ಹೈದರಾಬಾದ್ : ಯುವಕರು ವಿವಿಧ ಕಾರಣಗಳಿಂದ ಮಾದಕ ದ್ರವ್ಯದ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ. ಮಾದಕ ದ್ರವ್ಯಗಳ ಪಿಡುಗು ಸಮಾಜದಲ್ಲಿ ಆಳವಾಗಿ ಬೇರೂರಿದೆ. ಇದರಿಂದಾಗಿ ಬಹುತೇಕ ಇಡೀ ಪೀಳಿಗೆಯು ವಿನಾಶದತ್ತ ಸಾಗುತ್ತಿದೆ. ಮಾದಕ ವ್ಯಸನ ಮತ್ತು ದುರುಪಯೋಗದ ಹಿಡಿತದಿಂದ ಜನರನ್ನು ರಕ್ಷಿಸಲು, ಮಾದಕ ವ್ಯಸನ ಮತ್ತು ಅಕ್ರಮ ಸಾಗಣೆ ವಿರುದ್ಧ ಅರಿವು ಮೂಡಿಸುವ ದೃಷ್ಟಿಯಿಂದ ಪ್ರತಿ ವರ್ಷ ಜೂನ್ 26ರಂದು ಅಂತಾರಾಷ್ಟ್ರೀಯ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ.
ಇತ್ತೀಚಿನ ದಿನದಲ್ಲಿ ಅನೇಕ ಯುವಕ ಮತ್ತು ಯುವತಿಯರು ಮಾದಕ ದ್ರವ್ಯದ ಚಟಕ್ಕೆ ಬಲಿಯಾಗಿದ್ದಾರೆ. ಹದಿಹರೆಯದವರಲ್ಲಿ ಮಾದಕ ವ್ಯಸನದ ಚಟ ಹೆಚ್ಚುತ್ತಿದ್ದು, ಸಮಾಜದ ನಿರ್ಲಕ್ಷ್ಯದಿಂದಾಗಿ ಇಂದು ಯುವ ಜನತೆ ಹೆಚ್ಚೆಚ್ಚು ಈ ದುಶ್ಚಟಕ್ಕೆ ಬಲಿಯಾಗುತ್ತಿದ್ದಾರೆ. ಇದು ಯುವ ಜನತೆಯ ಆರೋಗ್ಯ ಮತ್ತು ವೃತ್ತಿ ಜೀವನದ ಮೇಲೆ ಜೊತೆಗೆ ಸಮಾಜದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದೆ. ಈ ಹಿನ್ನೆಲೆಯಲ್ಲಿ ಈ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಈ ಬಾರಿ ಈ ದಿನವನ್ನು "ಜನರು ಮೊದಲು ಕಳಂಕ ಮತ್ತು ತಾರತಮ್ಯ ನಿಲ್ಲಿಸಿ, ತಡೆಗಟ್ಟುವಿಕೆ ಬಲಪಡಿಸಿ" ಎಂಬ ಘೋಷವಾಕ್ಯದೊಂದಿಗೆ ಈ ದಿನವನ್ನು ಆಚರಿಸಲಾಗುತ್ತಿದೆ.
ಜಾಗತಿಕ ದಿನಾಚರಣೆ: ಮಾದಕ ದ್ರವ್ಯ ಮುಕ್ತ ಸಮಾಜ ನಿರ್ಮಾಣ ಮಾಡುವ ಉದ್ದೇಶದಿಂದ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಈ ಕುರಿತು ಸೆಪ್ಟೆಂಬರ್ 7, 1987ರಲ್ಲಿ ನಿರ್ಣಯವನ್ನು ಅಂಗೀಕರಿಸಲಾಯಿತು. ನಿಷೇಧಿತ ಮಾದಕವಸ್ತು ಬಳಕೆ ಮತ್ತು ಕಳ್ಳಸಾಗಣೆಯನ್ನು ತಡೆಗಟ್ಟಲು ಪ್ರತಿ ವರ್ಷ ಮಾದಕ ವ್ಯಸನ ಮತ್ತು ಅಕ್ರಮ ಸಾಗಾಣಿಕೆ ವಿರುದ್ಧ ಅಂತಾರರಾಷ್ಟ್ರೀಯ ದಿನವನ್ನು ಆಚರಿಸಲು ನಿರ್ಣಯವು ಪ್ರಸ್ತಾಪಿಸಿದೆ.
ಮನುಕುಲದ ಉತ್ತಮ ಭವಿಷ್ಯಕ್ಕಾಗಿ ಮಾದಕ ವ್ಯಸನ ಮತ್ತು ಕಳ್ಳಸಾಗಣೆ ನಿಲ್ಲಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ. ಮಾದಕ ವ್ಯಸನದ ಹೊರತಾಗಿ ವಿವಿಧ ವ್ಯಸನಗಳ ಬಗ್ಗೆ ಚರ್ಚಿಸಲು ದಿನವು ವೇದಿಕೆಯನ್ನು ಒದಗಿಸುತ್ತದೆ. ಭಾರತವು ಮಾದಕ ದ್ರವ್ಯ ಮತ್ತು ಅಕ್ರಮ ಸಾಗಣೆಯನ್ನು ತಡೆಯಲು ಕಠಿಣ ಕಾನೂನುಗಳನ್ನು ಜಾರಿಗೆ ತರಲಾಗಿದೆ.