ನ್ಯೂಯಾರ್ಕ್ ನಗರದ ಕೊಲಂಬಿಯಾ ವಿಶ್ವವಿದ್ಯಾಲಯದ ಜೊತೆಗೆ ನ್ಯೂಯಾರ್ಕ್-ಪ್ರೆಸ್ಬಿಟೇರಿಯನ್ ಮೋರ್ಗಾನ್ ಸ್ಟಾನ್ಲಿ ಮಕ್ಕಳ ಆಸ್ಪತ್ರೆಯ ಸಂಶೋಧಕರ ತಂಡವು ಸಾಂಕ್ರಾಮಿಕ ರೋಗ ಬರುವ ಮೊದಲು ಮತ್ತು ರೋಗದ ಸಮಯದಲ್ಲಿ ಜನಿಸಿದ ಮಕ್ಕಳ ನಡುವಿನ ಮೆದುಳಿನಲ್ಲಿ ಯಾವ ರೀತಿ ವ್ಯತ್ಯಾಸಗಳಾಗಿವೆ ಎಂಬುದರ ಬಗ್ಗೆ ವಿಶ್ಲೇಷಿಸಿದ್ದಾರೆ.
ಕೋವಿಡ್-19 ಸಮಯದಲ್ಲಿ ಆಸ್ಪತ್ರೆಯಲ್ಲಿ ಜನಿಸಿರುವ ಹೆಚ್ಚಿನ ನವಜಾತ ಶಿಶುಗಳ ಮೆದುಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಕಂಡುಬಂದರೂ, ಸಾಂಕ್ರಾಮಿಕಕ್ಕೂ ಮೊದಲು ಜನಿಸಿದ ಮಕ್ಕಳಿಗೆ ಹೋಲಿಸಿದರೆ ಕಡಿಮೆ ಅಂಕಗಳನ್ನು ಗಳಿಸಿದ್ದಾರೆ ಎಂದು ಅಧ್ಯಯನ ವರದಿ ತೋರಿಸಿದೆ.
ಮುಖ್ಯವಾಗಿ, ಮಕ್ಕಳ ಪೋಷಕರು ಸೋಂಕಿಗೆ ತುತ್ತಾಗಿದ್ದಾರೆಯೇ ಅಥವಾ ಇಲ್ಲವೇ ಎಂಬುದು ಮುಖ್ಯವಲ್ಲ. ಸಾಂಕ್ರಾಮಿಕದ ಕಾರಣದಿಂದ ಪರಿಸರದಲ್ಲಿ ಉಂಟಾಗಿರುವ ಬದಲಾವಣೆಯೇ ಇದಕ್ಕೆ ಕಾರಣ ಎಂದು ವರದಿ ಹೇಳಿದೆ. ಕೊರೊನಾ ಲಾಕ್ಡೌನ್ನಿಂದಾಗಿ ಮಕ್ಕಳು ಮನೆಯಲ್ಲಿಯೇ ಅಥವಾ ರೂಮಿನೊಳಗೆ ಪ್ರತ್ಯೇಕವಾಗಿ ಇರುವಂತೆ ಆಗಿದೆ. ಮಕ್ಕಳು ಆಟವಾಡುವ ಸಮಯ ಮತ್ತು ಅವರು ಬೇರೆಯವರ ಜೊತೆ ಮಾತನಾಡುವುದನ್ನು ಈ ಕೊರೊನಾ ಕಸಿದುಕೊಂಡಿದೆ. ಇದು ಮಕ್ಕಳ ಮೆದುಳಿನ ಬೆಳವಣಿಗೆ ಮೇಲೆ ಪರಿಣಾಮ ಬೀರಲಿದೆ ಎಂದು ಸಂಶೋಧನೆ ಹೇಳುತ್ತಿದೆ.
ಬ್ರೌನ್ ವಿಶ್ವವಿದ್ಯಾನಿಲಯದ ಅಡ್ವಾನ್ಸ್ಡ್ ಬೇಬಿ ಇಮೇಜಿಂಗ್ ಲ್ಯಾಬ್ನ ಸಂಶೋಧಕರ ನೇತೃತ್ವದಲ್ಲಿ ನಡೆದ ಮತ್ತೊಂದು ಅಧ್ಯಯನದಲ್ಲಿ ಸಾಂಕ್ರಾಮಿಕದ ಸಮಯದಲ್ಲಿ ಶಿಶುಗಳ ದೃಶ್ಯ ಮತ್ತು ಭಾಷಾ ಕೌಶಲ್ಯಗಳು ಕುಸಿದಿವೆ ಎಂದು ಕಂಡುಹಿಡಿದಿದೆ. ಕಡಿಮೆ-ಆದಾಯ ಹೊಂದಿರುವ ಕುಟುಂಬಗಳ ಶಿಶುಗಳು ದೊಡ್ಡ ಹಾನಿ ಅನುಭವಿಸುತ್ತಿದ್ದಾರೆ ಎಂಬುದನ್ನು ಈ ತಂಡವು ಕಂಡುಹಿಡಿದಿದೆ. ಹುಡುಗಿಯರಿಗಿಂತ ಹುಡುಗರ ಮೇಲೆ ಹೆಚ್ಚು ಪರಿಣಾಮ ಬೀರಿದೆ. ಸಾಂಕ್ರಾಮಿಕ ರೋಗವು ಇನ್ನೂ ದೀರ್ಘಕಾಲದವರೆಗೆ ಮುಂದುವರೆದರೆ ಮಕ್ಕಳು ಇನ್ನೂ ಹೆಚ್ಚು ತೊಂದರೆಗಳನ್ನು ಅನುಭವಿಸುತ್ತಾರೆ.