ಹೈದರಾಬಾದ್ :ಮಧುಮೇಹ ಅನೇಕ ಮಂದಿಯನ್ನು ಕಾಡುವ ಸಾಮಾನ್ಯ ರೋಗವಾಗಿದೆ. ಅಧಿಕ ಮಧುಮೇಹ ಹೊಂದಿರುವ ಜನರು ನಿತ್ಯ ಇನ್ಸುಲಿನ್ ಇಂಜೆಕ್ಷನ್ ಪಡೆಯುವ ಮೂಲಕ ಇದರ ನಿಯಂತ್ರಣಕ್ಕೆ ಮುಂದಾಗುತ್ತಾರೆ. ಪ್ರತಿ ನಿತ್ಯ ಸೂಜಿಯಿಂದ ಈ ರೀತಿ ಚುಚ್ಚಿಸಿಕೊಳ್ಳುವುದು ಸುಲಭ ವಿಚಾರವಲ್ಲ. ಈ ಸೂಜಿಯ ನೋವಿನಿಂದ ಅನೇಕ ಬಾರಿ ರೋಗಿ ಜರ್ಜರಿತನಾಗುತ್ತಾನೆ. ಇದಕ್ಕೆ ಇದೀಗ ಹೈದರಾಬಾದ್ ಕಂಪನಿ ಪರಿಹಾರ ಕಂಡು ಹಿಡಿದಿದೆ. ಇಂಜೆಕ್ಷನ್ ಬದಲಾಗಿ ಬಾಯಿಯ (ಓರಲ್) ಮೂಲಕವೇ ಸ್ಪ್ರೇ ಬಳಕೆ ಮಾಡಬಹುದು ಎಂದು ಸಂಸ್ಥೆ ತಿಳಿಸಿದೆ.
ಶೀಘ್ರದಲ್ಲೇ ಮಾನವರ ಮೇಲೆ ಪರೀಕ್ಷೆ: ಹೈದರಾಬಾದ್ನ ನೀಡಲ್ಫ್ರೀ ಟೆಕ್ನಾಲಾಜಿ ಓಜುಲೀನ್ ಎಂಬ ಸೂಜಿ ಮುಕ್ತವಾದ ಬಾಯಿಯ ಇನ್ಸುಲಿನ್ ಸ್ಪ್ರೇ ಅನ್ನು ಅಭಿವೃದ್ಧಿಪಡಿಸಿದೆ. ಇದು ನೋವು ರಹಿತ ಚಿಕಿತ್ಸೆಯಾಗಿದ್ದು. ಈಗಾಗಲೇ 40 ದೇಶಗಳಲ್ಲಿ ಅಂತಾರಾಷ್ಟ್ರೀಯ ರೋಗಿಗಳು ಓಜುನಿಲ್ ಅನ್ನು ಕಾಯ್ದಿರಿಸಿದ್ದಾರೆ ಎಂದು ನೀಡಲ್ಫ್ರೀ ಟೆಕ್ನಾಲಾಜಿಯ ನಿರ್ದೇಶಕ ಮತ್ತು ಸಹ ಸಂಸ್ಥಾಪಕ ಸಿಎಂಡಿ ಡಾ ಕೆ ಕೋಟೆಶ್ವರ ರಾವ್ ತಿಳಿಸಿದ್ದಾರೆ. ಈ ಸಂಸ್ಥೆ ಇದೀಗ ಈ ಔಷಧಿಯ ಸುರಕ್ಷಾ ಪರೀಕ್ಷೆಗೆ ಕೇಂದ್ರ ಔಷದ ಗುಣಮಟ್ಟ ನಿಯಂತ್ರಣ ಸಂಘಟನೆಗೆ ಅರ್ಜಿ ಸಲ್ಲಿಸಿದೆ. ಮಾನವನ ಮೇಲೆ ಔಷಧಿಯ ಪ್ರಯೋಗವನ್ನು ನಡೆಸಲು ಇದು ಕಡ್ಡಾಯವಾಗಿದೆ.