ಹೈದರಾಬಾದ್: ಭಾರತದ ಖ್ಯಾತ ಲಸಿಕಾ ಕಂಪನಿ ಸೆರಮ್ ಇನ್ಸಿಟಿಟ್ಯೂಟ್ ಆಫ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ನಿಮಿತ್ತ ಜನವರಿ 25ರಂದು ಮಹಿಳೆಯರಲ್ಲಿ ಗರ್ಭಕಂಠದ ಕ್ಯಾನ್ಸ್ರ್ ನಿರ್ಮೂಲನೆಗೆ ಮೊದಲ ಸ್ಥಳೀಯ ಲಸಿಕೆ 'ಸರ್ವವಾಕ್' ಅನ್ನು ಬಿಡುಗಡೆ ಮಾಡಿದೆ. ಲಸಿಕೆಯ ಅಧ್ಯಯನದ ಪಲಿತಾಂಶದ ಮೇಲೆ ಗರ್ಭಕಂಠದ ಕ್ಯಾನ್ಸರ್ ಅನ್ನು ತಡೆಗಟ್ಟುವಲ್ಲಿ 100 ಪ್ರತಿಶತದಷ್ಟು ಪರಿಣಾಮಕಾರಿಯಾಗಿದೆ ಎಂದು ಹೇಳಲಾಗುತ್ತಿದೆ.
ಅತ್ಯಂತ ಮಾರಣಾಂತಿಕ ಕ್ಯಾನ್ಸರ್ ಆಗಿರುವ ಗರ್ಭಕಂಠ (ಸರ್ವಿಕಲ್) ಕ್ಯಾನ್ಸರ್ನ ಪ್ರಕರಣಗಳು ಪ್ರತಿವರ್ಷ ಹೆಚ್ಚಾಗುತ್ತಿವೆ. ಅಂಕಿ - ಅಂಶಗಳ ಪ್ರಕಾರ, ಭಾರತದಲ್ಲಿ ಪ್ರತಿ ವರ್ಷ ಒಂದು ಲಕ್ಷಕ್ಕೂ ಹೆಚ್ಚು ಮಹಿಳೆಯರಲ್ಲಿ ಗರ್ಭಕಂಠದ ಕ್ಯಾನ್ಸರ್ ಪತ್ತೆಯಾಗುತ್ತದೆ, ಅದರಲ್ಲಿ ಸುಮಾರು 67 ಸಾವಿರ ಮಹಿಳೆಯರು ಈ ಕ್ಯಾನ್ಸರ್ನಿಂದ ಸಾವಿಗೀಡಾಗುತ್ತಿದ್ದಾರೆ. ಮತ್ತೊಂದೆಡೆ, ಇತರ ವರದಿಗಳ ಪ್ರಕಾರ, ಭಾರತದಲ್ಲಿ 30 ರಿಂದ 69 ವರ್ಷ ವಯಸ್ಸಿನ ಮಹಿಳೆಯರಲ್ಲಿ ಕ್ಯಾನ್ಸರ್ ಕಾಣಿಸಿಕೊಳ್ಳಲಿದ್ದು, ಶೇ.17ರಷ್ಟು ಮಹಿಳೆಯರು ಸಾಯುತ್ತಾರೆ ಎಂದು ವರದಿಯಾಗಿದೆ.
ಗರ್ಭಕಂಠದ ಕಾನ್ಸರ್ ಹೆಚ್ಚಾಗಿ 30 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಲ್ಲಿ ಕಂಡುಬರುತ್ತದೆ. ವಿಶ್ವಾದ್ಯಂತ ಮಹಿಳೆಯರಲ್ಲಿ ನಾಲ್ಕನೇ ಹೆಚ್ಚು ಪ್ರಚಲಿತದಲ್ಲಿರುವ ಕ್ಯಾನ್ಸರ್ ಇದಾಗಿದ್ದು. ಭಾರತದಲ್ಲಿ, ಎರಡನೇ ಅತಿ ಸಾಮಾನ್ಯ ಕ್ಯಾನ್ಸರ್ ಆಗಿದೆ.
ಲೈಂಗಿಕವಾಗಿ ಹರಡುವ ರೋಗ: ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಲು ಈಟಿವಿ ಭಾರತ್ ನೊಂದಿಗೆ ಮಾತನಾಡಿದ ಸ್ತ್ರೀರೋಗ ತಜ್ಞೆ ಡಾ. ನಿಧಿ ಕೊಠಾರಿ, ''ಗರ್ಭಕಂಠದ ಕ್ಯಾನ್ಸರ್‌ಗೆ ಮುಖ್ಯವಾದ ಕಾರಣ ಎಂದರೆ ಹ್ಯೂಮನ್ ಪ್ಯಾಪಿಲೋಮಾ ಎಂಬ ವೈರಸ್ (HPV). ಲೈಂಗಿಕವಾಗಿ ಹರಡುವ ಈ ಹೆಚ್ಪಿವಿ ವೈರಸ್ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಮತ್ತು ಈ ವೈರಸ್ನ ಪರಿಣಾಮವನ್ನು ಕಂಡು ಹಿಡಿಯಲು ಸ್ವಲ್ಪ ಸಮಯ ತೆಗದುಕೊಳ್ಳುವುದರಿಂದ ರೋಗ ಲಕ್ಷಣಗಳನ್ನು ಬಹುಬೇಗನೆ ಕಂಡು ಹಿಡಿಯಲು ಸಾಧ್ಯವಾಗುವುದಿಲ್ಲ. ರೋಗಲಕ್ಷಣಗಳು ಕಾಣಿಸಿಕೊಳ್ಳುವ ಹೊತ್ತಿಗೆ ಸೋಂಕು ಸಾಕಷ್ಟು ಹಾನಿಯನ್ನು ಮಾಡಿರುತ್ತದೆ. ಇದು ಲೈಂಗಿಕವಾಗಿ ಹರಡುವ ರೋಗ ಆಗಿರುವುದರಿಂದ, ರೋಗಿಯ ಸಂಗಾತಿಗೂ ಸೋಂಕು ಹರಡಬಹುದು ಎಂದು ತಿಳಿಸಿದರು.