.
ಪೌಷ್ಟಿಕತಜ್ಞರು ಏನು ಹೇಳುತ್ತಾರೆ?:ಇಂದೋರ್ ಮೂಲದ ಡಯೆಟಿಷಿಯನ್ ಮತ್ತು ಪೌಷ್ಟಿಕತಜ್ಞ ಡಾ. ಸಂಗೀತಾ ಮಾಲು ಅವರು ಶುದ್ಧ ದೇಸಿ ತುಪ್ಪವನ್ನು ಮಿತವಾಗಿ ನಿಯಮಿತವಾಗಿ ಸೇವಿಸುವುದು ನಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಹೇಳಿದ್ದಾರೆ. ಆಹಾರದಲ್ಲಿ ನಿತ್ಯ 2-3 ಚಮಚ ತುಪ್ಪ ಬಳಕೆ ಮಾಡುವುದು ಸೂಕ್ತ. ಆದರೆ, ಅಧಿಕವಾಗಿ ತುಪ್ಪ ಸೇವನೆ ಮಾಡುವುದು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಮೊದಲೇ ಅಸ್ತಿತ್ವದಲ್ಲಿರುವ ರೋಗಗಳಿರುವ ಜನರಿಗೆ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಲೂಬಹುದು.
ದೇಸಿ ತುಪ್ಪದಲ್ಲಿ ಕ್ಯಾಲ್ಸಿಯಂ, ರಂಜಕ, ಖನಿಜಗಳು, ಪೊಟ್ಯಾಸಿಯಮ್, ಹಾಲಿನ ಪ್ರೋಟೀನ್, ವಿಟಮಿನ್ ಎ, ಕೆ, ಇ, ಡಿ, ಒಮೆಗಾ 3 ಮತ್ತು ಒಮೆಗಾ 9 ಕೊಬ್ಬಿನಾಮ್ಲಗಳಂತಹ ಪೋಷಕಾಂಶಗಳಿವೆ. ಪೌಷ್ಟಿಕಾಂಶವನ್ನು ಒದಗಿಸುವುದರ ಜೊತೆಗೆ, ದೇಹವು ಹಲವಾರು ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.