ಪ್ರಯಾಣ ಎಂಬುದು ವಿಶ್ರಾಂತಿಯ ಜೊತೆಗೆ ಅನೇಕರ ಜೀವನಶೈಲಿಯೂ ಆಗಿದೆ. ಅನೇಕ ಜನರು ಸದಾ ಪ್ರಯಾಣದ ಆಸೆಯನ್ನು ಹೊಂದಿರುತ್ತಾರೆ. ಅದರಲ್ಲೂ ಅಂತಾರಾಷ್ಟ್ರೀಯ ಪ್ರಯಾಣ ಎಂಬುದು ಸಂಭ್ರಮ, ಖುಷಿಯ ಜೊತೆಗೆ ಸಾಹಸವೂ ಆಗಿರುತ್ತದೆ. ಆದರೆ, ಈ ಪ್ರಯಾಣ ಮಾಡುವ ಮೊದಲು ನಿರ್ಧರಿತವಾಗುವ ಅಂಶವೇ ಬಜೆಟ್.
ಯಾವುದೇ ಟ್ರಿಪ್ ಹೊರಡುವ ಮುನ್ನ ಈ ಬಜೆಟ್ ಲೆಕ್ಕಾಚಾರ ಸಾಮಾನ್ಯ. ಅದರಲ್ಲೂ ನೀವು ಅಂತಾರಾಷ್ಟ್ರೀಯ ಪ್ರಯಾಣಕ್ಕೆ ಮುಂದಾಗುತ್ತೀರಾ ಎಂದರೆ ಬಜೆಟ್ ಸ್ನೇಹಿಯಾಗಿರುವ ಈ ದೇಶಗಳಿಗೆ ಭೇಟಿ ಅವಶ್ಯವಾಗಿ ಭೇಟಿ ನೀಡಬಹುದು ಎನ್ನುತ್ತಾರೆ ಸೌಥರ್ನ್ ಟ್ರವೆಲ್ ಎಂಡಿ ಅಲಪಟಿ ಕೃಷ್ಣ ಮೋಹನ್.
ವಿಯೆಟ್ನಾಂ: ಅತಿ ಹೆಚ್ಚು ಚಿರಪರಿಚಿತವಾಗಿರುವ ಈ ದೇಶ ನಿಮ್ಮ ಬಜೆಟ್ ಸ್ನೇಹಿ ಸ್ಥಳ ಕೂಡ. ನೈಸರ್ಗಿಕ ಸೌಂದರ್ಯ, ಸಾಂಸ್ಕೃತಿಕ ಶ್ರೀಮಂತಿಕೆ, ಇತಿಹಾಸ ಹೊಂದಿರುವ ದೇಶದ ಪ್ರಯಾಣ ನಿಮಗೆ ಖಂಡಿತವಾಗಿಯೂ ಖುಷಿ ನೀಡುತ್ತದೆ.
ಪ್ರವಾಸಿಗರು ಪ್ರಯಾಣದ ವೇಳೆ ಸೈಟ್ ಸೀಯಿಂಗ್, ಯಾಚ್ ಅಥವಾ ಬೋಟ್ ಕ್ರೂಸ್, ಸ್ಥಳೀಯ ಮಾರುಕಟ್ಟೆ, ಸಾಂಸ್ಕೃತಿಕ ಪ್ರವಾಸ, ದ್ವೀಪ ಪ್ರವಾಸ, ವನ್ಯಜೀವಿ ಪ್ರವಾಸ ಮಾಡಬಹುದು. ವಿಯೆಟ್ನಾಂನಲ್ಲಿ ಭೇಟಿ ನೀಡುವ ಸ್ಥಳಗಳಲ್ಲಿ ಪ್ರಮುಖವಾದವು ಹೊನಾಯಿ, ಹೊಚಿ, ಮಿನ್ಹಾ ಸಿಟಿ, ಸಪ, ನತ್ರಂಗ್, ಮೆಕೊಂಗ್, ಡೆಲ್ಟಾ ಮತ್ತು ಯುನೆಸ್ಕೊ ಪಾರಂಪರಿಕ ತಾಣವಾದ ಹಾ ಲೊಂಗ್ ಬೇ. ಇನ್ನು ಮೂರು ಹಗಲು 4 ರಾತ್ರಿಯ ಈ ದೇಶದ ಪ್ರಯಾಣ ಕೇವಲ 25 ಸಾವಿರ ರೂ.ದಲ್ಲೇ ಮುಗಿಸಬಹುದಾಗಿದೆ.
ಮಲೇಷಿಯಾ: ಆಗ್ನೇಯ ಏಷ್ಯಾದ ಈ ದೇಶ ಮಲಯ ಪರ್ಯಾಯ ದ್ವೀಪ ಮತ್ತು ಬೊರ್ನೊ ದ್ವೀಪವನ್ನು ಒಳಗೊಂಡಿದೆ. ಹೆಸರುವಾಸಿಯಾದ ಬೀಚ್, ಮಳೆಕಾಡು, ಮಲಾಯ್, ಚೀನಾ, ಭಾರತ ಮತ್ತು ಯುರೋಪಿನ್ ಪ್ರಭಾವವನ್ನು ಈ ದೇಶದಲ್ಲಿ ಕಾಣಬಹುದಾಗಿದೆ. ಮೂರರಿಂದ ನಾಲ್ಕು ದಿನದ ಪ್ರವಾಸ 12 ಸಾವಿರ ರೂ.ಯಲ್ಲಿ ಮುಗಿದು ಹೋಗಲಿದೆ.
ಇಲ್ಲಿನ ತಮನ್ ನೆಗಾರ ನ್ಯಾಷನಲ್ ಪಾರ್ಕ್ನಲ್ಲಿ ಟ್ರಕ್ಕಿಂಗ್ ಮಾಡಬಹುದಾಗಿದೆ. ಕೋಟಾ ಭರುನಲ್ಲಿ ಸಾಂಸ್ಕೃತಿಕತೆ, ಸೆಪಿಲೊಕ್ನಲ್ಲಿ ಒರಾಂಗುಟನ್ನರು ಕಾಣಬಹುದಾಗಿದೆ. ಮಲೇಷಿಯಾದ ಸೌಂದರ್ಯ ಅನ್ವೇಷಿಸಬಹುದು.
ಥಾಯ್ಲೆಂಡ್:ಪ್ರವಾಸಿಗರ ಅತ್ಯಂತ ಅಚ್ಚುಮೆಚ್ಚಿನ ತಾಣದಲ್ಲಿ ಥಾಯ್ಲೆಂಡ್ ಪ್ರಮುಖವಾದದ್ದು. ಅತ್ಯಂತ ದುಬಾರಿಯಾದರೂ ಇಲ್ಲಿನ ಸ್ಥಳೀಯ ಪ್ರವಾಸೋದ್ಯಮ ನಿಮ್ಮ ಬಜೆಟ್ಗೆ ಸರಿ ಹೊಂದಲಿದೆ. ನೈಟ್ ಸ್ಕೈಲೈನ್, ಸ್ಪಾ, ಕ್ಲಬಿಂಗ್, ಈಜು, ಕೈಗೆಟುಕುವ ಬೀದಿ ಬದಿ ತಿಂಡಿಗಳು, ಬ್ಯಾಂಕಾಕ್ ಮತ್ತು ಪಟ್ಟಾಯಂ ಹೈ ಸ್ಟ್ರೀಟ್ ಮಾರ್ಕೆಟ್ ಎಂಜಾಯ್ ಮಾಡಬಹುದು. ಬ್ಯಾಂಕಾಕ್ ಪಾರ್ಟಿ, ಪಟ್ಟಾಯಂ ನೈಟ್ಲೈಫ್ , ಚಿಂಗ್ ರೈ ಗಿರಿಶಿಖರ ಏರಲು ಸೂಕ್ತವಾಗಿದೆ. ಮೂರು-ನಾಲ್ಕು ದಿನದ ಪ್ರವಾಸ 12 ಸಾವಿರದಲ್ಲಿ ಮುಗಿದು ಹೋಗಲಿದೆ.
ಬಾಲಿ: ಇಂಡೋನೇಷ್ಯಾದ ದ್ವೀಪ ಇದಾಗಿದ್ದು ಜನ, ಆಹಾರ, ನಿಸರ್ಗ, ನೀಲಿ ನೀರು, ಪರಿಸರದಿಂದ ಮಿಶ್ರಿತವಾಗಿದ್ದು, ಪ್ರವಾಸಿಗರನ್ನು ಸೆಳೆಯುತ್ತದೆ. ಕೆಲವೇ ಗಂಟೆಗಳಲ್ಲಿ ಬೀಚ್ನಿಂದ ಮಳೆಕಾಡು ಅದರಿಂದ ಬೆಟ್ಟ ಹೀಗೆ ಸುತ್ತಬಹುದಾಗಿದೆ.
ಇಲ್ಲಿನ ನೈಟ್ಲೈಫ್ ಅನೇಕರನ್ನು ಸೆಳೆಯುತ್ತದೆ. ಬಾಲಿ ಪ್ರಮುಖ ಸ್ಥಳಗಳ ಹೊರತಾಗಿ ಬೇರೆ ಕಡೆ ಹೋದಾಗ ಆಹಾರದ ಬಗ್ಗೆ ಜಾಗ್ರತೆ ಇರಲಿ. ನಾಲ್ಕು ದಿನದ ಈ ಪ್ರವಾಸಕ್ಕೆ 20 ಸಾವಿರ ರೂ ವ್ಯಯವಾಗಲಿದೆ.
ಬಾಕು:ತೈಲಚಾಲಿತ ಆಧುನಿಕತೆ ಮತ್ತು ಏಷ್ಯನ್ ಸಂಪ್ರದಾಯಗಳ ಅತ್ಯಾಕರ್ಷಕ ಸಮ್ಮಿಲನವಾಗಿದೆ ಈ ಸ್ಥಳ. ಆಧುನಿಕ ಗಗನಚುಂಬಿ ಕಟ್ಟಡಗಳು ನಗರದ ಐತಿಹಾಸಿಕ ಮಸೀದಿಗಳು ಮತ್ತು ಇತರ ಸ್ಥಳೀಯ ವೈಶಿಷ್ಟ್ಯಗಳೊಂದಿಗೆ ಇದು ಕೂಡಿದೆ. ಹಳೆಯ ಮತ್ತು ಸಮಕಾಲೀನ ವಾಸ್ತುಶಿಲ್ಪದ ಕಟ್ಟಡಗಳು ಅದ್ಭುತ ಅನುಭವ ನೀಡಲಿದೆ. 18 ಸಾವಿರ ರೂ.ಯಲ್ಲಿ ನಾಲ್ಕು ದಿನದ ಪ್ರವಾಸವನ್ನು ನೀವು ಮುಗಿಸಬಹುದಾಗಿದೆ.
ಇದನ್ನೂ ಓದಿ: ಕೇರಳದ 22 ವರ್ಷದ ಯುವತಿಯಿಂದ ಸೈಕಲ್ನಲ್ಲಿ 22 ದೇಶಗಳ ಪರ್ಯಟನೆ ಶುರು!