ನವದೆಹಲಿ: ಮಾನವನ ದೇಹದಲ್ಲಿ ದಶಕಗಳ ಕಾಲ ಇರುವ ಟ್ಯೂಬರ್ಕ್ಯುಲೊಸಿಸ್ (ಕ್ಷಯ ರೋಗ- ಟಿಬಿ) ಬ್ಯಾಕ್ಟೀರಿಯಾವನ್ನು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಸಂಶೋಧಕರು ಡಿಕೋಡ್ ಮಾಡಿದ್ದಾರೆ.
ಈ ಕುರಿತು ಸೈನ್ಸ್ ಅಡ್ವಾನ್ಸಸ್ ಜರ್ನಲ್ನಲ್ಲಿ ಅಧ್ಯಯನ ಪ್ರಕಟವಾಗಿದೆ. ಟಿಬಿ ಬ್ಯಾಕ್ಟೀರಿಯಾ ನಿರಂತರವಾಗಿ ಉಳಿಯುವಿಕೆಗೆ ಪ್ರಮುಖವಾಗಿರುವ ಕಬ್ಬಿಣದ ಸಲ್ಫರ್ ಕ್ಲಸ್ಟರ್‌ಗಳ ಉತ್ಪಾದನೆಯಲ್ಲಿ ಸಹಾಯ ಮಾಡುವ ಜೀನ್ ಕುರಿತು ಭಾರತೀಯ ವಿಜ್ಞಾನ ಸಂಸ್ಥೆಯ ಸಂಶೋಧಕರು ಕಂಡುಕೊಂಡಿದ್ದಾರೆ. ಈ ಬಗ್ಗೆ ವಿಶೇಷ ಅಧ್ಯಯನ ಮಾಡಿ ಡಿಕೋಡ್ ಮಾಡಿದ್ದಾರೆ.
ಈ ಕಬ್ಬಿಣದ ಸಲ್ಫರ್ ಉಸಿರಾಟದ ಶಕ್ತಿಯ ಉತ್ಪಾದನೆಗೆ ಸಹಾಯ ಮಾಡುತ್ತದೆ. ಇದು ಶ್ವಾಸಕೋಶದ ಎಂತಹ ಕಠಿಣ ಪರಿಸ್ಥಿತಿಯಲ್ಲೂ ಸೋಂಕನ್ನು ಜೀವಂತವಾಗಿರಿಸುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ. ಕ್ಷಯರೋಗವು ಮೈಕೋಬ್ಯಾಕ್ಟೀರಿಯಂ ಟ್ಯೂಬರ್ಕ್ಯುಲೋಸಿಸ್ (ಎಂಟಿಬಿ) ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ. ಇದು ಯಾವುದೇ ಲಕ್ಷಣಗಳನ್ನು ತೋರದೇ ದಶಕಗಳ ಕಾಲ ದೇಹದಲ್ಲಿರುತ್ತದೆ. ಈ ಬ್ಯಾಕ್ಟೀರಿಯಾ ಪ್ರತಿರಕ್ಷಣಾ ವ್ಯವಸ್ಥೆ ಮೇಲೆ ದಾಳಿ ಮಾಡುತ್ತದೆ. ಇದು ಶ್ವಾಸಕೋಶದಲ್ಲಿನ ಆಳವಾದ ಆಮ್ಲಜನಕ ಪಾಕೆಟ್ನಲ್ಲಿ ಅಡಗಿರುತ್ತದೆ ಎಂದು ಈ ಬಗ್ಗೆ ಸುದೀರ್ಘ ಅಧ್ಯಯನ ನಡೆಸಿರುವ ಮೂಲ ಲೇಖಕಿ ಮಾಯಾಶ್ರೀ ತಿಳಿಸಿದ್ದಾರೆ.
ಇದರ ಇರುವಿಕೆಯಿಂದ ಕ್ಷಯದ ಸೋಂಕಿಗೆ ಕಾರಣವಾಗುತ್ತದೆ. ಇದನ್ನು ತಿಳಿಯದ ಹೊರತು ಟಿಬಿ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ ಎಂದು ಅಧ್ಯಯನದ ಕಾರೆಸ್ಪಾಂಡಿಂಗ್ ಲೇಖಕರು ಮತ್ತು ಎಂಸಿಬಿಯ ಅಸೋಸಿಯೇಟ್ ಪ್ರೊಫೆಸರ್ ಆಗಿರುವ ಅಮಿತ್ ಸಿಂಗ್ ತಿಳಿಸಿದ್ದಾರೆ.