ಹೈದರಾಬಾದ್: ವಿಶ್ವದ ಅನೇಕ ಭಾಗಗಳಲ್ಲಿ, ಲೈಂಗಿಕ ಮತ್ತು ಸಂತಾನೋತ್ಪತ್ತಿ ನಿರ್ಧಾರಗಳಿಗೆ ಸಂಬಂಧಿಸಿದಂತೆ ಮಹಿಳೆಯರ ಅಭಿಪ್ರಾಯ, ಅವರ ಬಯಕೆಗಳು ಮತ್ತು ಅವರ ಕಾಳಜಿಗೆ ಹೆಚ್ಚಿನ ಆದ್ಯತೆಗಳಿಗೆ ಹೆಚ್ಚು ಗಮನ ನೀಡಲಾಗುವುದಿಲ್ಲ. ಜಾಗತೀಕರಣದ ಈ ಯುಗದಲ್ಲಿ, ಮಹಿಳೆಯರ ಕಾನೂನುಗಳು ಮತ್ತು ಹಕ್ಕುಗಳ ಬಗ್ಗೆ ಪ್ರಪಂಚದಾದ್ಯಂತ ಅನೇಕ ರೀತಿಯ ಜಾಗೃತಿ ಅಭಿಯಾನಗಳು ಅಥವಾ ಸಾಮಾಜಿಕ ಮಾಧ್ಯಮ ಅಭಿಯಾನಗಳು ನಡೆಯುತ್ತವೆ. ಆದರೆ ವಾಸ್ತವವಾಗಿ ಅನೇಕ ಮಹಿಳೆಯರಿಗೆ ಇನ್ನೂ ತಮ್ಮ ಲೈಂಗಿಕ ಮತ್ತು ಸಂತಾನೋತ್ಪತ್ತಿ ಆರೋಗ್ಯ ಮತ್ತು ಹಕ್ಕುಗಳ ಬಗ್ಗೆ ತಿಳಿವಳಿಕೆ ಇಲ್ಲ. ಧರ್ಮ, ಸಂಪ್ರದಾಯಗಳು, ಲಿಂಗ ಅಸಮಾನತೆ ಇತ್ಯಾದಿ ಸಮಸ್ಯೆಗಳಿಂದಾಗಿ ಮಹಿಳೆಯರಿಗೆ ಈ ಕುರಿತು ಧ್ವನಿ ಎತ್ತಲು ಸಾಧ್ಯವಾಗುತ್ತಿಲ್ಲ.
ಲೈಂಗಿಕ ಮತ್ತು ಸಂತಾನೋತ್ಪತ್ತಿ ಆರೋಗ್ಯಕ್ಕೆ ಸಂಬಂಧಿಸಿದ ಹಕ್ಕುಗಳು ಮತ್ತು ಅವುಗಳಿಗೆ ಸಂಬಂಧಿಸಿದ ಮಾನವ ಹಕ್ಕುಗಳ ಬಗ್ಗೆ ವಿಶ್ವದಾದ್ಯಂತದ ಮಹಿಳೆಯರಿಗೆ ಜಾಗೃತಿ ಮೂಡಿಸಲು, ಶಿಕ್ಷಣ ನೀಡಲು ಮತ್ತು ಅವರನ್ನು ಪ್ರೇರೇಪಿಸಲು, ಲಿಂಗ ಅಸಮಾನತೆಗಳನ್ನು ಅರ್ಥಮಾಡಿಕೊಳ್ಳಲು ಹಾಗೂ ಅದರ ವಿರುದ್ಧ ಧ್ವನಿ ಎತ್ತಲು ಪ್ರತಿ ವರ್ಷ ಮೇ.28 ರಂದು "ಅಂತಾರಾಷ್ಟ್ರೀಯ ಮಹಿಳಾ ಆರೋಗ್ಯ ದಿನ" ವನ್ನು ಆಚರಿಸಲಾಗುತ್ತಿದೆ. 2023ರ ಈ ದಿನವನ್ನು "ನಮ್ಮ ಧ್ವನಿ, ನಮ್ಮ ಕ್ರಿಯೆ, ನಮ್ಮ ಬೇಡಿಕೆ, ಮಹಿಳೆಯರ ಆರೋಗ್ಯ ಮತ್ತು ಹಕ್ಕುಗಳನ್ನು ಎತ್ತಿಹಿಡಿಯಿರಿ" ಎಂಬ ಧ್ಯೇಯದೊಂದಿಗೆ ಆಚರಿಸಲಾಗುತ್ತದೆ.
ಈ ದಿನದ ಇತಿಹಾಸ:ಪ್ರತಿ ವರ್ಷ ಈ ದಿನವನ್ನು ಆಚರಿಸುವ ನಿರ್ಧಾರವನ್ನು ಮೊದಲ ಬಾರಿಗೆ ಲ್ಯಾಟಿನ್ ಅಮೆರಿಕ ಮತ್ತು ಕೆರಿಬಿಯನ್ ಮಹಿಳಾ ಆರೋಗ್ಯ ನೆಟ್ವರ್ಕ್ ಮತ್ತು ಸಂತಾನೋತ್ಪತ್ತಿ ಹಕ್ಕುಗಳ ಮಹಿಳಾ ಜಾಗತಿಕ ನೆಟ್ವರ್ಕ್ 1987 ರಲ್ಲಿ ಕೋಸ್ಟಾ ರಿಕಾದಲ್ಲಿ ನಡೆದ ಮಹಿಳಾ ಗ್ಲೋಬಲ್ ನೆಟ್ವರ್ಕ್ ಫಾರ್ ರಿಪ್ರೊಡಕ್ಟಿವ್ ರೈಟ್ಸ್ ಸದಸ್ಯರು ಕೈಗೊಂಡರು. ಅಂದಿನಿಂದ ಪ್ರತಿ ವರ್ಷ ಮೇ. 28 ಅನ್ನು ಜಾಗತಿಕವಾಗಿ ಅಂತಾರಾಷ್ಟ್ರೀಯ ಮಹಿಳಾ ಆರೋಗ್ಯ ದಿನವಾಗಿ ಆಚರಿಸಲಾಗುತ್ತಿದೆ. 1999 ರಲ್ಲಿ, ದಕ್ಷಿಣ ಆಫ್ರಿಕಾ ಸರ್ಕಾರವು ಈ ದಿನವನ್ನು ಅಧಿಕೃತವಾಗಿ ಆಚರಿಸಲು ಪ್ರಾರಂಭಿಸಿತು. ಪ್ರಸ್ತುತ, ಜಾಗೃತಿ ಮೂಡಿಸಲು ಅನೇಕ ರೀತಿಯ ಕಾರ್ಯಕ್ರಮಗಳು ಮತ್ತು ಸಾಮಾಜಿಕ ಮಾಧ್ಯಮ ಅಭಿಯಾನಗಳನ್ನು ಪ್ರಪಂಚದಾದ್ಯಂತ ಈ ದಿನದಂದು ಆಯೋಜಿಸಲಾಗುತ್ತದೆ.