ಹೈದರಾಬಾದ್:ವಿವಿಧತೆಯಲ್ಲಿ ಏಕತೆಯನ್ನು ಗೌರವಿಸಲು ಡಿಸೆಂಬರ್ 20 ರಂದು ಅಂತಾರಾಷ್ಟ್ರೀಯ ಮಾನವ ಐಕ್ಯತಾ ದಿನವನ್ನು ಆಚರಿಸಲಾಗುತ್ತದೆ. ಬಡತನ ನಿರ್ಮೂಲನೆಗಾಗಿ ಹೊಸ ಆಲೋಚನೆಗಳನ್ನು ಉತ್ತೇಜಿಸುವುದು, ವಿಶ್ವಾದ್ಯಂತದ ಸರ್ಕಾರಗಳಿಗೆ ತಮ್ಮ ಜವಾಬ್ದಾರಿಗಳನ್ನು ನೆನಪಿಸುವುದು ಮತ್ತು ಒಗ್ಗಟ್ಟಿನ ಬಗ್ಗೆ ಸಾರ್ವಜನಿಕ ಜಾಗೃತಿಯನ್ನು ಮೂಡಿಸವುದು ಈ ದಿನದ ಉದ್ದೇಶವಾಗಿದೆ ಎಂದು ವಿಶ್ವಸಂಸ್ಥೆ (ಯುಎನ್) ಹೇಳಿದೆ. ಪರಸ್ಪರ ಕಾಳಜಿ ಮತ್ತು ನ್ಯಾಯ ಪಡೆಯುವುದು ಒಗ್ಗಟ್ಟಿನ ಗುರಿಯಾಗಿದೆ.
ವಿಶ್ವಸಂಸ್ಥೆ ಸ್ಥಾಪನೆಯಾದಾಗಿನಿಂದ, ಒಗ್ಗಟ್ಟಿನ ಕುರಿತು ಮಾರ್ಗದರ್ಶನ ನೀಡುತ್ತಿದೆ. ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿ, ಮಾನವ ಹಕ್ಕುಗಳು ಮತ್ತು ಶಾಂತಿಯನ್ನು ಕಾಪಡಲು ವಿಶ್ವದ ಜನರು ಮತ್ತು ರಾಷ್ಟ್ರಗಳು ವಿಶ್ವಸಂಸ್ಥೆಯ ಸ್ಥಾಪನೆಯೊಂದಿಗೆ ಒಗ್ಗೂಡಿದವು. ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯನ್ನು ಕಾಪಾಡಲು ಸ್ಥಾಪಿತವಾಗಿರುವ ವಿಶ್ವ ಸಂಸ್ಥೆಯ ಸಾಮೂಹಿಕ ಭದ್ರತೆಯ ಪ್ರಮುಖ ತತ್ವವೆಂದರೆ ಸದಸ್ಯ ರಾಷ್ಟ್ರಗಳ ನಡುವೆ ಏಕತೆ ಮತ್ತು ಸಾಮರಸ್ಯ ಮೂಡಿಸುವುದಾಗಿದೆ.
ಇತಿಹಾಸ: ಈ ನಿಟ್ಟಿನಲ್ಲಿ, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಪ್ರತಿ ವರ್ಷ ಡಿಸೆಂಬರ್ 20 ಅನ್ನು ಅಂತಾರಾಷ್ಟ್ರೀಯ ಮಾನವ ಐಕ್ಯತಾ ದಿನವೆಂದು ಘೋಷಿಸಿತು. ಡಿಸೆಂಬರ್ 22, 2005 ರಂದು ಈ ನಿರ್ಣಯವನ್ನು ಅಂಗೀಕರಿಸಿತು, ವಿಶ್ವ ಸಾಲಿಡಾರಿಟಿ ಫಂಡ್ ಅನ್ನು ಜನರಲ್ ಅಸೆಂಬ್ಲಿಯು ಡಿಸೆಂಬರ್ 20, 2002 ರಂದು ಸ್ಥಾಪಿಸಲಾಯಿತು. ಇದು ಫೆಬ್ರವರಿ 2003 ರಲ್ಲಿ ಯುನೈಟೆಡ್ ನೇಷನ್ಸ್ ಡೆವಲಪ್ಮೆಂಟ್ ಪ್ರೋಗ್ರಾಂನ ಟ್ರಸ್ಟ್ ಫಂಡ್ ಆಗಿ ರೂಪುಗೊಂಡಿತು. ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಬಡತನವನ್ನು ಕೊನೆಗೊಳಿಸುವುದು, ಸಾಮಾಜಿಕ ಮತ್ತು ಮಾನವ ಅಭಿವೃದ್ಧಿಯನ್ನು ಸಾಧಿಸುವುದು ಇದರ ಗುರಿಯಾಗಿದೆ.