ಕರ್ನಾಟಕ

karnataka

ETV Bharat / sukhibhava

International Yoga Day: ಮಾನಸಿಕ ಒತ್ತಡ ನಿರ್ವಹಣೆ, ದೈಹಿಕ ಸೌಂದರ್ಯಕ್ಕೆ ಯೋಗ.. 'ಮಾನವೀಯತೆ' ಥೀಮ್​ನೊಂದಿಗೆ ಈ ವರ್ಷದ ಯೋಗ ದಿನಾಚರಣೆ - ಮಾನಸಿಕ ಒತ್ತಡ ಮತ್ತು ದೈಹಿಕ ಸೌಂದರ್ಯ

ಇತ್ತೀಚೆಗೆ ಮಾನಸಿಕ ಒತ್ತಡ ಮತ್ತು ದೈಹಿಕ ಸೌಂದರ್ಯಕ್ಕಾಗಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಪದ್ಧತಿಗೆ ಜನರು ಮೊರೆ ಹೋಗುತ್ತಿದ್ದಾರೆ.

International Yoga Day
ಅಂತಾರಾಷ್ಟ್ರೀಯ ಯೋಗ ದಿನಾಚರಣೆ

By

Published : Jun 20, 2023, 7:40 PM IST

ಬೆಂಗಳೂರು: ವಿಶ್ವದಾದ್ಯಂತ ಪ್ರತಿ ವರ್ಷ ಜೂನ್ 21 ರಂದು ವಿಶ್ವ ಯೋಗ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ಕೆಲ ವರ್ಷಗಳಿಂದ ಹೆಚ್ಚಿನ ಜನರು ತಮ್ಮ ಮಾನಸಿಕ ಒತ್ತಡ ಮತ್ತು ದೈಹಿಕ ಸೌಂದರ್ಯಕ್ಕಾಗಿ ಯೋಗದ ಮೊರೆ ಹೋಗುತ್ತಿದ್ದಾರೆ. ಯೋಗವು ಮನಸ್ಸು ಮತ್ತು ದೇಹವನ್ನು ಸಂಪರ್ಕಿಸುವ ಪ್ರಾಚೀನ ಕಲೆ. ಭಾರತವು ಜಗತ್ತಿಗೆ ನೀಡಿದ ಒಂದು ದೊಡ್ಡ ಕೊಡುಗೆ ಎಂದರೆ ಅದು ಯೋಗ.

ಪ್ರತಿವರ್ಷ ಯೊಗ ದಿನವನ್ನು ಯೋಗ, ಧ್ಯಾನ, ಸಭೆಗಳು, ಚರ್ಚೆಗಳು, ಸಾಂಸ್ಕೃತಿಕ ಪ್ರದರ್ಶನ ನೀಡುವ ಮೂಲಕ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಆಚರಿಸಲಾಗುತ್ತದೆ. 2015 ಜೂನ್ 21ರಂದು ಚೊಚ್ಚಲ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಆಯುಷ್ ಸಚಿವಾಲಯದ ನೇತೃತ್ವದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ರಾಜಪಥದಲ್ಲಿ ಆಚರಿಸಲಾಯಿತು. ಅಂತಾರಾಷ್ಟ್ರೀಯ ಯೋಗ ದಿನದ ಆಚರಣೆಗಳು ಯೋಗದ ಸಮಗ್ರ ಸ್ವರೂಪದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಉತ್ತಮ ಆರೋಗ್ಯಕ್ಕಾಗಿ ದೇಶಾದ್ಯಂತ ನಿಯಮಿತ ಆಡಳಿತವಾಗಿ ಪ್ರಚಾರ ಮಾಡುವ ಗುರಿಯನ್ನು ಹೊಂದಿದೆ.

ಯೋಗದ ಗುರಿಯು ಕೇವಲ ದೇಹವನ್ನು ಸರಿಪಡಿಸುವುದು ಮಾತ್ರವಲ್ಲ. ಮನಸ್ಸು, ದೇಹ ಮತ್ತು ಆತ್ಮ ಸೇರಿದ ಎಲ್ಲ ಮೂರು ಅಂಶಗಳನ್ನು ಶುದ್ಧೀಕರಿಸಲು ನೆರವಾಗುತ್ತದೆ. ಇದು ನಾವು ಮತ್ತು ಪ್ರಕೃತಿ ಮಾತೆಯ ಜೊತೆ ಸಂರ್ಪಕವನ್ನು ಕಲ್ಪಿಸುತ್ತದೆ. ಇದು ನಮ್ಮನ್ನು ನಮ್ಮ ನೈಜತೆಯ ಹತ್ತಿರಕ್ಕೆ ಕೊಂಡೊಯ್ಯುತ್ತದೆ. ಯೋಗವು ವ್ಯಾಯಾಮ ಮಾತ್ರವಲ್ಲದೇ ನಿಮ್ಮೊಂದಿಗೆ, ವಿಶ್ವ ಹಾಗೂ ಪ್ರಕೃತಿಯ ಜೊತೆಗೆ ಏಕತೆಯ ಅರ್ಥವನ್ನು ಕಂಡುಹಿಡಿಯಲು ನೆರವಾಗುತ್ತದೆ. ನಮ್ಮ ಜೀವನಶೈಲಿ ಹಾಗೂ ಪ್ರಜ್ಞೆ ರಚಿಸುವ ಮೂಲಕ ಹವಾಮಾನ ಬದಲಾವಣೆ ನಿಭಾಯಿಸಲು ಮತ್ತು ಯೋಗಕ್ಷೇಮವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಯೋಗವು ಮನಸ್ಸು ಮತ್ತು ದೇಹ, ಚಿಂತನೆ ಮತ್ತು ಕ್ರಿಯೆ, ಸಂಯಮ ಮತ್ತು ಸಾರ್ಥಕತೆಯನ್ನು ಒಗ್ಗೂಡಿಸುತ್ತದೆ.

ಹಾಗೆಯೇ ಪ್ರಕೃತಿ ಮತ್ತು ಮನುಷ್ಯನ ನಡುವೆ ಸಾಮರಸ್ಯವನ್ನು ಉಂಟು ಮಾಡುತ್ತದೆ. ಯೋಗವು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಉತ್ತಮವಾಗಿರಿಸಲು ಸಹಾಯ ಮಾಡುತ್ತದೆ. ಯೋಗ ನಮ್ಮ ಜೀವನಶೈಲಿಯ ಪ್ರಮುಖ ಭಾಗವಾಗಿದೆ. ಇದು ಇಂದು ನಿನ್ನೆಯದಲ್ಲ. ಹಲವು ವರ್ಷಗಳಿಂದ ಭಾರತೀಯ ಸಂಸ್ಕೃತಿಯ ಪ್ರಮುಖ ಭಾಗವಾಗಿ ಉಳಿದಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಯೋಗದ ಬಗ್ಗೆ ಹೆಚ್ಚು ಹೆಚ್ಚು ಜನರಲ್ಲಿ ಜಾಗೃತಿ ಮೂಡಿಸಲು ಪ್ರತಿ ವರ್ಷ ಜೂನ್ 21 ಅನ್ನು 'ಅಂತಾರಾಷ್ಟ್ರೀಯ ಯೋಗ ದಿನ' ಎಂದು ಆಚರಿಸಲಾಗುತ್ತದೆ. ಯೋಗ ದೇಹಕ್ಕೆ ಮತ್ತು ಮೆದುಳಿಗೆ ಪ್ರಯೋಜನಕಾರಿಯಾಗಿದೆ. ಇದು ಸ್ನಾಯುವಿನ ಶಕ್ತಿ ಮತ್ತು ದೇಹದ ಟೋನ್​ಗೆ ಸಹ ಪ್ರಯೋಜನಕಾರಿಯಾಗಿದೆ. ಯೋಗವು ಜೀವನದಲ್ಲಿ ಹೊಸ ಶಕ್ತಿಯನ್ನು ತುಂಬುತ್ತದೆ.

ಪ್ರತಿ ವರ್ಷ 'ಅಂತಾರಾಷ್ಟ್ರೀಯ ಯೋಗ ದಿನಾಚರಣೆ' ದಿನದಂದು ಎಲ್ಲರೂ ಒಂದೆಡೆ ಸೇರಿ ಯೋಗ ಮಾಡುತ್ತಾರೆ. ಯೋಗ ಮಾಡುವುದು ಹೊಸ ವಿಷಯವಲ್ಲ. ಆದರೆ ಇದು ಸಾವಿರಾರು ವರ್ಷಗಳ ಹಿಂದೆ ಭಾರತದಲ್ಲಿ ಹುಟ್ಟಿಕೊಂಡಿದೆ. ಅಷ್ಟೇ ಅಲ್ಲ, ಋಗ್ವೇದದಂತಹ ಪೌರಾಣಿಕ ಪುಸ್ತಕಗಳಲ್ಲೂ ಇದರ ಉಲ್ಲೇಖವಿದೆ. ಪ್ರತಿ ವರ್ಷ ಈ ಕಾರ್ಯಕ್ರಮಕ್ಕೆ ವಿಭಿನ್ನ ಥೀಮ್ ಇರುತ್ತದೆ. 'ಅಂತಾರಾಷ್ಟ್ರೀಯ ಯೋಗ ದಿನ 2023' ಥೀಮ್ 'ಮಾನವೀಯತೆ' ಎಂದಾಗಿದೆ. ಈ ಹಿಂದಿನ ವರ್ಷಗಳಲ್ಲಿ 'ಹೃದಯಕ್ಕಾಗಿ ಯೋಗ', 'ಶಾಂತಿಗಾಗಿ ಯೋಗ', ಮನೆಯಲ್ಲಿ ಯೋಗ ಮತ್ತು ಕುಟುಂಬದೊಂದಿಗೆ ಯೋಗ ಎಂಬ ಥೀಮ್​ಗಳನ್ನು ಇಡಲಾಗಿತ್ತು. ಅಂತಾರಾಷ್ಟ್ರೀಯ ಯೋಗ ದಿನದ 2023 ರ ಥೀಮ್ 'ಮಾನವೀಯತೆ'. ನಾಳೆ 9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಗುತ್ತಿದೆ. 8ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಸಾಂಸ್ಕೃತಿಕ ನಗರಿ ಮೈಸೂರಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಆಚರಿಸಲಾಗಿತ್ತು.

ಯೋಗ ದಿನ ಜೂನ್‌ 21ರಂದೇ ಮಾಡುವುದೇಕೆ?: ಇಡೀ ವರ್ಷದಲ್ಲಿ ಜೂನ್‌ 21 ರಂದು ಭೂಮಿಯ ಉತ್ತರ ಭಾಗದಲ್ಲಿ ಅಧಿಕ ದಿನ ಇರುತ್ತದೆ. ಅಂದರೆ ಅಂದು ಉತ್ತರ ಭಾಗದಲ್ಲಿ ಹಗಲು ದೀರ್ಘಾವಧಿಯಾಗಿರುತ್ತದೆ. ದಕ್ಷಿಣದಲ್ಲಿ ಹಗಲಿನ ಅವಧಿ ಕಡಿಮೆ ಇರುತ್ತದೆ. ಈ ದಿನ ಸೂರ್ಯ ತನ್ನ ಪಥವನ್ನು ದಕ್ಷಿಣದತ್ತ ಬದಲಿಸುತ್ತಾನೆ. ಸಾಮಾನ್ಯವಾಗಿ ಹುಣ್ಣಿಮೆಯಾಗಿದ್ದು, ಗುರುಪೂರ್ಣಿಮ ದಿನವಾಗಿರುತ್ತದೆ. ಇದು ಯೋಗ ಮಾಡಲು ಅಥವಾ ಆರಂಭಿಸಲು ಸೂಕ್ತ ದಿನವಾಗಿದೆ. ಹೀಗೆಂದು ಮೋದಿ ತಮ್ಮ ಭಾಷಣದಲ್ಲಿ ಹೇಳಿದ್ದರು. ಅದನ್ನೂ ವಿಶ್ವಸಂಸ್ಥೆ ಮಾನ್ಯ ಮಾಡಿದೆ.

ಆಯುಷ್ ಚಿಕಿತ್ಸಾಲಯಗಳಲ್ಲೂ ಯೋಗದ ಚಿಕಿತ್ಸೆ: ಯೋಗ ಮತ್ತು ಪ್ರಕೃತಿ ವೈದ್ಯ ಪದ್ಧತಿಯಲ್ಲಿ ಯೋಗ, ಪ್ರಾಣಯಾಮ, ಹಾಗೂ ಮಣ್ಣಿನ ಚಿಕಿತ್ಸೆ, ಜಲ ಚಿಕಿತ್ಸೆ ಇತ್ಯಾದಿ ವಿಶಿಷ್ಠ ವಿಧಾನಗಳ ಮೂಲಕ ಅನೇಕ ರೋಗಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಹೋಮಿಯೋಪತಿ ಚಿಕಿತ್ಸಾ ವಿಧಾನದ ಮೂಲಕ ವಿವಿಧ ವ್ಯಾಧಿಗಳಿಗೆ ವಿಶೇಷವಾಗಿ ಚರ್ಮರೋಗಗಳು, ಅಸ್ತಮಾ, ಬಂಜೆತನ, ಥೈರಾಯ್ಡ್ ಸಮಸ್ಯೆಗಳಿಗೆ ಪರಿಣಾಮಕಾರಿ ಚಿಕಿತ್ಸೆ ನೀಡಲಾಗುತ್ತದೆ. ಹಾಗಾಗಿ, ಇತ್ತೀಚಿನ ದಿನಗಳಲ್ಲಿ ಜನರು ಯೋಗ ಮತ್ತು ಪ್ರಕೃತಿ ಚಿಕಿತ್ಸೆಗೆ ಹೆಚ್ಚು ಒಲವು ತೋರುತ್ತಿದ್ದಾರೆ.
ರಾಜ್ಯದಲ್ಲಿ ಒಟ್ಟು 155 ಆಸ್ಪತ್ರೆ ಹಾಗೂ 662 ಆಯುಷ್ ಚಿಕಿತ್ಸಾಲಯಗಳು ಕಾರ್ಯ ನಿರ್ವಹಿಸುತ್ತಿದ್ದು, ನಗರ ಮತ್ತು ಗ್ರಾಮೀಣ ಪ್ರದೇಶದ ಸಾರ್ವಜನಿಕರಿಗೆ ಆಯುಷ್ ಪದ್ಧತಿಗಳ ಮೂಲಕ ಉಚಿತ ಚಿಕಿತ್ಸೆ ಒದಗಿಸುತ್ತಿವೆ.

ಆಯ್ದ ಕೆಲವು ಆಸ್ಪತ್ರೆಗಳಲ್ಲಿ ವಿಶೇಷವಾಗಿ ದೀರ್ಘಕಾಲೀನ ಕಾಯಿಲೆಗಳಾದ ಸಂಧಿ, ಸ್ನಾಯು, ಮಾಂಸಖಂಡ, ಪ್ಯಾರಾಲಿಸಿಸ್ (ಲಕ್ವ), ಅರ್ಧ ತಲೆನೋವು (ಮೈಗ್ರೇನ್), ನರರೋಗ ಸಂಬಂಧಿತ ಕಾಯಿಲೆಗಳಲ್ಲಿ ಹಾಗೂ ಆರೋಗ್ಯ ಉತ್ತಮಗೊಳಿಸುವಲ್ಲಿ ಪರಿಣಾಮಕಾರಿ 'ಪಂಚಕರ್ಮ' ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಯುಷ್ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಆರೋಗ್ಯವೆಂದರೆ ಕೇವಲ ರೋಗರಹಿತವಾಗಿರದೆ ದೈಹಿಕ, ಮಾನಸಿಕ, ಆಧ್ಯಾತ್ಮಿಕ, ಸಾಮಾಜಿಕ ಮತ್ತು ಭಾವನಾತ್ಮಕವಾಗಿ ಸಮತೋಲನದಲ್ಲಿರುವುದು. ಈ ರೀತಿಯ ಆರೋಗ್ಯ ಕಾಪಾಡಿಕೊಳ್ಳುವುದರಲ್ಲಿ ಪ್ರಕೃತಿ ಚಿಕಿತ್ಸೆ – ಯೋಗದ ಪಾತ್ರ ಮಹತ್ವದ್ದು. ಪ್ರಕೃತಿ ಚಿಕಿತ್ಸೆಯು ಒಂದು ವೈಜ್ಞಾನಿಕ ಚಿಕಿತ್ಸಾ ಪದ್ಧತಿಯಾಗಿದ್ದು, ಇದು ಕೇವಲ ರೋಗವನ್ನು ಮಾತ್ರ ದೂರ ಮಾಡುವುದಲ್ಲದೆ, ಮನುಷ್ಯನ ಜೀವನ ಶೈಲಿಯನ್ನು ಸರಿ ಮಾಡಿ, ದೇಹದ ರೋಗ ನಿರೋಧಕ ಶಕ್ತಿ, ಚೈತನ್ಯ ಶಕ್ತಿಯನ್ನು ಹೆಚ್ಚಿಸುತ್ತದೆ. ಮತ್ತು ದೇಹದ ವಿಸರ್ಜನಾಂಗಗಳನ್ನು ಉತ್ತೇಜನಗೊಳಿಸಿ ದೇಹದ ಕಲ್ಮಶಗಳನ್ನು ಹೊರ ಹಾಕಿ ಮಾನವನ ಆರೋಗ್ಯವನ್ನು ನೈಸರ್ಗಿಕವಾಗಿ ವೃದ್ಧಿಗೊಳಿಸುತ್ತದೆ ಎನ್ನುತ್ತಾರೆ ವೈದ್ಯರು.

ಇದನ್ನೂ ಓದಿ:International Yoga Day 2023: ನಿಮ್ಮನ್ನು ಆರೋಗ್ಯವಾಗಿ, ಫಿಟ್​ ಆಗಿಡಲು ಸಹಾಯ ಮಾಡುತ್ತವೆ ಈ 5 ಆಸನಗಳು!

ABOUT THE AUTHOR

...view details