ನವದೆಹಲಿ: 2023ರಲ್ಲಿ ಭಾರತ ಸೇರಿದಂತೆ ವಿಶ್ವದ 20 ದೇಶಗಳಲ್ಲಿ ಅತಿ ಹೆಚ್ಚು ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ. ಕಳೆದ ಐದು ವರ್ಷಗಳಿಗೆ ಹೋಲಿಸಿದರೆ, ಭಾರತದಲ್ಲಿ ಈ ವರ್ಷ ಅತಿ ಹೆಚ್ಚಿನ ಪ್ರಕರಣಗಳು ದಾಖಲಾಗಿವೆ ಎಂದು ವರದಿ ತಿಳಿಸಿದೆ.
ಸೇವ್ ದ ಚಿಲ್ಡ್ರನ್ ಎಂಬ ಸಂಸ್ಥೆಯ ವರದಿ ಪ್ರಕಾರ, 2023ರ ಜನವರಿಯಿಂದ ನವೆಂಬರ್ವರೆಗೆ 20 ದೇಶದಲ್ಲಿ 11 ತಿಂಗಳಲ್ಲಿ 5 ಮಿಲಿಯನ್ ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ. 2022ಕ್ಕೆ ಹೋಲಿಕೆ ಮಾಡಿದಾಗ ಪ್ರಕರಣಗಳ ಸಂಖ್ಯೆಯಲ್ಲಿ ಶೇ 30ರಷ್ಟು ಹೆಚ್ಚಿದೆ. 2019ಕ್ಕೆ ಹೋಲಿಸಿದಾಗ ಶೇ 18ರಷ್ಟು ಹೆಚ್ಚು. ಅಷ್ಟೇ ಅಲ್ಲ, ಭಾರತ ಸೇರಿದಂತೆ 20 ದೇಶಗಳಲ್ಲಿ ಈ ವರ್ಷ ಡೆಂಗ್ಯೂವಿನಿಂದಾಗಿ 5,500 ಮಂದಿ ಸಾವನ್ನಪ್ಪಿದ್ದಾರೆ. 2022ಕ್ಕೆ ಹೋಲಿಸಿದರೆ ಸಾವಿನ ಪ್ರಮಾಣ ಶೇ 32ರಷ್ಟು ಜಾಸ್ತಿಯಾದರೆ, 2019ಕ್ಕೆ ಹೋಲಿಕೆ ಮಾಡಿದರೆ, ಶೇ 11ರಷ್ಟು ಏರಿಕೆ ಕಂಡಿದೆ.
ಡೆಂಗ್ಯೂ ಪ್ರಕರಣಗಳಲ್ಲಿ ನೈಜ ಸಾವಿನ ವರದಿ ಇನ್ನೂ ಹೆಚ್ಚಿರಬಹುದು. ಅದು ದಾಖಲಾಗಿಲ್ಲ ಎಂದು ವರದಿ ಹೇಳಿದೆ. 2023ರಲ್ಲಿ ಬಾಂಗ್ಲಾದೇಶದಲ್ಲಿ ಅತಿ ಹೆಚ್ಚು ಸಾವಿನ ವರದಿ ದಾಖಲಾಗಿದೆ. ಇಲ್ಲಿ ಜನವರಿಯಿಂದ 3,00,000 ಮಂದಿ ಸೋಂಕಿಗೆ ಗುರಿಯಾಗಿದ್ದಾರೆ. 2022ಕ್ಕೆ ಹೋಲಿಸಿದಾಗ ಇದರ ಪ್ರಮಾಣ ಶೇ 62,000ರಷ್ಟು ಹೆಚ್ಚಿದೆ.
ಏಷ್ಯಾದೆಲ್ಲೆಡೆ 2023ರ ವರ್ಷ ತೀವ್ರ ಹವಾಮಾನ ವೈಪರೀತ್ಯಕ್ಕೆ ಸಾಕ್ಷಿಯಾಗಿದ್ದು, ಇದು ಡೆಂಗ್ಯೂ ಸಾವಿನ ಏರಿಕೆಗೂ ಕಾರಣವಾಗಿದೆ. ಇದರಿಂದ ಮಕ್ಕಳು ಗಂಭೀರ ಪರಿಣಾಮಕ್ಕೆ ಒಳಗಾಗುತ್ತಿದ್ದಾರೆ. ಇವರ ಕುಟುಂಬ ಸದಸ್ಯರೂ ಡೆಂಗ್ಯೂಗೆ ಬಲಿಯಾದಾಗ ಅವರು ಶಿಕ್ಷಣ, ಆರ್ಥಿಕತೆ ಮತ್ತು ಕುಟುಂಬದ ಭಾವನಾತ್ಮಕ ಒತ್ತಡಕ್ಕೂ ಒಳಗಾಗುತ್ತಿದ್ದಾರೆ ಎಂದು ಸೇವ್ ದ ಚಿಲ್ಡ್ರನ್ನ ಹಿರಿಯ ಆರೋಗ್ಯ ಮತ್ತು ಪೌಷ್ಟಿಕಾಂಶ ಸಲಹೆಗಾರ ಯಾಸೀರ್ ಅರಾಫತ್ ತಿಳಿಸಿದ್ದಾರೆ.