ಅಹಮದಬಾದ್: ಆರೋಗ್ಯ ಚಿಕಿತ್ಸೆಯ ಮೂಲಾಧಾರವಾಗಿರುವ ಭಾರತದ ಜೈವಿಕ ತಂತ್ರಜ್ಞಾನ (ಬಯೋಟೆಕ್ನಾಲಾಜಿ) ಉದ್ಯಮವೂ ಕಳೆದ ಎಂಟು ವರ್ಷಗಳಿಂದ 80 ಬಿಲಿಯನ್ ಡಾಲರ್ಗೂ ಹೆಚ್ಚು ಬೆಳವಣಿಗೆ ಕಂಡಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ತಿಳಿಸಿದ್ದಾರೆ.
ಜೈವಿಕ ತಂತ್ರಜ್ಞಾನ ಶೃಂಗಸಭೆಯಲ್ಲಿ ವರ್ಚುಯಲ್ ಆಗಿ ಮಾತನಾಡಿರುವ ಅವರು, 2025ರ ಹೊತ್ತಿಗೆ ಈ ಉದ್ಯಮದ ಮೌಲ್ಯ 150 ಬಿಲಿಯನ್ ಡಾಲರ್ ಆಗಲಿದ್ದು, 2030ರ ಹೊತ್ತಿಗೆ 300 ಬಿಲಿಯನ್ ಡಾಲರ್ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜಾಗತಿಕ ಹೊಸ ಉದ್ಯಮ ಕ್ರಾಂತಿಯಲ್ಲಿ ಜೈವಿಕ ಉತ್ಪಾದನೆ ಪ್ರಮುಖವಾಗಿದೆ. ಅಗ್ರಿ ಫುಡ್, ಶಕ್ತಿ, ಆರೋಗ್ಯ, ಆರೈಕೆ ಮತ್ತು ಹವಾಮಾನ ಬದಲಾವಣೆ ಪರಿಹಾರದತ್ತ ಇದು ಗುರಿಯನ್ನು ಹೊಂದಿದೆ. ಆದಾಗ್ಯೂ ಜೈವಿಕ ಉತ್ಪಾದನೆ ವಲಯದಲ್ಲಿನ ಮಾನವಶಕ್ತಿ ಕೊರತೆಯು ಸವಾಲಾಗಿ ಉಳಿದಿದೆ. ಈ ಹಿನ್ನೆಲೆ ಅಗತ್ಯ ತರಬೇತಿ ನೀಡಲು ಮತ್ತು ಕೌಶಲ್ಯದ ಅಂತರವನ್ನು ಕಡಿಮೆ ಮಾಡಲು ಪ್ರಯತ್ನಗಳನ್ನು ಪ್ರೇರೇಪಿಸಲಾಗುವುದು ಎಂದು ಹೇಳಿದ್ದಾರೆ.
ಕಳೆದ ಎಂಟು ವರ್ಷದಲ್ಲಿ ಭಾರತದ ಜೈವಿಕ- ಆರ್ಥಿಕತೆ 10 ಬಿಲಿಯನ್ ಡಾಲರ್ ನಿಂದ 80 ಬಿಲಿಯನ್ ಡಾಲರ್ ಬೆಳವಣಿಗೆಗೆ ಸಾಕ್ಷ್ಯವಾಗಿದೆ. ಭಾರತವು ಇದೀಗ ಜೈವಿಕ ತಂತ್ರಜ್ಞಾನ ವಲಯದಲ್ಲಿನ ವಿಸ್ತರಣೆಯ ಗುರಿಯನ್ನು ಹೊಂದಿದೆ ಎಂದು ತಿಳಿಸಿದರು.