ಪ್ರಥಮ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಜೂನ್ 21, 2015 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಚಾಲನೆ ನೀಡಿದ್ದರು. ಅಂದಿನಿಂದ ಇಂದಿನವರೆಗೆ ಯೋಗ ದಿನಾಚರಣೆಯು ಸಮುದಾಯ ಆರೋಗ್ಯದ ಆಂದೋಲನವಾಗಿ ಪರಿವರ್ತನೆಯಾಗುತ್ತಿದೆ. ದೈನಂದಿನ ಜೀವನದಲ್ಲಿ ಯೋಗದ ಆರೋಗ್ಯ ಲಾಭದ ಬಗ್ಗೆ ಜಾಗೃತಿ ಮೂಡಿಸಲು "ಮಾನವತೆಗಾಗಿ ಯೋಗ" ಘೋಷವಾಕ್ಯದಡಿ ಈ ಬಾರಿ ಜೂನ್ 21 ರಂದು 8ನೇ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.
ಯೋಗದಿನದ ಇತಿಹಾಸ:ಯೋಗವು ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಅನ್ವೇಷಣೆಗಳ ಮೂಲಕ ಮನಸ್ಸು ಹಾಗೂ ದೇಹದ ಮಧ್ಯೆ ಏಕಾಗ್ರಭಾವನೆ ಮೂಡಿಸುವ 5000 ವರ್ಷ ಪುರಾತನವಾದ ಭಾರತೀಯ ಪರಂಪರೆಯಾಗಿದೆ. ಸೆಪ್ಟೆಂಬರ್ 27, 2014 ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, "ಯೋಗವು ಭಾರತದ ಸನಾತನ ಪರಂಪರೆಯ ಅಮೂಲ್ಯ ಕೊಡುಗೆಯಾಗಿದೆ. ಇದು ದೇಹ ಮತ್ತು ಮನಸುಗಳನ್ನು ಬೆಸೆಯುತ್ತದೆ, ವಿಚಾರ ಹಾಗೂ ಆಚಾರಗಳನ್ನು ಬೆಸೆಯುತ್ತದೆ ಹಾಗೂ ಸಹಿಷ್ಣುತೆ ಹಾಗೂ ನೆಮ್ಮದಿಯನ್ನು ಹೆಚ್ಚಿಸುತ್ತದೆ. ಪ್ರಕೃತಿ ಹಾಗೂ ಮಾನವನ ಮಧ್ಯೆ ಮಧುರ ಸಂಬಂಧವನ್ನು ಯೋಗ ಬೆಸೆಯುತ್ತದೆ. ಇದು ಕೇವಲ ಒಂದು ವ್ಯಾಯಾಮವಲ್ಲ. ಮನುಷ್ಯನೊಬ್ಬ ತನ್ನನ್ನು ತಾನು ಸಾಕ್ಷಾತ್ಕರಿಸಿಕೊಳ್ಳುವ ಮಾರ್ಗ ಇದಾಗಿದೆ." ಎಂದು ಹೇಳಿದ್ದರು.
ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸುವ ಬಗ್ಗೆ ಆಗ ಪ್ರಧಾನಿ ಮೋದಿ ಸಲಹೆ ನೀಡಿದ್ದರು. ಜೂನ್ 21ನೇ ತಾರೀಕಿನ ವಿಶೇಷದ ಬಗ್ಗೆ ಅಂದು ಮಾತನಾಡಿದ್ದ ಪ್ರಧಾನಿ, ಭೂಮಂಡಲದ ಉತ್ತರಾರ್ಧ ಗೋಳ ಹಾಗೂ ವಿಶ್ವದ ಬಹಳಷ್ಟು ಭಾಗಗಳಲ್ಲಿ ಈ ದಿನ ಅತ್ಯಂತ ಹೆಚ್ಚು ಮಹತ್ವದ್ದು ಎಂದು ಹೇಳಿದ್ದರು. ಅದರಂತೆ ನಂತರ ಡಿಸೆಂಬರ್ 11, 2014 ರಂದು ಪ್ರತಿವರ್ಷದ ಜೂನ್ 21 ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಅನುಮೋದನೆ ನೀಡಲಾಯಿತು.
ಯೋಗದ ಪ್ರಸ್ತುತತೆ:ಕಳೆದ 2 ವರ್ಷಗಳ ಅವಧಿಯಲ್ಲಿ ಕೋವಿಡ್-19 ಸೋಂಕು ಜನರ ಮಾನಸಿಕ ಆರೋಗ್ಯದ ಮೇಲೆ ಬಹಳಷ್ಟು ದುಷ್ಪರಿಣಾಮ ಬೀರಿದ್ದು, ಒತ್ತಡ, ಉದ್ವಿಗ್ನತೆ, ಭಯ, ನಿದ್ರಾಹೀನತೆ ಮುಂತಾದ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಅಲ್ಲದೆ ಕೋವಿಡ್‌ನಿಂದ ಬಾಧಿತರಾಗಿ ಚೇತರಿಸಿಕೊಂಡಿರುವವರು ರಕ್ತದೊತ್ತಡ, ಮಧುಮೇಹ, ಶ್ವಾಸಕೋಶ ಹಾಗೂ ಹೃದಯ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ದಿನನಿತ್ಯದ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಳ್ಳುವುದರಿಂದ ಸಕಾರಾತ್ಮಕ ಶಕ್ತಿಯ ಹೆಚ್ಚಳವಾಗಿ ಕೋವಿಡ್‌ನಿಂದ ಉಂಟಾದ ಅನಾರೋಗ್ಯಗಳು ಕಡಿಮೆಯಾಗುತ್ತವೆ.
ಇಂದಿನ ವೇಗದ ಜೀವನದಲ್ಲಿ ಜನತೆ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಆಗುತ್ತಿಲ್ಲ. ಹೀಗಾಗಿ ಅವರ ಒಟ್ಟಾರೆ ಜೀವನಶೈಲಿಯ ಮೇಲೆ ಬಹಳಷ್ಟು ದುಷ್ಪರಿಣಾಮವಾಗಿದೆ. ಹಾಳಾದ ಜೀವನಶೈಲಿಯಿಂದ ತಾರುಣ್ಯದಲ್ಲೇ ಕೆಲವರಿಗೆ ಮಧುಮೇಹ, ಬೊಜ್ಜು ಆವರಿಸುತ್ತಿವೆ. ಇಂಥ ಒತ್ತಡದ ಜೀವನಶೈಲಿಯಲ್ಲಿ ಫಿಟ್ನೆಸ್ ಕಾಪಾಡಲು, ದೇಹಕ್ಕೆ ಚೈತನ್ಯ ನೀಡಲು ಹಾಗೂ ತನ್ನನ್ನು ತಾನು ಸಾಕ್ಷಾತ್ಕಾರ ಮಾಡಿಕೊಳ್ಳಲು ಯೋಗ ತುಂಬಾನೇ ಸಹಕಾರಿ.