ಪ್ರತಿಯೊಬ್ಬರೂ ಕೂಡ ಯಾವಾಗಲೂ ಸುಂದರವಾಗಿ ಕಾಣಲು ಬಯಸುತ್ತಾರೆ. ತಮ್ಮ ಸೌಂದರ್ಯವನ್ನು ಕಾಪಾಡಲು ಕೆಲವೊಂದಿಷ್ಟು ಟಿಪ್ಸ್ಗಳನ್ನು ಅನುಸರಿಸುತ್ತಾರೆ. ಅವರಲ್ಲಿ ಕೆಲವರಂತೂ ನೈಸರ್ಗಿವಾಗಿ ಸುಂದರವಾಗಿದ್ದೇನೆ ಎಂದು ತ್ವಚೆಯ ಕಾಳಜಿಯನ್ನು ಮರೆತು ಬಿಡುತ್ತಾರೆ. ಈ ರೀತಿ ದೇಹದ ಸೌಂದರ್ಯ ನಿರ್ಲಕ್ಷಿಸುವ ತಪ್ಪು ಸಹಜವಾಗಿ ಎಲ್ಲರಿಂದಲೂ ಆಗುತ್ತಿರುತ್ತದೆ. ಹಾಗಾದರೆ ಇಂತಹ ತಪ್ಪುಗಳನ್ನು ಹೇಗೆ ಸರಿಪಡಿಸಿಕೊಳ್ಳುವುದು ಎಂಬ ಚಿಂತೆಯೊಂದು ನಿಮ್ಮನ್ನು ಕಾಡುತ್ತಿದೆಯಾ? ಹಾಗಾದರೆ ಇಲ್ಲಿದೆ ನೋಡಿ ಪರಿಹಾರ.
'ಮುಖದ ಹೊಳಪನ್ನು ಹೆಚ್ಚಿಸಿ..'ಪ್ರತಿದಿನ ಬೆಳಗ್ಗೆ ಸುಂದರವಾಗಿ ಕಾಣಲು ಹಿಂದಿನ ದಿನ ರಾತ್ರಿ ಮಲಗುವ ಮುನ್ನ ಮುಖದ ಬಗ್ಗೆ ಕಾಳಜಿ ವಹಿಸಲು ಕೆಲವೊಂದು ಟಿಪ್ಸ್ಗಳನ್ನು ರೂಢಿಸಿಕೊಳ್ಳಿ. ನಿದ್ದೆ ಮಾಡುವುದಕ್ಕೂ ಮುನ್ನ ನಿಮ್ಮ ಮುಖದಲ್ಲಿನ ಮೇಕಪ್ ಅನ್ನು ಸಂಪೂರ್ಣವಾಗಿ ತೊಳೆಯಿರಿ. ಬಳಿಕ ಚರ್ಮವನ್ನು ಕ್ಲೆನ್ಸರ್ನಿಂದ ಸ್ವಚ್ಛಗೊಳಿಸಿ. ರಾತ್ರಿ ಕ್ರೀಮ್ ಅನ್ನು ಅನ್ವಯಿಸಲು ಮರೆಯಬೇಡಿ. ಇದು ನಿಮ್ಮ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ. ಹಾಗೆಂದು ಕ್ರೀಮ್ ಅನ್ನು ಹೆಚ್ಚು ಪ್ರಮಾಣದಲ್ಲಿ ಅನ್ವಯಿಸಲು ಹೋಗಬೇಡಿ. ಅನಗತ್ಯ ತ್ವಚೆ ಸಮಸ್ಯೆಗಳನ್ನು ಉಂಟುಮಾಡುವ ಸಾಧ್ಯತೆಯಿರುತ್ತದೆ.
'ತುಟಿಯನ್ನು ಸುಂದರವಾಗಿ ಇಟ್ಟುಕೊಳ್ಳಿ..'ತುಟಿಗಳ ಮೇಲಿನ ಚರ್ಮವು ತುಂಬಾ ಸೂಕ್ಷ್ಮವಾಗಿರುತ್ತದೆ. ಹಾಗಾಗಿ ಅದರ ಬಗ್ಗೆ ಹೆಚ್ಚು ಗಮನಹರಿಸಿ. ರಾತ್ರಿ ಮಲಗುವ ಮುನ್ನ ನೀರಿನಲ್ಲಿ ನೆನೆಸಿದ ಹತ್ತಿಯಿಂದ ತುಟಿಯನ್ನು ಸ್ವಚ್ಛಗೊಳಿಸಿಕೊಳ್ಳಿ. ಬಳಿಕ ತುಟಿಗಳಿಗೆ ಎಣ್ಣೆಯನ್ನು ಹಚ್ಚಿ ಮತ್ತು ಐದರಿಂದ ಹತ್ತು ನಿಮಿಷಗಳ ಕಾಲ ಮೃದುವಾಗಿ ಮಸಾಜ್ ಮಾಡಿ. ಹೀಗೆ ಮಾಡುವುದರಿಂದ ತುಟಿಗಳ ರಕ್ತ ಸಂಚಾರ ಚೆನ್ನಾಗಿ ಆಗುತ್ತದೆ. ಅಲ್ಲದೇ ಆರೋಗ್ಯಕರ ಮತ್ತು ಸುಂದರವನ್ನಾಗಿ ಮಾಡುತ್ತದೆ.
ಇದನ್ನೂ ಓದಿ:ಮನೆಮದ್ದು: ಮುಖದಲ್ಲಿ ಮೊಡವೆ ಕಡಿಮೆಯಾಗಲು ಟೊಮೊಟೊ ಸಹಕಾರಿ
'ಕಣ್ಣುಗಳ ಅಂದ ಕಾಪಾಡಿಕೊಳ್ಳಿ..'ಕಣ್ಣುಗಳ ಸೌಂದರ್ಯ ಹೆಚ್ಚಿಸಲು ಅನೇಕರು ಐಲೈನರ್, ಐಶ್ಯಾಡೋ ಅಥವಾ ಮಸ್ಕರಾವನ್ನು ಬಳಸುತ್ತಾರೆ. ಆದರೆ ಮುಖದ ಮೇಕಪ್ ಅನ್ನು ತೆಗೆಯುವಾಗ ಇವುಗಳನ್ನು ತೆಗೆಯಲು ಮರೆತುಬಿಡುತ್ತಾರೆ. ಇದರಿಂದ ಮರುದಿನ ಬೆಳಗ್ಗೆ ನಿಮ್ಮ ಕಣ್ಣುಗಳು ಹೆಚ್ಚು ದಣಿದಂತಾಗಿರುತ್ತದೆ. ಮೇಲಾಗಿ ಕಣ್ಣಿನ ಸುತ್ತ ಕಪ್ಪು ವರ್ತುಲಗಳು ಬರುವ ಸಾಧ್ಯತೆಯೂ ಇರುತ್ತದೆ. ಹೀಗಾಗಿ ಕಣ್ಣಿನ ಮೇಕಪ್ ಅನ್ನು ಸಂಪೂರ್ಣವಾಗಿ ತೆಗೆದು ನಂತರ ಮಲಗುವುದು ಉತ್ತಮ. ಕಣ್ಣಿಗೆ ಬೀಳುವ ಧೂಳಿನಿಂದ ರಕ್ಷಿಸಲು ಐ ಡ್ರಾಪ್ಸ್ ಬಳಸಬಹುದು. ಇವುಗಳ ಜೊತೆಗೆ ಕಣ್ಣಿನ ರೆಪ್ಪೆ ಮತ್ತು ಹುಬ್ಬುಗಳಿಗೆ ಸ್ವಲ್ಪ ಪ್ರಮಾಣದ ಎಣ್ಣೆಯನ್ನು ಹಚ್ಚಿ ಮೃದುವಾಗಿ ಮಸಾಜ್ ಮಾಡಬೇಕು. ಇದು ನಿಮ್ಮ ಕಣ್ಣಿನ ಅಂದವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗುತ್ತದೆ.
'ಕೂದಲಿನ ಸೌಂದರ್ಯ ಮರೆಯಬೇಡಿ..'ಕೆಲವೊಮ್ಮೆ ಕೂದಲನ್ನು ಚೆನ್ನಾಗಿ ಬಾಚಿಕೊಳ್ಳುತ್ತೇವೆ. ಇಲ್ಲದಿದ್ದರೆ ಹಾಗೆಯೇ ಫ್ರೀ ಬಿಡುತ್ತೇವೆ. ಮಲಗುವ ಮುನ್ನವೂ ಕೂದಲಿನ ಬಗ್ಗೆ ಯೋಚಿಸುವುದಿಲ್ಲ. ಹೀಗೆ ಮಾಡುವುದರಿಂದ ಕೂದಲ ಬುಡಕ್ಕೆ ಸರಿಯಾಗಿ ರಕ್ತ ಸಂಚಾರ ಆಗುವುದಿಲ್ಲ. ಅದಲ್ಲದೇ ಕೂದಲನ್ನು ಹಾಗೆಯೇ ಬಿಟ್ಟು ಮಲಗುವುದರಿಂದ ಹೆಚ್ಚು ಸಿಕ್ಕು ಕಟ್ಟುತ್ತದೆ. ಅದಕ್ಕಾಗಿ ನಿದ್ದೆ ಮಾಡುವುದಕ್ಕಿಂತ ಮೊದಲು ನಿಮ್ಮ ಕೂದಲನ್ನು ಒರಟಾದ ಹಲ್ಲಿನ ಬಾಚಣಿಗೆಯಿಂದ ಬಾಚಿಕೊಳ್ಳಿ. ನಂತರ ಸಡಿಲವಾದ ಗಂಟು ಹಾಕಿ ಅದರ ಮೇಲೆ ರಬ್ಬರ್ ಹಾಕಿ. ಹೀಗೆ ಮಾಡಿದರೆ ತಲೆಯ ಮೇಲಿನ ಬೆವರು ಕೂಡ ಒಣಗುತ್ತದೆ. ಜೊತೆಗೆ ತಲೆಹೊಟ್ಟು ಸಮಸ್ಯೆಗಳು ದೂರವಾಗುತ್ತದೆ.
ನೀವು ಸೌಂದರ್ಯದ ಬಗ್ಗೆ ಎಷ್ಟು ಕಾಳಜಿ ಮಾಡಿದರೂ ಅದು ಕಡಿಮೆಯೇ. ರಾತ್ರಿಯಲ್ಲಿ ಚರ್ಮಕ್ಕೆ ಉತ್ತಮ ಗುಣಮಟ್ಟದ ಮಾಯಿಶ್ಚರೈಸ್ ಅನ್ನು ಅನ್ವಯಿಸುವುದು ಅತಿ ಅತ್ಯಗತ್ಯ. ಹೀಗೆ ಮಾಡುವುದರಿಂದ ನಿಮ್ಮ ಸ್ಕಿನ್ ಬ್ಯೂಟಿ ಶಾಶ್ವತವಾಗಿ ಉಳಿಯುತ್ತದೆ. ಅದಲ್ಲದೇ ನಾವು ಮಲಗುವ ಭಂಗಿಯು ಸೌಂದರ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಹಾಸಿಗೆಯನ್ನು ಅಪ್ಪಿ ಮಲಗುವುದರಿಂದ ಮುಖದ ಚರ್ಮವು ದಿಂಬಿಗೆ ಉಜ್ಜುವ ಸಾಧ್ಯತೆಯಿದೆ ಮತ್ತು ಫೇಸ್ ತುಂಬಾ ಗೆರೆಗಳು ಬೀಳುತ್ತವೆ. ಹೀಗಾಗಿ ನೀವು ಹಾಸಿಗೆಗೆ ಬೆನ್ನು ಹಾಕಿ ಮಲಗುವುದು ಉತ್ತಮ.
ಇದನ್ನೂ ಓದಿ:ಮೈಗ್ರೇನ್ಗೆ ಕಾರಣ ಏನೆಂದು ಕಂಡು ಹಿಡಿದ ಸಂಶೋಧಕರು.. ಹೊಸ ಔಷಧವೂ ಸಿಕ್ಕಿದೆಯಂತೆ!